ಭಾವನಾ ರಾವ್​ - ದ ಗರ್ಲ್​ 
ಸ್ಯಾಂಡಲ್‌ವುಡ್

Bhavana Rao - ತಲೆಗೆ ಹುಳ ಬಿಡುವ ದ ಗರ್ಲ್​

Bhavana Rao, The Girl -
"ಗಾಳಿಪಟ' ಭಾವನಾ ರಾವ್​ ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಒಂದು ಸುತ್ತು ಹಾಕಿಕೊಂಡು, ಇದೀಗ ಮತ್ತೆ ಕನ್ನಡದಲ್ಲಿ ಬಿಜಿಯಾಗಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚಿರುವ ಅವರು ಇದೀಗ ಅತ್ಯಂತ ಸವಾಲಿನ ಪಾತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ಹೆಸರು "ದ ಗರ್ಲ್​'. ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನೆರವೇರಿದ್ದು, "ನಿರ್ದೇಶಕ ಗಿರೀಶ್​ ಪಿ. ನಾಯರ್​ ಈ ಸಿನಿಮಾ ನೀವೇ ಮಾಡಬೇಕು ಅಂತ ಬಂದು ಕಥೆ ಹೇಳಿದರು. ಕಥೆ ತುಂಬ ಇಂಟರೆಸ್ಟಿಂಗ್​ ಅಂತನ್ನಿಸಿತು. ಇದುವರೆಗೂ ನಾನು ಇಂತಹ ಪಾತ್ರದಲ್ಲಿ ನಟಿಸಿಲ್ಲ. ನನ್ನ ಕರಿಯರ್​ನಲ್ಲೇ ಅತ್ಯಂತ ಸವಾಲಿನ ಪಾತ್ರವಿದು. ಇಡೀ ಸಿನಿಮಾ ನನ್ನ ಹೆಗಲ ಮೇಲಿದ್ದು, ನನಗೂ ಒತ್ತಡವಿದೆ. ಆದರೆ, ತುಂಬ ಚೆನ್ನಾಗಿ ನಿಭಾಯಿಸುತ್ತೇನೆ ಎಂಬ ಭರವಸೆಯೂ ಇದೆ. ಇದು ನಾನು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಮೊದಲ ಮಹಿಳಾ ಪ್ರಧಾನ ಸಿನಿಮಾ. ಪ್ರಾರಂಭದಿಂದ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡು ಕ್ಲೆಮ್ಯಾಕ್ಸ್​ನಲ್ಲಿ ಇದು ಹಾರರಾ ಅಥವಾ ಸಸ್ಪೆನ್ಸ್​ ಥ್ರಿಲ್ಲರಾ ಅಂತ ಪ್ರೇಕ್ಷಕರಿಗೆ ರಿವೀಲ್​ ಆಗಲಿದೆ. ಸ್ವಲ್ಪ ತಲೆಗೆ ಹುಳ ಬಿಡುವ "ದ ಗರ್ಲ್​'ನಲ್ಲಿ ನಾನು ಹಲವು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.

ಒಟಿಟಿಯಲ್ಲಿ ಬಿಡುಗಡೆ

ಈಗಾಗಲೇ ಚಿತ್ರದ ಫೋಟೋಶೂಟ್​, ಮುಹೂರ್ತ ನೆರವೇರಿದ್ದು, ಇದೇ ತಿಂಗಳಂತ್ಯದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. "20ರಿಂದ 25 ದಿನಗಳ ಕಾಲ ಬೆಂಗಳೂರು ಮತ್ತು ಕೇರಳದಲ್ಲಿ ಶೂಟಿಂಗ್​ ನಡೆಯಲಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದ್ದು, ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್​ ಚಿತ್ರತಂಡದ್ದು. ಸಾಮಾನ್ಯವಾಗಿ ನಾನು ಪಾತ್ರಕ್ಕೆ ತುಂಬ ಪ್ರಿಪೇರ್​ ಆಗಲು ಇಷ್ಟಪಡುವುದಿಲ್ಲ. ಶೂಟಿಂಗ್​ ಸಮಯದಲ್ಲಿ ನ್ಯಾಚುರಲ್​ ಆಗಿ ನಟಿಸುವುದೇ ಚಂದ. ಫೈಟ್ಸ್​ ಮತ್ತು ಸ್ಟಂಟ್ಸ್​ ಕೂಡ ಇರಲಿದೆ ಅಂತ ನಿರ್ದೇಶಕರು ಹೇಳಿದ್ದಾರೆ. ಅದಕ್ಕೆ ಸಿದ್ಧತೆ ನಡೆಸಲಿದ್ದೇನೆ' ಎನ್ನುತ್ತಾರೆ.

ಬದಲಾಗುತ್ತಿದೆ ಚಿತ್ರರಂಗ

ಭಾವನಾ ರಾವ್​ ಕಳೆದ ಜನವರಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 18 ವರ್ಷಗಳನ್ನು ಪೂರೈಸಿದ್ದಾರೆ. "ಇಷ್ಟು ವರ್ಷಗಳಲ್ಲಿ ಸುಮಾರು 20 ಸಿನಿಮಾ ಮಾಡಿದ್ದೇನಷ್ಟೇ ಅಂತ ಇತ್ತೀಚೆಗಷ್ಟೆ ನಾನೂ ಯೋಚಿಸುತ್ತಿದ್ದೆ. ಆದರೆ, ಕಡಿಮೆ ಸಿನಿಮಾ ಮಾಡಿದ್ದರೂ ಜನ ನನ್ನನ್ನು ಇನ್ನೂ ಜ್ಞಾಪಕ ಇಟ್ಟುಕೊಂಡಿದ್ದಾರೆ. ಇನ್ನೂ ಕೆಲಸ ಮಾಡುತ್ತಿದ್ದೇನೆ. ಒಳ್ಳೆ ಕಥೆಗೂ, ಬರೀ ಕಥೆಗೂ ವ್ಯತ್ಯಾಸವಿದೆ. ನಾನು ಚಿತ್ರರಂಗಕ್ಕೆ ಬಂದಾಗ ನನಗೆ ಏನೂ ಗೊತ್ತಿರಲಿಲ್ಲ. ಮೊದಲೆಲ್ಲ ನಿರ್ದೇಶಕರು ಏನಂತಾರೋ ಅದೇ ಫೈನಲ್​ ಆಗಿತ್ತು. ಈಗ ವೃತ್ತಿಪರತೆ ಹೆಚ್ಚಿದೆ. ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಎಲ್ಲರೂ ಒಟ್ಟಿಗೆ ಕುಳಿತು ಚರ್ಚಿಸಿ ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸುತ್ತಾರೆ. ಎಲ್ಲ ರೀತಿಯಲ್ಲೂ ಉತ್ತಮ ರೀತಿಯಲ್ಲಿ ಬದಲಾವಣೆ ಆಗಿದೆ. ಆಗೆಲ್ಲ ಮಹಿಳಾ ಪ್ರಧಾನ ಕಥೆಗಳು ತೀರಾ ಕಡಿಮೆ. ಈಗ ಹೆಚ್ಚು ಬರುತ್ತಿವೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ.