- ಬಹು ನಿರೀಕ್ಷಿತ ಕೊರಗಜ್ಜ ಚಿತ್ರದ ಗುಳಿಗಾ...ಗುಳಿಗಾ ಹಾಡು ಎಲ್ಲೆಡೆ ವೈರಲ್
- ಈ ಹಾಡಿನಿಂದ ಗುಳಿಗಾ ದೈವ ಕ್ರೋಧ ಗೊಂಡಿರಬಹುದೇ ಅಥವಾ ದೈವಕ್ಕೆ ಅಪಚಾರಾಗಿರಬಹುದೇ?
- ಜ್ಯೋತಿಷಿ ವಿಧ್ವಾನ್ ವರುಣ್ ಭಟ್ ಬಳಿ ಪ್ರಶ್ನೆ ಇಟ್ಟಾಗ ಕಂಡುಬಂದ ಸತ್ಯವಿದು
- ಈ ಹಾಡಿನಿಂದ ಕೊರಗಜ್ಜನಿಗೂ ಸಂತೋಷವಿದೆ, ದೇವರ ಆಶಿರ್ವಾದವೂ ಇದೆ
ಬೆಂಗಳೂರು: ಇತ್ತೀಚೆಗೆ ಜೀ಼ ಮ್ಯೂಸಿಕ್ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಬಿಡುಗಡೆ ಗೊಳಿಸಿದ "ಕೊರಗಜ್ಜ" ( Koragajja ) ಚಿತ್ರದ, ಜಾವೆದ್ ಆಲಿ ಮತ್ತು ಸುಧೀರ್ ಅತ್ತಾವರ್ ಹಾಡಿರುವ, ಗೋಪಿ ಸುಂದರ್ ಸಂಗೀತ ಮತ್ತು ಸುಧೀರ್ ಅತ್ತಾವರ್ ಸಾಹಿತ್ಯದ ಗುಳಿಗಾ...ಗುಳಿಗಾ...ಹಾಡಿನ ಅಬ್ಬರ ದೇಶದೆಲ್ಲೆಡೆ ಹಬ್ಬಿ ಹವಾ ಎಬ್ಬಿಸುತ್ತಿದೆ.
ಹಾಡು ಎಲ್ಲಡೆ ವೈರಲ್ ಆಗುತ್ತಿದ್ದಂತೆ ಭಯಂಕರ ಉಗ್ರ ರೂಪದ ಕಾರಣಿಕದ "ಗುಳಿಗದೈವ" ಈ ಹಾಡಿನಿಂದ ಕ್ರೋಧ ಗೊಂಡಿರಬಹುದೇ ಅಥವಾ ದೈವಕ್ಕೆ ಅಪಚಾರಾಗಿರಬಹುದೇ ಎಂಬ ಸಂಶಯದಿಂದ ಇಂದು ನಿರ್ದೇಶಕ ಸುಧೀರ್ ಅತ್ತಾವರ್ ಅವರು ಕೇರಳದ ತ್ರಿಶೂರ್ನಲ್ಲಿರುವ ಮಂಗಳೂರು ಮೂಲದ ಪ್ರಸಿದ್ಧ ಜ್ಯೋತಿಷಿ ವಿಧ್ವಾನ್ ವರುಣ್ ಭಟ್ ಅವರಲ್ಲಿ ಪ್ರಶ್ನೆ ಇಟ್ಟು ಕೇಳಿದಾಗ, ಚಿಂತನ-ಮಂತನ ನಡೆಸಿ, ವೃಶ್ಚಿಕ ರಾಶಿ ಒಂಭತ್ತರಲ್ಲಿ ಗುರು, ಐದರಲ್ಲಿ ಗುಳಿಗ, ಶನಿ ಎಲ್ಲಾ ಇರುವುದರಿಂದ...ಗುಳಿಗನಿಗೆ ಸಂಪೂರ್ಣ ತ್ರಪ್ತಿ, ಸಂತೋಷ ಎಲ್ಲಾ ಇದೆ. ಕೊರಗಜ್ಜನಿಗೂ ಸಂತೋಷವಿದೆ, ದೇವರ ಆಶಿರ್ವಾದವೂ ಇದೆ ಎಂಬ ವಿಚಾರ ತಿಳಿದುಬಂದಿದೆ.
ಗುಳಿಗಾ ..ಗುಳಿಗಾ ಹಾಡಿನ ಬಗ್ಗೆ
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಕೂಡಾ ಜೋರಾಗಿ ಸಾಗುತ್ತಿದೆ. ಇನ್ನು ಕೆಲವು ವಿಕೃತ ಮನಸ್ಥಿತಿಯವರಂತೂ ನಿರ್ದೇಶಕರಿಗೆ ಸೇರಿ ಇಡೀ ಚಿತ್ರತಂಡಕ್ಕೆ ಉರಿ ಶಾಪ ಹಾಕುವ ಕಮೆಂಟ್ಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಗುಳಿಗ ದೈವವೇ ರಕ್ತ ಕಾರಿ ಸಾಯಿಸುತ್ತದೆ ಎಂಬಿತ್ಯಾದಿ ವಿಕೃತ ಮನಸ್ಸಿನಿಂದ, ಮತ್ಸರದಿಂದ ಕಮೆಂಟ್ಗಳನ್ನು ಹಾಕುತ್ತಿದ್ದಾರೆ.
ಪ್ರಶ್ನೆಯ ಮೂಲಕ ಜ್ಯೋತಿಷ್ಯದಲ್ಲಿ ಗುಳಿಗನಿಗೆ ತೃಪ್ತಿ ಇರುವ ವಿಚಾರ ಕೇಳಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹಾಗೂ ಸಕ್ಸಸ್ ಫಿಲ್ಮ್ಸ್ನ ವಿದ್ಯಾಧರ್ ಶೆಟ್ಟಿ ಹರ್ಷಗೊಂಡಿದ್ದಾರೆ. ಜನರು ಅನಗತ್ಯವಾದ ಕೆಟ್ಟ ಕಮೆಂಟ್ ಹಾಕಿ ಕಿರಿಕಿರಿ ಮಾಡದೆ, ಚಿತ್ರದ ಯಶಸ್ಸಿಗೆ ಸಹಕರಿಸಬೇಕೆಂದು ನಿರ್ಮಾಪಕರು ಕೂಡ ಮನವಿ ಮಾಡಿದ್ದಾರೆ.
ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ "ಕೊರಗಜ್ಜ" ಚಿತ್ರ ಜನವರಿ ಬಿಡುಗಡೆಗೊಳ್ಳುವ ನಿಟ್ಟಿನಲ್ಲಿ ಪ್ರಮೋಷನ್ ಕೆಲಸ ಭರದಿಂದ ಸಾಗುತ್ತಿದೆ.