ದೈವ 
ಸ್ಯಾಂಡಲ್‌ವುಡ್

Daiva Review - ದುಷ್ಟ ಶಕ್ತಿಗಳ ಸಂಹಾರಕ್ಕೆ ದೈವ ನರ್ತನ

Daiva Review - ನಾಯಕ ಹಳ್ಳಿಯಿಂದ ನಗರಕ್ಕೆ ಬಂದು ಶ್ರೀಮಂತನಾಗಿ ಗೆದ್ದು ಬೀಗುವ ಹಾಗೇ ನಾಯಕ ನಗರದಿಂದ ಹಳ್ಳಿಗೆ ಹೋಗಿ ಸಾಮಾಜಿಕ ಸಂದೇಶ ಸಾರುವ ಕಥೆಗಳು ಸಾಮಾನ್ಯ. ಜೈರಾಜ್​ ನಟಿಸಿ, ನಿರ್ದೇಶಿಸಿರುವ "ದೈವ' ಅದೇ ರೀತಿಯ ಕಥೆ ಅಂತ ಅನ್ನಿಸಿದರೂ, ಅದನ್ನು ಅವರು ಪ್ರೆಸೆಂಟ್​ ಮಾಡುವ ರೀತಿ ವಿಭಿನ್ನವಾಗಿದೆ. ಕಮರ್ಷಿಯಲ್​ ಸ್ಪರ್ಶದೊಂದಿಗೆ ಭಕ್ತಿಪ್ರಧಾನ ಕಥೆ ಹೇಳುವ ಪ್ರಯತ್ನ "ದೈವ'. ಎಲ್ಲ ಸಮಯದಲ್ಲೂ ನಾವೇನು ಅಂದುಕೊಳ್ಳುತ್ತೇವೋ ಅದೇ ಆಗುತ್ತದೆ ಅಂತೇನಲ್ಲ. ವಿಧಿ ನಿಶ್ಚಿತ ಏನಿರುತ್ತದೋ, ಅದೇ ನಡೆಯುವುದು.
ಕಾಳೇಗೌಡ (ಬಲರಾಜವಾಡಿ) ಮತ್ತವನ ಮಗ ರುದ್ರ (ಅರುಣ್​) ಅಟ್ಟಹಾಸದಿಂದ ನಲುಗುವ ಹಳ್ಳಿಗರನ್ನು, ಈ ದುಷ್ಟರ ಕಪಿಮುಷ್ಠಿಯಿಂದ ದೇವ (ಜೈರಾಜ್​) ಹೇಗೆ ರಸುತ್ತಾನೆ ಎಂಬುದೇ "ದೈವ' ಒನ್​ಲೈನ್​. ಅದರಲ್ಲಿ ಆ್ಯಕ್ಷನ್​, ಗ್ರಾಮೀಣ ಸೊಗಡು, ಮರ್ಡರ್​ ಮಿಸ್ಟರಿ, ಸಸ್ಪೆನ್ಸ್​ ಥ್ರಿಲ್ಲರ್​, ರೊಮ್ಯಾನ್ಸ್​... ಹೀಗೆ ಹಲವು ವಿಷಯಗಳ ಜತೆ ದೈವಿಕ ಅಂಶಗಳನ್ನು ಸೇರಿಸಿ, ಕಮರ್ಷಿಯಲ್​ ಸಿನಿಮಾ ಆಗಿ ನಿರೂಪಿಸಿದ್ದಾರೆ ಜೈರಾಜ್​. ರಿಷಬ್​ ಶೆಟ್ಟಿ "ಕಾಂತಾರ' ಸರಣಿಯಲ್ಲಿ ಕರಾವಳಿ ದೈವಗಳ ಕುರಿತ ಕಥೆ ಹೇಳಿದ್ದರು. "ದೈವ'ದಲ್ಲಿ ಯುವ ನಿರ್ದೇಶಕ ಜೈರಾಜ್​ ಮಂಡ್ಯ ಭಾಗದ ಜೋಗಿ ಪರಂಪರೆ ಕುರಿತ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿಯೇ ಈ ಚಿತ್ರದಲ್ಲಿ ಗ್ರಾಮೀಣ ಆಚರಣೆಗಳು, ನಂಬಿಕೆಗಳ ಕುರಿತ ಹಲವು ಅಂಶಗಳಿವೆ. ಅದ್ಭುತ ಅನ್ನಿಸದಿದ್ದರೂ ಜೈರಾಜ್​ ಚೊಚ್ಚಲ ಬಾರಿಗೆ ಒಂದೊಳ್ಳೆ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕನ ಜವಾಬ್ದಾರಿ ನಿಭಾಯಿಸುವುದರ ಜತೆಗೆ ಜೈರಾಜ್​ ಎರಡು ಲುಕ್​ಗಳಲ್ಲಿ ಮಿಂಚಿದ್ದಾರೆ. ನೀತು ರಾಯ್​, ಸುರಭಿ, ಬಲರಾಜವಾಡಿ, ನಿಶ್ಚಿತಾ, ಮಂಜುರಾಜ್​ ಸೂರ್ಯ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.