ನಟ ವಿಜಯ್ ಪತ್ನಿ ಸಂಗೀತಾರಿಂದ ಸ್ಫೋಟಕ ಹೇಳಿಕೆ! Actor Vijay
- ತಮಿಳಿಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಹಾಗೂ ಕಾಲಿವುಡ್ ನಟ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದೆ
- ವಿಜಯ್ ಪತ್ನಿ ಸಂಗೀತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ
- ವಿಜಯ್ ವಿರುದ್ಧ ಸಂಗೀತಾ ಹೊರಿಸಿರುವ ಆರೋಪಗಳು ಭಾರೀ ಸಂಚಲನ ಮೂಡಿಸಿವೆ
Actor Vijay : ಕಾಲಿವುಡ್ ಚಿತ್ರರಂಗದ ಸೂಪರ್ ಸ್ಟಾರ್ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಂಸ್ಥಾಪಕ ವಿಜಯ್ ಕುಟುಂಬದಲ್ಲಿ ಬಿರುಗಾಳಿ ಎದ್ದಿದ್ದು, ಡಿವೋರ್ಸ್ ಕೋರಿ ಪತ್ನಿ ಸಂಗೀತಾ ಅವರು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಏಪ್ರಿಲ್ 20 ರಂದು ಈ ಪ್ರಕರಣ ವಿಚಾರಣೆಗೆ ಬರಲಿದೆ. ಇದರ ನಡುವೆ ವಿಜಯ್ ವಿರುದ್ಧ ಸಂಗೀತಾ ಹೊರಿಸಿರುವ ಆರೋಪಗಳು ಭಾರೀ ಸಂಚಲನ ಮೂಡಿಸಿವೆ.
ನಟ ವಿಜಯ್ ಅವರ ವೈಯಕ್ತಿಕ ಜೀವನ ಸದ್ಯ ಸಂಕಷ್ಟದಲ್ಲಿದೆ. ತಮಿಳು ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿರುವ ವಿಜಯ್, ಸಿನಿಮಾರಂಗವನ್ನು ತೊರೆದು ಈಗ ಪೂರ್ಣಾವಧಿ ರಾಜಕೀಯದಲ್ಲಿದ್ದಾರೆ. ಇನ್ನೂ ಕೆಲವೇ ತಿಂಗಳುಗಳಲ್ಲಿ ಎದುರಾಗಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷ ಎಲ್ಲೆಡೆ ಗೆಲ್ಲುವ ನಿರೀಕ್ಷೆಯಿದೆ. ವಿಜಯ್ ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವುದರಿಂದ, ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ, ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ಒಂದೆಡೆ ವಿಜಯ್ ಅವರು ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದರೆ, ಇನ್ನೊಂದೆಡೆ ವಿಜಯ್ ಅವರ ಪತ್ನಿ ಸಂಗೀತಾ ಅನಿರೀಕ್ಷಿತವಾಗಿ ವಿಚ್ಛೇದನ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದು, ಏಪ್ರಿಲ್ 20ರಂದು ವಿಚಾರಣೆ ನಡೆಯಲಿದೆ. ಆ ದಿನ ವಿಜಯ್ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಭೇಟಿ ನೀಡಬೇಕಿದೆ.
ಅಂದಹಾಗೆ, ನಟ ವಿಜಯ್ 1999 ರಲ್ಲಿ ಸಂಗೀತಾ ಅವರನ್ನು ವಿವಾಹವಾದರು, ಮತ್ತು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಿಜಯ್ ಮತ್ತು ಸಂಗೀತಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಲೇ ಇದ್ದವು. ಇಬ್ಬರು ಡಿವೋರ್ಸ್ ಆಗಲಿದ್ದಾರೆ ಎಂದು ಸುದ್ದಿಯು ಕೂಡ ಹೊಸದೇನಲ್ಲ. ಬಳಹ ವರ್ಷಗಳಿಂದ ಇದು ಕೇಳಿಬರುತ್ತಲೇ ಇತ್ತು. ಇದೀಗ ಡಿವೋರ್ಸ್ಗಾಗಿ ಕೋರ್ಟ್ ಮೆಟ್ಟಿಲೇರಿರುವ ಸಂಗೀತಾ, ವಿಜಯ್ ವಿರುದ್ಧ ಮಾಡಿರುವ ಇತ್ತೀಚಿನ ಆರೋಪ ಅಭಿಮಾನಿಗಳನ್ನು ಆಘಾತಗೊಳಿಸಿದೆ.
ನಾನು ವಿಚ್ಛೇದನ ಕೋರಲು ಪ್ರಮುಖ ಕಾರಣವೇನೆಂದರೆ, ನನ್ನ ಪತಿ ವಿಜಯ್ಗೆ ನಟಿಯೊಂದಿಗೆ ವಿವಾಹೇತರ ಸಂಬಂಧ ಇದೆ ಎಂದು ಡಿವೋರ್ಸ್ ಅರ್ಜಿಯಲ್ಲಿ ಸಂಗೀತಾ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಒಬ್ಬ ನಟಿಯಿಂದ ನಮ್ಮ ಉತ್ತಮ ಜೀವನಕ್ಕೆ ಅಡ್ಡಿಯಾಯಿತು. ನಾನು ವಿಜಯ್ ಅವರಿಂದ ಬೇರ್ಪಟ್ಟು ಲಂಡನ್‌ನಲ್ಲಿ ವಾಸಿಸುತ್ತಿದ್ದೆ. ನಂತರ, ಶಾಂತಿಯುತವಾಗಿ ಮಾತನಾಡಿ, ರಾಜಿ ಮಾಡಿದ ಬಳಿಕ ನಾವು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದೆವು. ನಾವು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ, ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಎಂದು ಸಂಗೀತಾ ಹೇಳಿದ್ದಾರೆ ಎನ್ನಲಾಗಿದೆ.
ವಿಜಯ್ ಅವರು 2021ರಿಂದ ಆ ನಟಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ವಿವಾಹೇತರ ಸಂಬಂಧವನ್ನು ಮುರಿದುಕೊಳ್ಳುವಂತೆ ಅವರನ್ನು ಕೇಳಿದಾಗ ಹೌದು ಎಂದು ಹೇಳಿದರು. ಆದರೆ, ಅವರಿನ್ನೂ ಆ ನಟಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ನಾನು ಮುಕ್ತವಾಗಿ ಓಡಾಡಲು ನಿರ್ಬಂಧ ಹೇರಲಾಗಿದೆ. ಅಲ್ಲದೆ, ನನ್ನ ಆರ್ಥಿಕ ಸಂಪನ್ಮೂಲಗಳನ್ನೂ ನಿರ್ಬಂಧಿಸಲಾಗಿದೆ ಮತ್ತು ನನ್ನ ಖರ್ಚುಗಳಿಗೆ ಹಣವನ್ನು ಸಹ ನೀಡುತ್ತಿಲ್ಲ ಎಂದು ಸಂಗೀತಾ ಆರೋಪ ಮಾಡಿದ್ದಾರೆ.
ಈ ಎಲ್ಲ ಸಮಸ್ಯೆಯಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಸಭ್ಯತೆಯ ದೃಷ್ಟಿಯಿಂದಾಗಿ ಆ ನಟಿಯ ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಆದರೆ, ಅಗತ್ಯಬಿದ್ದರೆ ನಟಿಯ ಹೆಸರನ್ನು ಹೇಳಲು ಹೆದರುವುದಿಲ್ಲ. ನನ್ನ ಮಗ ಮತ್ತು ಮಗಳ ಭವಿಷ್ಯದ ದೃಷ್ಟಿಯಿಂದಾಗಿ ನಾನು ಇಷ್ಟು ದಿನ ಮೌನವಾಗಿದ್ದೆ ಆದರೆ, ಇನ್ನು ಮುಂದೆ ಆ ರೀತಿ ಇರಲು ಸಾಧ್ಯವಿಲ್ಲ ಎಂದು ಸಂಗೀತಾ ಹೇಳಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ, (ಏಜೆನ್ಸೀಸ್).