ಡಾ. ರಾಜಕುಮಾರ್​ 
ಸ್ಯಾಂಡಲ್‌ವುಡ್

Dr Rajkumar - ಜೆನ್​ಜಿಗೂ ಗೊತ್ತು, ಅಣ್ಣಾವ್ರ ಗತ್ತು

Dr. Rajkumar -
ಕರ್ನಾಟಕ ರತ್ನ ಡಾ.ರಾಜಕುಮಾರ ಎಲ್ಲ ಕಾಲಕ್ಕೂ , ವರ್ಗಕ್ಕೂ ಸಲ್ಲುವ ನಟ. ಭಿನ್ನ, ವಿಭಿನ್ನ ಅನಿಸುವ, ಇಡೀ ಸಮಾಜವೇ ಬದುಕುವ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ. ಅಂತಹ ಅಣ್ಣಾವ್ರ 97ನೇ ಜಯಂತಿ ಇಂದು (ಏ.24). ಇನ್ನು, ಇಂದಿನ ಜೆನ್​ಜೀಗೂ ಅಣ್ಣಾವು ಸಿನಿಮಾ ಮತ್ತು ವ್ಯಕ್ತಿತ್ವದ ಮೂಲಕ ಕನೆಕ್ಟ್​ ಆಗಿದ್ದಾರೆ. ಹೇಗೆ ಎಂದು ಜೆನ್​ಜೀ ತಾರೆಯರಾದ ಶಿಶಿರ್​ ಬೈಕಾಡಿ, ಅಮೃತಾ ಪ್ರೇಮ್​, ಪೃಥ್ವಿ ಶಾಮನೂರು ಹಾಗೂ ಮೊಮ್ಮಗ ಧೀರೇನ್​ ರಾಮಕುಮಾರ್​ "ವಿಜಯವಾಣಿ' ಜತೆ ಹಂಚಿಕೊಂಡಿದ್ದಾರೆ.

ಇಂದಿಗೂ ಪ್ರಸ್ತುತ, ಎಂದಿಗೂ ಪ್ರಸ್ತುತ.

ತಾತನವರು ಎಲ್ಲ ಪೀಳಿಗೆಗೂ ಸಲ್ಲುತ್ತಾರೆ. ಇಂದಿನ ಪೀಳಿಗೆಯೂ ಅವರ ಸಿನಿಮಾಗಳನ್ನು ಅಷ್ಟೇ ಇಷ್ಟಪಟ್ಟು ನೋಡುತ್ತಾರೆ. "ಬಂಗಾರದ ಮನುಷ್ಯ', "ಭಾಗ್ಯದ ಲಕ್ಷಿ$್ಮ ಬಾರಮ್ಮ' ಸೇರಿ ಹಲವು ಕಂಟೆಂಟ್​ ಪ್ರಧಾನ, ಎಲ್ಲ ಕಾಲಕ್ಕೂ ಸಲ್ಲುವ, ಸಂದೇಶವಿರುವ ಸಿನಿಮಾಗಳ ಮೂಲಕ ಜನರಿಗೆ ಹತ್ತಿರವಾದವರು. ಅವರು ಒಂದೇ ಯುಗಕ್ಕೆ ಸೀಮಿತವಲ್ಲ. ಎಲ್ಲ ಯುಗಗಳಿಗೂ ಸಲ್ಲುವವರು. ಜಾಲತಾಣಗಳಲ್ಲಿ ಜೆನ್​ಜಿ ಹುಡುಗರೇ ತಾತನ ಹಳೆಯ ಸಂದರ್ಶನ ಶೇರ್​ ಮಾಡುತ್ತಿರುತ್ತಾರೆ. ನಾವು ಎಲ್ಲಿಂದ ಬಂದಿದ್ದೇವೆ? ನಾವು ಯಾರು? ನಮ್ಮ ಮೂಲವೇನು? ನಮ್ಮ ಗುರುತನ್ನು ಹೇಗೆ ಮುಂತೆಗೆದುಕೊಂಡು ಹೋಗಬೇಕು? ಎಂದರೆ ತಾತನವರ ಸಿನಿಮಾಗಳನ್ನು ನೋಡಬೇಕು. ನಮ್ಮ ಇತಿಹಾಸ, ಸಿನಿಮಾ ಇತಿಹಾಸ, ಡಾ. ರಾಜಕುಮಾರ್​ ಅವರ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಸಂದೇಶವಿರುವ ಚಿತ್ರಗಳು, ಕಪ್ಪು ಬಿಳುಪು ಸಿನಿಮಾಗಳು, ಹೋರಾಟ, ಸಿನಿಮಾ ಕಾರ್ಯಕ್ರಮಗಳು, ಸಾಮಾಜಿಕ ಕೆಲಸಗಳು, ಮ್ಯೂಸಿಕಲ್​ ನೈಟ್ಸ್​, ಅವರು ಹೋದಲ್ಲಿ ಸೇರುತ್ತಿದ್ದ ಜನಸಾಗರ... ಎಲ್ಲವನ್ನೂ ಇಂದಿನ ಪೀಳಿಗೆ ನೋಡಿದರೆ, ಗೊತ್ತಾಗಿಬಿಡುತ್ತದೆ. ಇವತ್ತು ಅಭಿಮಾನಿಗಳು ಅಭಿಮಾನ ತೋರಿಸುವುದು ಸರಳ. ಆದರೆ, ಅವತ್ತು ಅಭಿಮಾನ ತೋರಿಸುವುದು ಕಷ್ಟವಾಗಿತ್ತು. ಅವರು ಇಂದಿಗೂ ಪ್ರಸ್ತುತ, ಎಂದಿಗೂ ಪ್ರಸ್ತುತ.
- ಧೀರೆನ್​ ರಾಮಕುಮಾರ್​, ನಟ

ಅವರ ಬಗ್ಗೆ ಕೇಳಿಯೇ ಕಲಿತಿದ್ದೇನೆ

ಸಣ್ಣ ವಯಸ್ಸಿನಿಂದಲೂ ನಾನು ಟಿವಿಯಲ್ಲಿ ಡಾ. ರಾಜಕುಮಾರ್​ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ತುಂಬ ಚಿತ್ರಗಳನ್ನು ನೋಡಿದ್ದೇನೆ. ಅವರ "ಬಬ್ರುವಾಹನ' ಸಿನಿಮಾ ನನಗೆ ಅಚ್ಚುಮೆಚ್ಚು. ಅದನ್ನು ಹಲವು ಬಾರಿ ನೋಡಿದ್ದೇನೆ. ನಾನು ಚಿತ್ರರಂಗಕ್ಕೆ ಬಂದಾಗ, ಸೆಟ್​ನಲ್ಲಿ ಬಹುತೇಕ ಎಲ್ಲ ವಿಭಾಗದವರೂ ಡಾ. ರಾಜಕುಮಾರ್​ ಅವರ ಉದಾಹರಣೆ ಕೊಡುತ್ತಿದ್ದರು. ಅಣ್ಣಾವು ಈ ರೀತಿ ಮಾಡುತ್ತಿದ್ದರು, ಹೀಗೆ ಇರುತ್ತಿದ್ದರೆ, ಹೀಗೆ ಮಾತನಾಡುತ್ತಿದ್ದರು ಎಂದು ಹೇಳುತ್ತಿದ್ದರು. ಅದೆಲ್ಲವೂ ನನಗೆ ತುಂಬ ದೊಡ್ಡ ಪ್ರೇರಣೆ. ಅವರಂತಹ ದಿಗ್ಗಜ ವ್ಯಕ್ತಿಗಳೇ ಹಾಗೆ ಇರುತ್ತಿದ್ದರು ಎಂದರೆ, ನಾವು ಇನ್ನೂ ಶ್ರಮವಹಿಸಿ ಕೆಲಸ ಮಾಡಬೇಕು, ಸರಳವಾಗಿ ಇರಬೇಕು ಎಂಬುದನ್ನು ಅರಿತೆ. ಜೆನ್​ಜಿ ಏನೇ ಮುಂದುವರಿದಿದ್ದರೂ, ಭಾವನೆಗಳು ಒಂದೇ ಅಲ್ಲವೇ? ಆ ಫೀಲಿಂಗ್ಸ್​ಅನ್ನು ಅವರು ಅಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಮೇರುನಟನಾಗಿದ್ದರೂ ಎಲ್ಲರೊಂದಿಗೆ ಬೆರೆಯುತ್ತಿದ್ದರು, ಗೌರವದಿಂದ ಮಾತನಾಡುತ್ತಿದ್ದರು. ಅವರ ಬಗ್ಗೆ ಹಲವರು ಮಾತನಾಡುವುದನ್ನು ಕೇಳಿಯೇ ಹಲವು ವಿಷಯಗಳನ್ನು ಕಲಿತಿದ್ದೇನೆ.
- ಪೃಥ್ವಿ ಶಾಮನೂರು, ನಟ

ನಾನೂ ಫಾಲೋ ಮಾಡುತ್ತೇನೆ

ರಾಜಕುಮಾರ್​ ಅಪ್ಪಾಜಿ ಎಲ್ಲ ಪೀಳಿಗೆಗಳಿಗೂ ಪ್ರೇರಣೆ. ಜೆನ್​ಜೀ ಅಂತೂ ಅವರನ್ನು ಮೀಮ್ಸ್​ ಮತ್ತು ಟೆಂಪ್ಲೇಟ್​ಗಳಲ್ಲಿ ಈಗಲೂ ಜಾಲತಾಣದಲ್ಲಿ ಬಳಸುತ್ತಾರೆ. ಅವರು ನಟನೆಯಲ್ಲಿ ವಿಕಿಪೀಡಿಯಾ, ಎನ್​ಸೈಕ್ಲೋಪಿಡಿಯಾ ಇದ್ದಂತೆ. ಇತ್ತೀಚಿನ ವರ್ಷಗಳಲ್ಲಿ ಅವರ ಹಳೆಯ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದೇನೆ. "ಬಂಗಾರದ ಮನುಷ್ಯ', "ಮೇಯರ್​ ಮುತ್ತಣ್ಣ' ಸೇರಿ ಹಲವು ಚಿತ್ರಗಳನ್ನು ನೋಡಿದ್ದೇನೆ. ಅವರು ಎಲ್ಲ ಬಗೆಯ ಪಾತ್ರಗಳಿಗೂ ತೆರೆಯ ಮೇಲೆ ಜೀವ ನೀಡಿದ್ದಾರೆ. ಕಲಾವಿದರಾಗಿ ಅವರನ್ನು ತೆರೆಯ ಮೇಲೆ ನೋಡಿ ಕಲಿಯುವ ವಿಷಯಗಳು ತುಂಬ ಇವೆ. ರಾಜಕುಮಾರ್​ ಸರ್​ನ ನಾವು ನೋಡಿಲ್ಲ. ಆದರೆ, ಅವರನ್ನು ಪುನೀತ್​ ಸರ್​ ಅವರಲ್ಲಿ ನೋಡಿದ್ದೇವೆ. ಸರಳತೆ, ನಟನೆ ಸೇರಿ ಅಪು$್ಪ ಮತ್ತು ಅಣ್ಣಾವ್ರ ನಡುವೆ ಹಲವು ಹೋಲಿಕೆಗಳಿವೆ. ಅಣ್ಣಾವು ಸೆಟ್​ಗೆ ಹೋದಾಗ ಕ್ಯಾಮರಾಗೆ, ನಿರ್ದೇಶಕರಿಗೆ ನಮಸ್ಕರಿಸಿ, ಸೆಟ್​ನಲ್ಲಿರುವ ಎಲ್ಲರನ್ನೂ ಮಾತನಾಡಿಸಿಕೊಂಡು ಬರುತ್ತಿದ್ದರಂತೆ. ಅದನ್ನು ಅಪ್ಪ ನನಗೆ ಹೇಳಿದ್ದರು. ನಾನೂ ಸೆಟ್​ನಲ್ಲಿ ಅದನ್ನೇ ಫಾಲೋ ಮಾಡುತ್ತಿದ್ದೇನೆ.
- ಅಮೃತಾ ಪ್ರೇಮ್​, ನಟಿ

ಅಣ್ಣಾವ್ರೇ ಒಂದು ವಿಶ್ವವಿದ್ಯಾಲಯ

ಅವರೇ ಒಂದು ವಿಶ್ವವಿದ್ಯಾಲಯ. ಒಬ್ಬ ಕಲಾವಿದರಾಗಿ ಮಾಡಬಹುದಾದ ಎಲ್ಲ ರೀತಿಯ ಪಾತ್ರಗಳನ್ನೂ ಡಾ. ರಾಜಕುಮಾರ್​ ಅವರು ಮಾಡಿದ್ದಾರೆ. ನಟನಾಗಿ ಅವರ ಕನ್ನಡ ಭಾಷೆಯ ಬಳಕೆ, ಉಚ್ಛಾರಣೆ ಅದ್ಭುತ. ಅದನ್ನು ನಾನು ಕಲಿಯಲು ಇಷ್ಟಪಡುತ್ತೇನೆ. ಎಲ್ಲ ಬಗೆಯ ಪಾತ್ರಗಳಿಗೂ ರೆರೆನ್ಸ್​ ಸಿಗುತ್ತದೆ. ಅವರನ್ನು ಅವರು ತುಂಬ ಚೆನ್ನಾಗಿ ಕ್ಯಾರಿ ಮಾಡಿಕೊಂಡರು. ಅದು ನನಗೆ ತುಂಬ ಇಷ್ಟ. ಅಣ್ಣಾವು ತುಂಬ ಸ್ಟೆ$ಲಿಶ್​ ಆಗಿದ್ದ "ಆಪರೇಷನ್​ ಡೈಮಂಡ್​ ರಾಕೆಟ್​', "ಕವಿರತ್ನ ಕಾಳಿದಾಸ', "ಹುಲಿಯ ಹಾಲಿನ ಮೇವು', "ಅದೇ ಕಣ್ಣು', "ದಾರಿ ತಪ್ಪಿದ ಮಗ'... ಹೀಗೆ ಅವರು ಸ್ವಾ$ಗ್​ನಲ್ಲಿ ಕಾಣಿಸಿಕೊಂಡಿರುವ ಎಲ್ಲ ಚಿತ್ರಗಳೂ ನನಗಿಷ್ಟ. ಅವರ ಕನ್ನಡ ಉಚ್ಛಾರಣೆಯ ವಿಷಯವನ್ನೇ ಒಂದು ಪುಸ್ತಕ ಮಾಡಬಹುದು. ವೈಯಕ್ತಿಕ ಜೀವನದಲ್ಲಿ ಮುಗ್ಧರಾಗಿದ್ದರು. ಆದರೆ, ಕೆಲಸದ ವಿಷಯದಲ್ಲಿ ರಾಕ್ಷಸರಾಗಿದ್ದರು. ಮುಗ್ಧತೆ ಮತ್ತು ಬುದ್ಧಿವಂತಿಕೆ ಎರಡನ್ನೂ ಒಬ್ಬ ವ್ಯಕ್ತಿಯಲ್ಲೇ ನೋಡುವುದು ಅಪರೂಪದಲ್ಲೇ ಅಪರೂಪ. ಅಂತಹ ಅಪರೂಪದ ವ್ಯಕ್ತಿ ಅಣ್ಣಾವು. ಅವರ ಹಲವು ಸಂದರ್ಶನಗಳನ್ನು ನೋಡಿದ್ದೇನೆ, ಕೇಳಿದ್ದೇನೆ. ಅವರು ಮಾತನಾಡುವುದನ್ನು ಕೇಳಿಕೊಂಡೇ ಇದ್ದುಬಿಡಬಹುದು.
- ಶಿಶಿರ್​ ಬೈಕಾಡಿ, ನಟ