2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳು
- ಇಡೀ ಜಗತ್ತು 2026ರ ಹೊಸ ವರ್ಷವನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ
- 2025ನೇ ವರ್ಷವನ್ನು ನೆನೆದು ಅನೇಕರು ಭಾವುಕ ವಿದಾಯ ಹೇಳಲು ಸಜ್ಜಾಗಿದ್ದಾರೆ
- ಈ ವರ್ಷ ಮರೆಯಲಾರದಂತಹ ಎಷ್ಟೋ ಕ್ಷಣಗಳಲ್ಲಿ ಸಿನಿಮಾ ಕ್ಷೇತ್ರವೂ ಒಂದು
- 2025ರಲ್ಲಿ ಯಾವೆಲ್ಲ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದವು ಎಂಬುದನ್ನು ತಿಳಿಯೋಣ
ಬೆಂಗಳೂರು: ಇಡೀ ಜಗತ್ತು 2026ರ ಹೊಸ ವರ್ಷವನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಅದೇ ಸಮಯದಲ್ಲಿ ನಮ್ಮಿಂದ ದೂರವಾಗಿ ಇತಿಹಾಸ ಪುಟ ಸೇರಲಿರುವ 2025ನೇ ವರ್ಷವನ್ನು ನೆನೆದು ಅನೇಕರು ಭಾವುಕ ವಿದಾಯ ಹೇಳಲು ಸಜ್ಜಾಗಿದ್ದಾರೆ. ಈ ವರ್ಷ ಸಾಕಷ್ಟು ಘಟನೆಗಳು ನಡೆದಿವೆ. ಪ್ರತಿ ಕ್ಷೇತ್ರದಲ್ಲೂ ಮರೆಯುವಂತಹ ಹಾಗೂ ಮರೆಯಲಾರದಂತಹ ಎಷ್ಟೋ ಕ್ಷಣಗಳು ಘಟಿಸಿವೆ. ಅದರಲ್ಲಿ ಸಿನಿಮಾ ಕ್ಷೇತ್ರವೂ ಒಂದು. ಪ್ರತಿವರ್ಷ ಸಾವಿರಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ, ಕೆಲವೇ ಕೆಲವು ಸಿನಿಮಾಗಳು ಮಾತ್ರ ನಮ್ಮ ಮನಸ್ಸಿನಲ್ಲಿ ಉಳಿಯುತ್ತವೆ. ಅದಕ್ಕೆ ಕಾರಣ ಆ ಚಿತ್ರದ ಯಶಸ್ಸು ಮತ್ತು ಬಾಕ್ಸ್ಆಫೀಸ್ನಲ್ಲಿ ಆ ಸಿನಿಮಾ ಬರೆಯುವ ದಾಖಲೆ. ಹೀಗಾಗಿ 2026ನೇ ಹೊಸ ವರ್ಷಕ್ಕೆ ಕಾಲಿಡುವ ಮುನ್ನ 2025ರಲ್ಲಿ ಯಾವೆಲ್ಲ ಸಿನಿಮಾಗಳು ನಮ್ಮ ಮನಸ್ಸಿನಲ್ಲಿ ಅಚ್ಚು ಹೊತ್ತಿದವು ಮತ್ತು ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದವು ( Highest Grossing Films Of 2025) ಎಂಬುದನ್ನು ನಾವೀಗ ಮೆಲಕು ಹಾಕೋಣ.
ಕಾಂತಾರಾ: ಎ ಲೆಜೆಂಡ್ - ಚಾಪ್ಟರ್ 1
ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾಗಳ ಪಟ್ಟಿಯಲ್ಲಿ ನಮ್ಮ ಕನ್ನಡ ಸಿನಿಮಾ ಮೊದಲ ಸ್ಥಾನದಲ್ಲಿ ಇರುವುದು ನಿಜಕ್ಕೂ ಖುಷಿಯ ಸಂಗತಿ. ಹೌದು, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಕಾಂತಾರ ಚಾಪ್ಟರ್ 1 ಸಿನಿಮಾ ಈ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾ ಆಗಿದೆ. ಅಕ್ಟೋಬರ್ 2ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 851 ರಿಂದ 853 ಕೋಟಿ (ವರ್ಲ್ಡ್ ವೈಡ್ ಗ್ರಾಸ್) ರೂಪಾಯಿ ಗಳಿಸಿತು. ಈ ಮೂಲಕ ಅನೇಕ ದಾಖಲೆಗಳನ್ನು ತನ್ನದಾಗಿಸಿಕೊಂಡಿತು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಂತೂ ಹೊಸ ಅಲೆಯನ್ನೇ ಈ ಸಿನಿಮಾ ಸೃಷ್ಟಿ ಮಾಡಿತು. ರಿಷಬ್ ನಿರ್ದೇಶಿಸಿದ ಈ ಸಿನಿಮಾಗೆ ಹೊಂಬಾಳೆ ಫಿಲ್ಸ್ಮ್ ಬಂಡವಾಳ ಹೂಡಿತು.
ಛಾವಾ (ಹಿಂದಿ)
ನಟ ವಿಕ್ಕಿ ಕುಶಾಲ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸಿರುವ ಐತಿಹಾಸಿಕ ಛಾವಾ ಸಿನಿಮಾ 2025, ಫೆಬ್ರವರಿ 14ರಂದು ಬಿಡುಗಡೆಯಾಯಿತು. ಬಾಕ್ಸ್ಆಫೀಸ್ನಲ್ಲಿ ಬಿರುಗಾಳಿ ಸೃಷ್ಟಿಸಿದ ಈ ಸಿನಿಮಾ ಸುಮಾರು 808 ರಿಂದ 809 ಕೋಟಿ ರೂಪಾಯಿ ಗಳಿಕೆ ಮಾಡಿತು.
ಧುರಂಧರ್ (ಹಿಂದಿ)
ಇತ್ತೀಚೆಗಷ್ಟೇ ತೆರೆಕಂಡ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಇನ್ನೂ ಥಿಯೇಟರ್‌ಗಳಲ್ಲಿ ಓಡುತ್ತಿದೆ. ಡಿಸೆಂಬರ್ 5ರಂದು ಬಿಡುಗಡೆಯಾದ ಈ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಥಿಯೇಟರ್‌ಗಳಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಈವರೆಗೂ 790 ರಿಂದ 795 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಗಳಿಕೆ ಇಲ್ಲಿಗೆ ನಿಂತಿಲ್ಲ. ಈಗಲೂ ಧುರಂಧರ್ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಅದರ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ವರ್ಷ ಅತಿ ಹೆಚ್ಚು ಗಳಿಸಿದ ಸಿನಿಮಾ ಎಂಬ ಹೆಗ್ಗಳಿಗೆಕೆ ಪಾತ್ರವಾಗುತ್ತ ಧುರಂಧರ್ ಸಿನಿಮಾ ದಾಪುಗಾಲು ಇಟ್ಟಿದೆ.
ಸೈಯಾರಾ (ಹಿಂದಿ)
ಬಾಲಿವುಡ್ನಲ್ಲಿ ಇದೇ ವರ್ಷ ಜುಲೈ 18ರಂದು ರಿಲೀಸ್ ಆದ ಸೈಯಾರಾ ಸಿನಿಮಾ ಸುಮಾರು 570 ರಿಂದ 575 ಕೋಟಿ ಗಳಿಕೆ ಮಾಡಿತು. ಈ ಸಿನಿಮಾ ಹೊಸಬರ ಸಿನಿಮಾ ಆಗಿದ್ದರೂ ಕೂಡ ಚಿತ್ರಕತೆ ಎಲ್ಲರಿಗೆ ಇಷ್ಟವಾದ ಹಿನ್ನೆಲೆಯಲ್ಲಿ ಬಾಕ್ಸ್ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡಿದ್ದು, ಅತಿ ಹೆಚ್ಚು ಗಳಿಕೆ ಮಾಡಿದ ಪಟ್ಟಿಗೆ ಈ ಸಿನಿಮಾ ಕೂಡ ಸೇರಿಕೊಂಡಿದೆ.
ಕೂಲಿ (ತಮಿಳು)
ಸೂಪರ್ಸ್ಟಾರ್ ರಜಿನಿಕಾಂತ್ ಹಾಗೂ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ಜುಗಲ್ಬಂಧಿಯಲ್ಲಿ ಮೂಡಿಬಂದ ಕೂಲಿ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು. ಈ ಸಿನಿಮಾ ಸುಮಾರು 514 ರಿಂದ 675 ಕೋಟಿ ರೂಪಾಯಿಯನ್ನು ಗಳಿಕೆ ಮಾಡಿತು.
ಉಳಿದಂತೆ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಅಡಿಯಲ್ಲಿ ಮೂಡಿಬಂದ ಅನಿಮೇಟೆಡ್ ಮಹಾವತಾರ ನರಸಿಂಹ ಸಿನಿಮಾ 325 ಕೋಟಿ ರೂ. ಗಳಿಸಿದರೆ, ನಟ ದುಲ್ಕರ್ ಸಲ್ಮಾನ್ ನಿರ್ಮಾಣದ ಹಾಗೂ ನಟಿ ಪ್ರಿಯದರ್ಶಿನಿ ಅಭಿನಯದ ಲೋಕಹ್ ಚಾಪ್ಟರ್ 1 ಸಿನಿಮ ಸುಮಾರು 303-304 ಕೋಟಿ ರೂ. ಗಳಿಕೆ ಮಾಡಿತು.
ಕನ್ನಡ ಚಿತ್ರರಂಗ
ಕನ್ನಡ ಚಿತ್ರರಂಗದ ವಿಚಾರಕ್ಕೆ ಬಂದರೆ, ಸ್ಯಾಂಡಲ್ವುಡ್ನಲ್ಲಿ ಈ ವರ್ಷ ಐತಿಹಾಸಿಕ ದಾಖಲೆಗಳು ನಿರ್ಮಾಣವಾಗಿವೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಸುಮಾರು 850 ರಿಂದ 900 ಕೋಟಿ ಗಳಿಸಿ ಈ ವರ್ಷದ ಭಾರತದ ಅತಿ ಹೆಚ್ಚು ಗಳಿಕೆಯ ಸಿನಿಮಾಗಳಲ್ಲಿ ಒಂದಾಗಿದೆ. ಮಹಾವತಾರ ನರಸಿಂಹ, ಅನಿಮೇಟೆಡ್ ಸಿನಿಮಾವಾಗಿದ್ದರೂ, ಸುಮಾರು 325 ಕೋಟಿ ಗಳಿಸಿ ದೊಡ್ಡ ಯಶಸ್ಸು ಕಂಡಿದೆ. ಇನ್ನು ಕಡಿಮೆ ಬಜೆಟ್‌ನಲ್ಲಿ ಮೂಡಿಬಂದ ಸು ಫ್ರಮ್ ಸೋ ಸಿನಿಮಾ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ನಲ್ಲಿ ಬಿರುಗಾಳಿ ಸೃಷ್ಟಿಸಿತು. ರಾಜ್ ಬಿ ಶೆಟ್ಟಿ ನಟನೆಯ ಈ ಸಿನಿಮಾ ಕೇವಲ 5 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿ 125 ಕೋಟಿ ರೂ. ಗಳಿಸುವ ಮೂಲಕ 'ಬ್ಲಾಕ್‌ಬಸ್ಟರ್' ಎನಿಸಿಕೊಂಡಿದೆ.
ಗಮನಿಸಿ
ಅಂದಹಾಗೆ, ಈ ಮೇಲಿನ ಮಾಹಿತಿ 2025, ಡಿಸೆಂಬರ್ 22ರವರೆಗಿನ ಅಂದಾಜು ವಿಶ್ವವ್ಯಾಪಿ ಗ್ರಾಸ್ ಕಲೆಕ್ಷನ್ ಆಧರಿಸಿದೆ. ಈ ಸುದ್ದಿಯು IMDb, Sacnilk, Wikipedia ಮತ್ತು ಇತರ ಬಾಕ್ಸ್ ಆಫೀಸ್ ಟ್ರ್ಯಾಕರ್‌ಗಳನ್ನು ಆಧರಿಸಿದೆ. ಇನ್ನೂ ಕೆಲ ಚಿತ್ರಗಳು ಥಿಯೇಟರ್‌ಗಳಲ್ಲಿ ಓಡುತ್ತಿರುವುದರಿಂದ ಈ ಅಂಕಿ-ಅಂಶಗಳು ಬದಲಾವಣೆಗೆ ಒಳಪಡಬಹುದು, (ಏಜೆನ್ಸೀಸ್).