ತಾರಾಗಣ: ಹೇಮಂತ್, ಗೋಪಿಕಾ, ಅಯಾನಾ, ಅಚ್ಯುತ್ ಕುಮಾರ್, ಬಾಲು ನಾಗೇಂದ್ರ, ರಮೇಶ್ ಇಂದಿರಾ, ಕಾರ್ತಿಕ್ ಮಹೇಶ್, ರಾಘು ಶಿವಮೊಗ್ಗ ಶಿವಮೊಗ್ಗ ಮತ್ತಿತರರು
ಆತ ಅರ್ಜುನ್ (ಹೇಮಂತ್). ತಂದೆ ಇನ್ಸ್ಪೆಕ್ಟರ್ ಶಕ್ತಿಪ್ರಸಾದ್ಗೆ (ಅಚ್ಯುತ್) ಮಗ ಐಪಿಎಸ್ ಅಧಿಕಾರಿ ಆಗಬೇಕು ಅಂತ ಕನಸು. ಹೊರಗೆ ಹುಡುಗಿ ಜತೆ ಕಂಡ ಮಗನಿಗೆ "ಹುಡುಗಿ ಜತೆ ಓಡಾಡುತ್ತಿದ್ದೀಯಾ, ಖರ್ಚಿಗೆ ಕಾಸು ಬೇಕಾಗುತ್ತೆ. ತಗೋ' ಅಂತ ಜೇಬಲ್ಲಿ ಹಣವಿಡುವಷ್ಟು ನಂಬಿಕೆ. ಮತ್ತೊಂದೆಡೆ ಅಂತಾರಾಷ್ಟ್ರೀಯ ಡ್ರಗ್ಸ್ ಕಿಂಗ್ಪಿನ್ ಬಾಬಿ ಬರೋಬ್ಬರಿ $500 ಕೋಟಿ ಮೌಲ್ಯದ ಡ್ರಗ್ಸ್ ಸರಬರಾಜು ಮಾಡಲು ವಿದೇಶದಿಂದ ಮಂಗಳೂರು ಬಂದರಿಗೆ ತರಿಸಿರುತ್ತಾನೆ. ಇನ್ನೊಂದೆಡೆ ಮಂಗಲ್ (ರಮೇಶ್) ಪುತ್ರರಾದ ಕಾಳಿ (ಬಾಲು) ಮತ್ತು ವಾಜಿ ಜತೆ ಸುಪಾರಿ ಕಿಲ್ಲಿಂಗ್ನೇ ವೃತ್ತಿ ಮಾಡಿಕೊಂಡಿರುತ್ತಾನೆ. ಐಪಿಎಸ್ ಅಧಿಕಾರಿಯಾಗಲು ಹೊರಟ ಅರ್ಜುನ್, ಡ್ರಗ್ಸ್ ಸಾಮ್ರಾಜ್ಯ ವಿಸ್ತರಿಸಲು ಪಣತೊಟ್ಟ ಬಾಬಿ ಮತ್ತು ಸುಪಾರಿ ಕಿಲ್ಲರ್ಗಳು ಮುಖಾಮುಖಿಯಾಗುತ್ತಾರೆ. ಅಲ್ಲಿಂದ ಈ ಮೂರು ಗುಂಪಿನ "ಆಲ್ಫಾ'ಗಳ ನಡುವೆ ಇಲಿ- ಬೆಕ್ಕಿನಾಟ ಶುರುವಾಗುತ್ತದೆ. ಕಥೆ ಸಾಗಿದಂತೆ ಹಲವು ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. ಒಳ್ಳೆಯವರು ಯಾರು? ಕೆಟ್ಟವರು ಯಾರು? ನಮ್ಮವರು ಯಾರು? ವೈರಿಗಳು ಯಾರು? ಅರ್ಜುನ್ ಡ್ರಗ್ಸ್ ಮತ್ತು ಸುಪಾರಿ ಕಿಲ್ಲರ್ಗಳ ಚಕ್ರವ್ಯೂಹ ಭೇಧಿಸುತ್ತಾನಾ? "ಆಲ್ಫಾ' ನೋಡಿ.
"ಗೀತಾ' ಚಿತ್ರದಲ್ಲಿ 1980ರ ದಶಕದ ಕಥೆ, "ಹೊಯ್ಸಳ'ದಲ್ಲಿ ಉತ್ತರ ಕರ್ನಾಟಕದ ಸ್ಟೋರಿ ಹೇಳಿದ್ದ ನಿರ್ದೇಶಕ ವಿಜಯ್ ನಾಗೇಂದ್ರ ಇದೀಗ "ಆಲ್ಫಾ'ದಲ್ಲಿ ಡ್ರಗ್ಸ್ ಜಾಲ ಭೇಧಿಸಿದ್ದಾರೆ. ಜತೆಗೆ ಪ್ರೀತಿ, ಗೆಳೆತನ, ಅಪ್ಪ-ಮಗನ ಬಾಂಧವ್ಯ, ಭರ್ಜರಿ ಆ್ಯಕ್ಷನ್, ಹಾಡು ಕುಣಿತ, ಥ್ರಿಲ್ಲಿಂಗ್ ಟ್ವಿಸ್ಟ್ಗಳು... ಹೀಗೆ ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ವಿಷಯಗಳೂ ಚಿತ್ರದಲ್ಲಿವೆ. ಅನೂಪ್ ಸೀಳಿನ್ ಸಂಗೀತ, ಕಾರ್ತಿಕ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿವೆ. ಮಾಸ್ ಡೈಲಾಗ್ಗಳಿಗೆ ಹೆಸರುವಾಸಿಯಾದ ಮಾಸ್ತಿ ಉಪ್ಪಾರಹಳ್ಳಿ ಸಂಭಾಷಣೆ ಚಿತ್ರದ ಹೈಲೈಟ್ಗಳಲ್ಲೊಂದು. ನಾಯಕ ಹೇಮಂತ್ ಕುಮಾರ್ಗೆ ಇದು ಮೊದಲ ಚಿತ್ರ ಅಂತನ್ನಿಸುವುದಿಲ್ಲ. ಅಷ್ಟು ತಯಾರಿಯೊಂದಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಆ್ಯಕ್ಷನ್ಗಳಲ್ಲಿ ಅಬ್ಬರಿಸಿರುವ ಅವರು ಸಿಕ್ಸ್ ಪ್ಯಾಕ್ನಲ್ಲೂ ಮಿಂಚಿದ್ದಾರೆ. ಗೋಪಿಕಾ ಸುರೇಶ್ ತಮ್ಮಷ್ಟೇ, ಅಯಾನಾ ಅವರಷ್ಟೇ ಅಂದವಾಗಿ ನಟಿಸಿದ್ದಾರೆ. ಕಾರ್ತಿಕ್ ಮಹೇಶ್ ಮತ್ತು ಅಚ್ಯುತ್ ಪಾತ್ರಗಳು ಪ್ರಮುಖ ಟ್ವಿಸ್ಟ್ ನೀಡುತ್ತವೆ. ರಮೇಶ್ ಇಂದಿರ, ಬಾಲು ನಾಗೇಂದ್ರ ಜುಗಲ್ಬಂದಿ ತೆರೆಯ ಮೇಲೆ ನೋಡುವುದೇ ಚಂದ. ಮೊದಲರ್ಧ ವೇಗವಾಗಿ ಕಥೆ ಹೇಳಿರುವ ನಿರ್ದೇಶಕ ವಿಜಯ್, ದ್ವೀತಿಯಾರ್ಧದಲ್ಲಿ ನಿಧಾನವೇ ಪ್ರಧಾನ ಎಂದಿರುವಂತಿದೆ. ಆದರೂ, "ಆಲ್ಫಾ' ಒಂದೊಳ್ಳೆ ಆ್ಯಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ನೋಡಿದ ಅನುಭವವಂತೂ ನೀಡುತ್ತದೆ.