ಬೆಂಗಳೂರು: ಕನ್ನಡದ ‘ಘಟಶ್ರಾದ್ಧ;, ‘ದ್ವೀಪ’, ‘ತಬರನ ಕಥೆ’ ಸೇರಿ ಹಲವು ಕ್ಲಾಸಿಕ್ ಸಿನಿಮಾಗಳ ರೂವಾರಿ, 14 ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿ ವೃತ್ತಿ ಬದುಕಿನ 50ರ ಸಂಭ್ರಮದಲ್ಲಿದ್ದಾರೆ. ‘ಘಟಶ್ರಾದ್ಧ’ (1977) ಮೂಲಕ ಆರಂಭಿಸಿದ ಸಿನಿಮಾ ಜೀವನ ಇಂದಿಗೂ ಮುಂದುವರಿದಿದೆ. ಕನ್ನಡ ಚಿತ್ರರಂಗಕ್ಕೆ ಅವರ ಸುದೀರ್ಘ 50 ವರ್ಷಗಳ ಕೊಡುಗೆಯನ್ನು ಪರಿಗಣಿಸಿ ಕೃಷ್ಣೇಗೌಡ ನೇತೃತ್ವದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಡಿ.3ರಿಂದ 5ರವರೆಗೆ ವಿಶೇಷ ಅಭಿನಂದನಾ ಸಮಾರಂಭ ಆಯೋಜಿಸಿದೆ. ಮೂರು ದಿನಗಳ ಕಾಲ ನಡೆಯುವ ಈ ವಿಶೇಷ ಸಮಾರಂಭದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ಸಿನಿಮಾಗಳ ಪ್ರದರ್ಶನ, ಮಾಸ್ಟರ್ ಕ್ಲಾಸ್, ಸಂವಾದ ಹಾಗೂ ವಿಚಾರ ಸಂಕಿರಣ ನಡೆಯಲಿದೆ. ಜನಪ್ರಿಯ ನಿರ್ದೇಶಕರಾದ ಮಣಿರತ್ನಂ, ಅನುರಾಗ್ ಕಶ್ಯಪ್, ಆಸ್ಕರ್ ಪ್ರಶಸ್ತಿ ವಿಜೇತ ಸೌಂಡ್ ಡಿಸೈನರ್ ರಸೂಲ್ ಪೂಕುಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅವರ ಜತೆಗೆ ಜಯಂತ್ ಕಾಯ್ಕಿಣಿ, ಹಂಸಲೇಖ, ಅಶೋಕ್ ಕಶ್ಯಪ್, ಸತ್ಯ ಹೆಗಡೆ, ಸುರೇಶ್ ಅರಸ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಬಗ್ಗೆ ಗಿರೀಶ್ ಕಾಸರವಳ್ಳಿ ಮಾತನಾಡಿ, ‘ಡಿ. 3 ನನ್ನ ಹುಟ್ಟಿದ ದಿನ. ಅಂದು ನಾನು 75 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದೇನೆ. ಅಂತಹ ವಿಶೇಷ ದಿನದಂದೇ ಈ ಮೂರು ದಿನಗಳ ಅಭಿನಂದನಾ ಸಮಾರಂಭ ಆರಂಭವಾಗುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ’ ಎಂದರು.
ಎಐ ಮೂಲಕ ಅದ್ಭುತ ದೃಶ್ಯಗಳನ್ನು ಸೃಷ್ಟಿಸಬಹುದಾದರೂ ಸಿನಿಮಾ ಎನ್ನುವುದು ಕೇವಲ ತಂತ್ರಜ್ಞಾನದಿಂದ ರೂಪುಗೊಳ್ಳುವುದಿಲ್ಲ. ನಿರ್ದೇಶಕ ತನ್ನ ಬದುಕಿನಲ್ಲಿ ಕಂಡ, ಅನುಭವಿಸಿದ ಮತ್ತು ಅರ್ಥ ಮಾಡಿಕೊಂಡ ಸಂಗತಿಗಳೇ ಸಿನಿಮಾದ ನಿಜವಾದ ಶಕ್ತಿ. ವಿಶ್ವ ಸಿನಿಮಾಗಳು, ಕನ್ನಡ ಸಾಹಿತ್ಯ ಮತ್ತು ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ನ ಅನುಭವ ನನ್ನ ಸಿನಿಮಾ ದೃಷ್ಟಿಕೋನ ರೂಪಿಸಿದವು. ಈ ಕಾರ್ಯಕ್ರಮ ಸಿನಿಮಾ ಕಲೆಯ ವಿವಿಧ ಆಯಾಮಗಳನ್ನು ಅರ್ಥ ಮಾಡಿಕೊಳ್ಳುವ ಅರ್ಥಪೂರ್ಣ ವೇದಿಕೆಯಾಗಲಿ.ಗಿರೀಶ್ ಕಾಸರವಳ್ಳಿ, ನಿರ್ದೇಶಕ