ಜಗನ್ಮಾತೆ ಅಕ್ಕಮಹಾದೇವಿ ಚಿತ್ರದ ಪೋಸ್ಟರ್
- ಅಕ್ಕ ಮಹಾದೇವಿಯ ಜೀವನ ಚರಿತ್ರೆ ಜಗನ್ಮಾತೆ ಅಕ್ಕಮಹಾದೇವಿ
- ಚಿತ್ರದಲ್ಲಿ ಬಳಸಲಾಗಿರುವ ಅಕ್ಕನ ವಚನಗಳೇ ಪ್ರಮುಖ ಆಕರ್ಷಣೆ
- ಅಕ್ಕಮಹಾದೇವಿ ಕುರಿತ ಜನಜನಿತವಾಗಿರುವ ಕಥೆಗೆ ಇಲ್ಲಿ ದೃಶ್ಯರೂಪ
ಚಿತ್ರ: ಜಗನ್ಮಾತೆ ಅಕ್ಕಮಹಾದೇವಿ
ತಾರಾಗಣ: ಸುಲಕ್ಷ ಕೈರಾ, ಸುಚೇಂದ್ರ ಪ್ರಸಾದ್, ವಿಷ್ಣುಕಾಂತ್, ತಬಲಾ ನಾಣಿ ಮತ್ತಿತರರು
ಬೆಂಗಳೂರು: ವಚನಗಾರ್ತಿ, ಶರಣೆ ಅಕ್ಕಮಹಾದೇವಿಯ ಜೀವನ ವೃತ್ತಾಂತ ಕುರಿತು ಕನ್ನಡದಲ್ಲಿ ಈಗಾಗಲೇ ಕೆಲ ಸಿನಿಮಾಗಳು ಬಂದಿವೆ. ಸದ್ಯ ತೆರೆಕಂಡ ‘ಜಗನ್ಮಾತೆ ಅಕ್ಕಮಹಾದೇವಿ’ ಅದಕ್ಕೊಂದು ಸೇರ್ಪಡೆಯಷ್ಟೇ. ಉಡುತಡಿಯಲ್ಲಿ ಜನಿಸಿದ ಮಹಾದೇವಿ, ಕಲ್ಯಾಣ ವಚನಕಾರರ ಪ್ರಭಾವಕ್ಕೆ ಒಳಪಟ್ಟು ಲೌಕಿಕ ಜೀವನ ತೊರೆದು ಶರಣೆಯಾದ ಕಥೆಯು ಹಾಸುಹೊಕ್ಕಾಗಿದೆ. ಅದನ್ನೇ ನಿರ್ದೇಶಕ ವಿಷ್ಣುಕಾಂತ್ ‘ಜಗನ್ಮಾತೆ ಅಕ್ಕಮಹಾದೇವಿ’ ಚಿತ್ರದಲ್ಲಿ ಪುನರಾವರ್ತಿಸಿದ್ದಾರೆ.
ಉಡುತಡಿಯ ನಿರ್ಮಲ ಶೆಟ್ಟಿ ಹಾಗೂ ಸುಮತಿ ದಂಪತಿಗೆ ಹುಟ್ಟುವ ಮಹಾದೇವಿಗೆ (ಸುಲಕ್ಷಾ) ಅದೇ ಊರಿನ ಜಂಗಮರ ಮೂಲಕ ಬಸವಣ್ಣನವರ ವಚನಗಳ ಪರಿಚಯವಾಗುತ್ತವೆ. ಗಂಭೀರವಾಗಿ ಅಧ್ಯಯನ ಮಾಡಿ ಆಕೆ ಮುಂದೆ ಸ್ವತಃ ವಚನಗಳನ್ನು ರಚಿಸುತ್ತಾಳೆ. ಅಧ್ಯಾತ್ಮಿಕ ಹಾದಿಯಲ್ಲಿರುವ ಮಹಾದೇವಿಗೆ ಮನೆಯಲ್ಲಿ ಮದುವೆಯಾಗುವಂತೆ ಒತ್ತಡ ಹಾಕಿದರೂ, ಅದನ್ನು ತಿರಸ್ಕರಿಸುತ್ತಾಳೆ. ಇದೇ ವೇಳೆ ಮಹಾದೇವಿ ಮೇಲೆ ಕೌಶಿಕ ಮಹಾರಾಜನ ಕಣ್ಣು ಬೀಳುತ್ತದೆ. ಆತನಿಂದ ದೂರವಾಗಿ ಮಹಾದೇವಿ ಕಲ್ಯಾಣದ ಹಾದಿ ಹಿಡಿದು ಮುಂದೆ ‘ಅಕ್ಕ ಮಹಾದೇವಿ’ ಆಗುವ ಕಥೆಯನ್ನೇ ಚಿತ್ರದಲ್ಲಿ ನಿರೂಪಿಸಲಾಗಿದೆ.
ಅಕ್ಕಮಹಾದೇವಿ ಕುರಿತು ಜನಜನಿತವಾಗಿರುವ ಕಥೆಗೆ ಇಲ್ಲಿ ದೃಶ್ಯರೂಪ ನೀಡಲಾಗಿದೆ. ಐತಿಹಾಸಿಕ ಚಿತ್ರವಾಗಿರುವ ಕಾರಣ ಸೆಟ್‌ಗಳು ಮತ್ತು ಮೇಕಿಂಗ್‌ಗೆ ಮತ್ತಷ್ಟು ಒತ್ತು ನೀಡುವ ಅವಶ್ಯವಿತ್ತು. ಕೆಲ ದೃಶ್ಯಗಳು ಕೃತಕ ಎನಿಸುತ್ತವೆ. ಮೊದಲರ್ಧದಲ್ಲಿ ತೋರಿಸುವ ಹಳ್ಳಿಯ ವಾತವರಣ ಇಷ್ಟವಾಗುತ್ತದೆ. ಇನ್ನು ಅಕ್ಕಮಹಾದೇವಿ ವಚನಗಳನ್ನು ಬಳಸಿಕೊಂಡು, ಅದಕ್ಕೆ ಸಂಗೀತ ಸಂಯೋಜಿಸಲಾಗಿದ್ದು, ಕೇಳಲು ಇಂಪಾಗಿವೆ. ಸಂಗೀತವೇ ಈ ಚಿತ್ರದ ಹೈಲೈಟ್. ಅಕ್ಕಮಹಾದೇವಿ ಪಾತ್ರದಲ್ಲಿರುವ ಸುಲಕ್ಷ ಕೈರಾ ಪಾತ್ರಕ್ಕೆ ಒಪ್ಪಿದ್ದಾರೆ. ಚೈತನ್ಯಪೂರ್ಣವಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಹಲವು ಪಾತ್ರಗಳಿದ್ದು, ಎಲ್ಲವೂ ಕೆಲ ದೃಶ್ಯಗಳಿಗೆ ಮಾತ್ರ ಸೀಮಿತವಾಗಿವೆ. ಇನ್ನು 12ನೇ ಶತಮಾನದ ಮಹಾಶರಣೆ ಅಕ್ಕಮಹಾದೇವಿ ಕುರಿತು ಕೇಳಿರುವ ಕಥೆಯನ್ನೇ ದೃಶ್ಯರೂಪದಲ್ಲಿ ಕಣ್ತುಂಬಿಕೊಳ್ಳಬೇಕಾದರೆ ಈ ಸಿನಿಮಾ ನೋಡಬಹುದು.