ಜಿಯಾ ಜತೆ ಸುನಿ 
ಸ್ಯಾಂಡಲ್‌ವುಡ್

ಜಿಯಾ ಬಂದಳು ದಾರಿ ಬಿಡಿ, ತೆರೆಯ ಮೇಲೆ ಮೊದಲ ಬಾರಿಗೆ ಹ್ಯೂಮನಾಯ್ಡ್​ ರೋಬಾಟ್!

ನಿರ್ದೇಶಕ ಸಿಂಪಲ್​ ಸುನಿ, ಹೆಸರಿನಲ್ಲಿ "ಸಿಂಪಲ್​' ಅಂತಿದ್ದರೂ ಅವರು ನಿರ್ದೇಶಿಸುವ ಸಿನಿಮಾಗಳಲ್ಲಿನ ವಿಷಯ ಕಾಂಪ್ಲಿಕೇಟೆಡ್​ ಆಗಿರುತ್ತವೆ. ಅದಕ್ಕೆ "ಸಿಂಪಲ್ಲಾಗ್​ ಒಂದ್​ ಲವ್​ಸ್ಟೋರಿ'ಯಿಂದ ಹಿಡಿದು "ಬಹುಪರಾಕ್​', "ಚಮಕ್​', "ಅವತಾರ ಪುರುಷ', "ಗತವೈಭವ'ದಂತಹ ಚಿತ್ರಗಳೇ ಉತ್ತಮ ಉದಾಹರಣೆ. ಇಂತಹ ಸುನಿ "ಲಂಬೋದರ 2.0' ಮೂಲಕ ಮತ್ತೊಂದು ಸವಾಲಿನ ಕಥೆಯೊಂದಿಗೆ ವಾಪಸ್ಸಾಗಿದ್ದಾರೆ.

ಬೆಂಗಳೂರು:

ನಿರ್ದೇಶಕ ಸಿಂಪಲ್​ ಸುನಿ, ಹೆಸರಿನಲ್ಲಿ "ಸಿಂಪಲ್​' ಅಂತಿದ್ದರೂ ಅವರು ನಿರ್ದೇಶಿಸುವ ಸಿನಿಮಾಗಳಲ್ಲಿನ ವಿಷಯ ಕಾಂಪ್ಲಿಕೇಟೆಡ್​ ಆಗಿರುತ್ತವೆ. ಅದಕ್ಕೆ "ಸಿಂಪಲ್ಲಾಗ್​ ಒಂದ್​ ಲವ್​ಸ್ಟೋರಿ'ಯಿಂದ ಹಿಡಿದು "ಬಹುಪರಾಕ್​', "ಚಮಕ್​', "ಅವತಾರ ಪುರುಷ', "ಗತವೈಭವ'ದಂತಹ ಚಿತ್ರಗಳೇ ಉತ್ತಮ ಉದಾಹರಣೆ. ಇಂತಹ ಸುನಿ "ಲಂಬೋದರ 2.0' ಮೂಲಕ ಮತ್ತೊಂದು ಸವಾಲಿನ ಕಥೆಯೊಂದಿಗೆ ವಾಪಸ್ಸಾಗಿದ್ದಾರೆ. ಇದೊಂದು ಹೈ ಕಾನ್ಸೆಪ್ಟ್​ ಸೋಷಿಯಲ್​ ಸೈಂಟಿಫಿಕ್​ ಥ್ರಿಲ್ಲರ್​ ಜಾನರ್​ ಚಿತ್ರವಾಗಿದ್ದು ಉದ್ಯಮಿ ಅನಿಲ್​ ಶೆಟ್ಟಿ ನಾಯಕನಾಗಿ, ಬಾಲಿವುಡ್​ನ ಸಾಚಿ ಬಿಂದ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗೂ ಕುಣಾಲ್​ ಕಪೂರ್​, ಮೇನಾ ಗಾಂವ್ಕರ್​ ಜತೆಗೆ ಹ್ಯೂಮನಾಯ್ಡ್​ ರೋಬಾಟ್​ ಜಿಯಾ ಮತ್ತು ಎಐನಿಂದ (ಕೃತಕ ಬುದ್ಧಿಮತ್ತೆ) ಸೃಷ್ಟಿಯಾದ ಶ್ರೀಕೃಷ್ಣನೂ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅದ್ಧೂರಿಯಾಗಿ ಸಿನಿಮಾ ಮೂಡಿಬರುತ್ತಿದೆ. ಬೆಂಗಳೂರಿನ ಹಿನ್ನೆಲೆಯಲ್ಲಿ ಸಾಗುವ "ಲಂಬೋದರ 2.0' ಕಥೆ ಇಂದಿನ ಆನ್​ಲೈನ್​ ಬದುಕಿನ ಸಂಕೀರ್ಣ ಮುಖಗಳನ್ನು ಅನಾವರಣಗೊಳಿಸುವ ಕಥಾಹಂದರ ಹೊಂದಿದೆ. ಸದಾ ಸ್ಕ್ರೀನ್​ನಲ್ಲಿ ಮುಳುಗಿರುವ, ಎಲ್ಲರೊಂದಿಗೆ ಸಂಪರ್ಕದಲ್ಲಿದ್ದರೂ ಒಂಟಿತನ ಅನುಭವಿಸುವ ಹಾಗೂ ಡಿಜಿಟಲ್​ ಕಣ್ಗಾವಲಿನಲ್ಲಿ ಸಿಲುಕಿರುವ ಇವತ್ತಿನ ಡಿಜಿಟಲ್​ ಜಗತ್ತು ಹಾಗೂ ಜೀವನದಲ್ಲಿನ ಸಂತೋಷ ಎಷ್ಟು ಮುಖ್ಯ ಎಂಬುದರ ಸುತ್ತ ಕಥೆ ಸಾಗುತ್ತದೆ.

ಅನಿಲ್, ಸಾಚಿ ಮತ್ತು ಜಿಯಾ

ಜೈ ಹೋ ಜಿಯಾ

ಸಾಮಾನ್ಯ ಸಿಜಿ ಗ್ರಾಫಿಕ್ಸ್​ ತಂತ್ರಜ್ಞಾನವನ್ನು ಬದಿಗೊತ್ತಿ, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನೈಜ ಭೌತಿಕ ಹ್ಯೂಮನಾಯ್ಡ್​ ರೋಬಾಟ್​ ನಟಿಸಿರುವುದು ಈ ಸಿನಿಮಾದ ಹೆಗ್ಗಳಿಕೆ. ಇದೇ 13ರಂದು ಚಿತ್ರ ರಿಲೀಸ್​ ಆಗಲಿದ್ದು, ಪ್ರಚಾರದ ಅಂಗವಾಗಿ ಇತ್ತೀಚೆಗಷ್ಟೆ ಚಿತ್ರತಂಡ ಜಿಯಾ ರೋಬಾಟ್​ಅನ್ನೂ ಸುದ್ದಿಗೋಷ್ಠಿಗೆ ಕರೆತಂದಿತ್ತು. ವಿಶೇಷ ಅಂದರೆ ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಜಿಯಾ ಉತ್ತರ ನೀಡಿದಳು. ಬೆಂಗಳೂರಿನ ತಂತ್ರಜ್ಞಾನ ಸಂಸ್ಥೆಯಾದ ಮಚಾನಿ ರೋಬಾಟಿಕ್ಸ್​ ಈ ಹ್ಯೂಮನಾಯ್ಡ್​ ರೋಬಾಟನ್ನು ಅಭಿವೃದ್ಧಿಪಡಿಸಿದ್ದು, ಕೋಪ, ನಗು, ಆಶ್ಚರ್ಯ, ಬೇಸರ ಸೇರಿ ಬರೋಬ್ಬರಿ 100ಕ್ಕೂ ಹೆಚ್ಚು ಬಗೆಯ ಮುಖಭಾವಗಳನ್ನು ಮಾಡುವ ಸಾಮರ್ಥ್ಯ ಇದಕ್ಕಿದೆ. "ಯಾವುದೇ ಡಿಜಿಟಲ್​ ಅಥವಾ ಪ್ರಾಸ್ಥೆಟಿಕ್ಸ್​ ಮೇಕಪ್​ನ ಹಂಗಿಲ್ಲದೇ ಜಿಯಾ ನೇರವಾಗಿ ಚಿತ್ರೀಕರಣದ ಸೆಟ್​ನಲ್ಲಿ, ರಿಯಲ್​ ಟೈಮ್​ನಲ್ಲೇ ಪಾತ್ರ ನಿರ್ವಹಿಸಿರುವುದು ಕೂಡ ಭಾರತೀಯ ಚಿತ್ರರಂಗದ ಮಟ್ಟಿಗೆ ಒಂದು ಮೈಲಿಗಲ್ಲಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ರೋಬಾಟಿಕ್ಸ್​ ತಂತ್ರಜ್ಞಾನವು ನಟನಾ ಕ್ಷೇತ್ರವನ್ನು ಹೇಗೆ ಬದಲಿಸಬಲ್ಲದು ಎಂಬುದಕ್ಕೆ ಈ ಪ್ರಯೋಗ ಸಾಯಾಗಿದೆ' ಎನ್ನುತ್ತಾರೆ ನಿರ್ದೇಶಕ ಸುನಿ.

ಲಂಬೋದರ 2.0 ಪೋಸ್ಟರ್