ಮಗ್ಗಿ ಪುಸ್ತಕ 
ಸ್ಯಾಂಡಲ್‌ವುಡ್

Maggi Pusthaka Review - ನೋವು-ನಲಿವುಗಳ, ಕೂಡಿ-ಕಳೆಯುವ ಮಗ್ಗಿಪುಸ್ತಕ

ಚಿತ್ರ: ಮಗ್ಗಿ ಪುಸ್ತಕ
ನಿರ್ದೇಶನ: ಹರಿವರಾಸನಂ
ತಾರಾಗಣ: ರಂಜನ್​, ರನ್ವಿ, ರಕ್ಷಾ, ರಮಾನಂದ್​, ಮೇಶ್ರೀ, ಗಿರಿಜಾ ಲೋಕೇಶ್​, ವರ್ಧನ್​, ಶೋಭರಾಜ್​, ಕೃಷ್ಣ ಮಹೇಶ್​ ಮತ್ತಿತರರು.
ಕಾದಂಬರಿಯಾಧಾರಿತ ಚಿತ್ರಗಳು ಅಪರೂಪವಾಗಿರುವಾಗಲೇ ನಿರ್ದೇಶಕ ಹರಿವರಾಸನಂ ತಾವೇ ಬರೆದಿದ್ದ ನೈಜ ಟನೆಯಾಧಾರಿತ "ಅವನಿ' ಕಾದಂಬರಿಗೆ ಇದೀಗ "ಮಗ್ಗಿ ಪುಸ್ತಕ' ಸಿನಿಮಾ ರೂಪ ನೀಡಿದ್ದಾರೆ. ಇದು ಕರೊನಾ ಸಮಯದಲ್ಲಿ ನಡೆಯುವ ಮಧ್ಯಮ ವರ್ಗದ ಕುಟುಂಬದ ಸಂಕಷ್ಟದ ಕಥೆಯಾದ ಕಾರಣ, ಬಹುತೇಕ ಎಲ್ಲರಿಗೂ ಒಂದಲ್ಲ ಒಂದು ರೀತಿ ಕನೆಕ್ಟ್​ ಆಗುತ್ತದೆ. ಈಗ್ಗೆ 22 ವರ್ಷಗಳ ಹಿಂದೆಯೇ ಬಿಡುಗಡೆಯಾಗಿದ್ದ "ಚಪ್ಪಾಳೆ' ಚಿತ್ರದ "ಐಲು ಐಲು ಐಲು ಕೈಲಿದ್ರೆ ಮೊಬೈಲು' ಹಾಡು ಈಗಲೂ ಆಗಾಗ ಸದ್ದು ಮಾಡುತ್ತಿರುತ್ತದೆ. ಆ ಐಲು ಈಗ ಎಷ್ಟರ ಮಟ್ಟಿಗೆ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದರ ಸುತ್ತ "ಮಗ್ಗಿಪುಸ್ತಕ' ಸಾಗುತ್ತದೆ.
ಎಲ್ಲ ವಯೋಮಾನದವರಲ್ಲೂ ಮೊಬೈಲ್​ ಬಳಕೆ ಹೆಚ್ಚಾಗಲು ಕಾರಣ ಕರೊನಾ ಲಾಕ್​ಡೌನ್​. ಮೊದಲು ದೊಡ್ಡವರ ಬಳಿ ಮಾತ್ರ ಇದ್ದ ಜಂಗಮವಾಣಿಗಳು, ಕರೊನಾ ಸಮಯದಲ್ಲಿ ಆನ್​ಲೈನ್​ ಕ್ಲಾಸ್​ಗಳ ಅಬ್ಬರದಿಂದಾಗಿ ಮನೆ ಮಕ್ಕಳ ಕೈಸೇರಿವೆ. ಈಗ ಕರೊನಾ ಇಲ್ಲದಿದ್ದರೂ, ಲಾಕ್​ಡೌನ್​ ಆಗದಿದ್ದರೂ ಈ ಮೊಬೈಲ್​ ಗೀಳು ಮಾತ್ರ ಮುಂದುವರಿದಿದೆ. ಈ ಗೀಳಿನ ಜೆನ್​ಜೀ ಮಕ್ಕಳಿಗೆ ಮಗ್ಗಿ ಪುಸ್ತಕದ ಮಹತ್ವ ಸಾರುವ ಪ್ರಯತ್ನ ನಿರ್ದೇಶಕ ಹರಿವರಾಸನಂ ಅವರದು. ಹಾಗಂತ ಇದು ಮಕ್ಕಳ ಚಿತ್ರವಲ್ಲ. ಜನ ತಮ್ಮ ಜೀವನದಲ್ಲಿ ಯಾವುದನ್ನು ಕಳೆಯಬೇಕು, ಏನನ್ನು ಕೂಡಬೇಕು, ಯಾವುದನ್ನು ಭಾಗಿಸಬೇಕು ಹಾಗೂ ಏನನ್ನು ಗುಣಿಸಬೇಕು ಎಂಬುದರ ಕುರಿತು ಅರಿವು ಮೂಡಿಸುವ ಪ್ರಯತ್ನವಿದು. ಕರೊನಾ ಸಮಯದಲ್ಲಿ ಬಡ ಕುಟುಂಬದ ಕಥೆಯ ಜತೆಗೆ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆಗಳು, ರಾಜಕಾರಣ, ಸೆಂಟಿಮೆಂಟ್​, ಗೆಳೆತನದ ಜತೆಗೆ ಕೆಲ ಟ್ವಿಸ್ಟ್​ಗಳು ಚಿತ್ರದಲ್ಲಿದ್ದು, ಕುತೂಹಲ ಮೂಡಿಸುತ್ತವೆ. ರನ್ವಿ, ರಕ್ಷಾ ಗೌಡ, ಮೇಶ್ರೀ, ರಂಜನ್​, ಕೃಷ್ಣ ಮಹೇಶ್​, ವರ್ಧನ್​ ಸೇರಿ ಎಲ್ಲ ಕಲಾವಿದರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಿನಿಮಾ ಒಮ್ಮೆ ನೋಡಲಡ್ಡಿಯಿಲ್ಲ.