Wedding (ಚಿತ್ರ Instagram)
ಹೈದರಾಬಾದ್: ಟಾಲಿವುಡ್ನ ಕ್ಯೂಟ್ ಜೋಡಿ ಎಂದೇ ಬಿರುದು ಪಡೆದಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ (Wedding) ಕುರಿತು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೆ ಈಗ ಬ್ರೇಕ್ ಬಿದ್ದಿದ್ದು, ಈ ಜೋಡಿ ಫೆಬ್ರವರಿ 26 ರಂದು ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಈ ಮೊದಲು ಫೆಬ್ರವರಿ 2 ರಂದು ರಾಜಸ್ಥಾನದ ಉದಯಪುರದಲ್ಲಿ ಇವರಿಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ಮದುವೆಯ ಅಲಂಕಾರಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಈ ವದಂತಿಗಳು ಇನ್ನಷ್ಟು ಬಲವಾಗಿದ್ದವು. ಆದರೆ, ಈ ಊಹಾಪೋಹಗಳು ಸುಳ್ಳಾಗಿದ್ದು, ಜೋಡಿ ಇದೇ ತಿಂಗಳ 26 ರಂದು ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ ಎಂದು ಫಿಲ್ಮ್‌ಫೇರ್ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಿದೆ.
ಫೆಬ್ರವರಿ 26 ರಂದು ಮದುವೆ, ನಂತರ ಹೈದರಾಬಾದ್‌ನಲ್ಲಿ ರಿಸೆಪ್ಷನ್
ಮೂಲಗಳ ಪ್ರಕಾರ, ವಿಜಯ್ ಮತ್ತು ರಶ್ಮಿಕಾ ಫೆಬ್ರವರಿ 26 ರಂದು ವಿವಾಹವಾಗಲಿದ್ದಾರೆ. ಈ ಖಾಸಗಿ ಸಮಾರಂಭದ ನಂತರ ಚಿತ್ರರಂಗದ ಗಣ್ಯರಿಗೆ ಮತ್ತು ಆಪ್ತರಿಗಾಗಿ ಹೈದರಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದ್ದು, ಈಗಾಗಲೇ ಮನೆಯವರು ಮದುವೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ವೈರಲ್ ದೃಶ್ಯಗಳ ಅಸಲಿಯತ್ತು!
ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಅಲಂಕಾರದ ದೃಶ್ಯಗಳು ವೈರಲ್ ಆದ ಕೂಡಲೇ ಅಭಿಮಾನಿಗಳು ರಶ್ಮಿಕಾ ಅವರು ವಿವಾಹವಾಗಿದ್ದಾರೆ ಎಂದು ನಂಬಿದ್ದರು. ಆದರೆ, ಆ ದೃಶ್ಯಗಳು ಯಾವುದೋ ಜಾಹೀರಾತು ಚಿತ್ರೀಕರಣ ಅಥವಾ ಖಾಸಗಿ ಕಾರ್ಯಕ್ರಮದ್ದಿರಬಹುದು ಎಂದು ಸಂಶಯ ವ್ಯಕ್ತವಾಗಿತ್ತು. ಆದರೆ, ಈಗ ದಿನಾಂಕ ತಿಳಿಸಿದ ನಂತರ, ಅಭಿಮಾನಿಗಳಿಗೆ ಸ್ಪಷ್ಟೀಕರಣ ಸಿಕ್ಕಂತಾಗಿದೆ.
ಸದ್ಯ ರಶ್ಮಿಕಾ ಮತ್ತು ವಿಜಯ್ ಇಬ್ಬರೂ ತಮ್ಮ ಮುಂದಿನ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ತಮ್ಮ ಮದುವೆಯ ಬಗ್ಗೆ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ (ಏಜೆನ್ಸೀಸ್).