ಗ್ಯಾಂಗ್ಸ್ ಆಫ್ ಯುಕೆ ಚಿತ್ರದ ಪೋಸ್ಟರ್
- ಕರಿಮಣ್ಣಿನಲ್ಲಿ ರಕ್ತದ ಕೋಡಿ ಹರಿದ ಕಥೆ ಹೇಳಿದ ರವಿ ಶ್ರೀವತ್ಸ
- ಕೌಟುಂಬಿಕ ದ್ವೇಷದಲ್ಲಿ ಸಾಗುವ ಕಥೆ
- ಚಿತ್ರದ ಎರಡನೇ ಭಾಗ ತಯಾರಿಯಲ್ಲಿ ಚಿತ್ರತಂಡ
ಚಿತ್ರ: ಗ್ಯಾಂಗ್ಸ್ ಆಫ್ ಯುಕೆ
ತಾರಾಗಣ: ‘ಒರಟ’ ಪ್ರಶಾಂತ್, ಮುನಿ, ಸೋನು ಉಪಾಧ್ಯ, ನವೀನ್, ಪದ್ಮಾ ವಾಸಂತಿ, ಕೋಟೆ ಪ್ರಭಾಕರ್ ಮತ್ತಿತರರು.
ಹೆಣ್ಣು, ಹೊನ್ನು, ಮಣ್ಣಿಗಾಗಿಯೇ ಜಗತ್ತಿನಲ್ಲಿ ಯುದ್ಧ ನಡೆದಿರುವುದು ಎಂಬುದು ಚರಿತ್ರೆಯಲ್ಲಿ ದಾಖಲಾಗಿದೆ. ಅದರಂತೆ, ಹೊಲದ ಸೀಮೆಯಲ್ಲಿ ಹಾಕಿರುವ ಸೈಜ್‌ಗಲ್ಲು ಕಿತ್ತರು ಎಂಬ ಒಂದೇ ಕಾರಣಕ್ಕೆ ಭೀಮಾಪುರದ ಎರಡು ಕುಟುಂಬಗಳ ಮಧ್ಯೆ ನಡೆಯುವ ಪ್ರತೀಕಾರದ ಕಥೆಯನ್ನು ನಿರ್ದೇಶಕ ರವಿ ಶ್ರೀವತ್ಸ ‘ಗ್ಯಾಂಗ್ಸ್ ಆಫ್ ಯುಕೆ’ ಮೂಲಕ ನಿರೂಪಿಸಿದ್ದಾರೆ. ಇಡೀ ಚಿತ್ರದಲ್ಲಿ ಲಾಂಗ್ ಮಚ್ಚುಗಳು ಝಳಪಿಸಿದ್ದು, ಗುಂಡಿನ ಸದ್ದು ಕೇಳುತ್ತದೆ. ಹೀಗಾಗಿ ಭೀಮೆಯ ತೀರದಲ್ಲಿ ರಕ್ತ ಕೋಡಿಯಂತೆ ಹರಿದಿದೆ.
ಭೀಮಾಪುರದ ಅಂಬಾ ಭವಾನಿ ಸಾಹುಕಾರ ಕುಟುಂಬದಲ್ಲಿ ಯುಗಾದಿ ಹಬ್ಬದ ಸಂಭ್ರಮ. ಹೊಲದಲ್ಲಿ ಪೂಜೆ ಮಾಡಿ, ಉಳುಮೆಗೆ ಮುಂದಾಗುವಾಗಲೇ ಆ ಊರಿನ ಗೌಡ ಹೊಲದ ಕಣಿವೆಯಲ್ಲಿ ಹಾಕಿರುವ ಸೈಜ್‌ಗಲ್ಲು ಕಿತ್ತೆಸೆದು ಅರ್ಭಟಿಸುತ್ತಾನೆ. ಅದನ್ನು ಪ್ರತಿರೋಧಿಸಲು ಹೋದ ಅಂಬಾ ಭವಾನಿ ಕುಟುಂಬದ ಯಜಮಾನ ಹಾಗೂ ಕಿರಿ ಮಗನನ್ನು ಕೊಂದುಬಿಡುತ್ತಾರೆ. ಬಳಿಕ ಯಜಮಾನತಿಯ (ಪದ್ಮಾ ವಾಸಂತಿ) ಶಪಥದಂತೆ ಹಿರಿಮಗ ಶಿವಯ್ಯ ಹಾಗೂ ಆತನ ತಂಡ ಊರಿನ ಗೌಡನನ್ನು ಮುಗಿಸುತ್ತಾರೆ. ಹಾಗಂತ ಅಲ್ಲಿಗೆ ಈ ಕಥೆ ಮುಗಿಯುವುದಿಲ್ಲ, ಬದಲಾಗಿ ಅದು ಮತ್ತೊಂದು ಪ್ರತೀಕಾರಕ್ಕೆ ಕಾರಣವಾಗುತ್ತದೆ. ಹಾಗಾದರೆ, ಮುಂದಿನ ಸೇಡಿನ ಕಥೆ ಏನೆಂದು ತಿಳಿಯಬೇಕೆಂದರೆ ‘ಗ್ಯಾಂಗ್ಸ್ ಆಫ್ ಯುಕೆ’ ಚಿತ್ರ ನೋಡಬೇಕಷ್ಟೇ. ರಿವರ್ಸ್ ಸ್ಕ್ರೀನ್‌ಪ್ಲೇ ಮೂಲಕ ಸಿನಿಮಾ ನಿರೂಪಿಸಲಾಗಿದ್ದು, ಮೊದಲರ್ಧದಲ್ಲಿ ಸೇಡಿನ ಕಥೆಯನ್ನು ಹೇಳಿ, ದ್ವಿತೀಯಾರ್ಧದಲ್ಲಿ ಸೇಡಿನ ಹಿಂದಿನ ಚಿತ್ರಣವನ್ನು ನೀಡಲಾಗಿದೆ. ಕೆಲ ದೃಶ್ಯಗಳು ದೀರ್ಘವಾಗಿದ್ದು, ಆ್ಯಕ್ಷನ್‌ಗಿಂತ ಸಂಭಾಷಣೆಯೇ ಹೆಚ್ಚಿವೆ. ಕುಟುಂಬಗಳ, ವ್ಯಕ್ತಿ ನಡುವಿನ ವೈಷಮ್ಯ, ಜಿದ್ದಿನ ಹಿಂದಿನ ಕಥೆಯನ್ನು ರವಿ ಶ್ರೀವತ್ಸ ರೋಚಕವಾಗಿ ನಿರೂಪಿಸಿದ್ದಾರೆ. ಪ್ರಶಾಂತ್, ಸೋನು, ಮುನಿ, ಪದ್ಮಾ ವಾಸಂತಿ ಪಾತ್ರಗಳು ಗಮನ ಸೆಳೆಯುತ್ತವೆ. ಉಳಿದಂತೆ ಹೊಸ ಕಲಾವಿದರು ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಹಿನ್ನೆಲೆ ಸಂಗೀತ ಆ್ಯಕ್ಷನ್ ದೃಶ್ಯಗಳಿಗೆ ಪೂರಕವಾಗಿದೆ. ಮೊದಲ ಭಾಗದಲ್ಲಿ ಕುಟುಂಬಗಳ ನಡುವಿನ ವೈಷ್ಯಮ್ಯ ಮಾತ್ರ ತೋರಿಸಲಾಗಿದ್ದು, ಸೀಕ್ವೆಲ್‌ನಲ್ಲಿ ‘ಗ್ಯಾಂಗ್ಸ್ ಆಫ್ ಯುಕೆ’ಯ ಮತ್ತೊಂದು ಹಂತದ ಸಂಘರ್ಷ ಆರಂಭವಾಗಲಿದೆ. ಅಲ್ಲಿಯವರೆಗೂ ಕಾಯಬೇಕಷ್ಟೇ.