ನಟ ಕಿಚ್ಚ ಸುದೀಪ್​  
ಸ್ಯಾಂಡಲ್‌ವುಡ್

ಜಾಲತಾಣದಲ್ಲಿ ಕಿಚ್ಚು ಹಚ್ಚಿದ ಕಿಚ್ಚನ​ ಹೇಳಿಕೆ: ಯುದ್ಧಕ್ಕೆ ರೆಡಿ ಎಂದಿದ್ದೇಕೆ? ಗುಡುಗಿದ್ದು ಯಾರ ವಿರುದ್ಧ? Kichcha Sudeepa ​

ಪ್ರಮುಖ ಮುಖ್ಯಾಂಶಗಳು

  • ಕಿಚ್ಚ ಸುದೀಪ್​ ಅನಯದ ಬಹುನಿರೀಕ್ಷಿತ ಮಾರ್ಕ್​ ಸಿನಿಮಾ ಇದೇ ಡಿಸೆಂಬರ್​ 25ಕ್ಕೆ ಬಿಡುಗಡೆ
  • ಸುದೀಪ್ ಅವರು ಹೇಳಿದ ಮಾತಿನಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂಚಲನ
  • ಬಹು ದೊಡ್ಡ ವೇದಿಕೆಯಲ್ಲೇ ಯುದ್ಧಕ್ಕೆ ರೆಡಿ ಎಂದಿದ್ದೇಕೆ ಕಿಚ್ಚ? ಕಿಚ್ಚನ ಹೇಳಿಕೆಯಿಂದ ಹುಟ್ಟಿಕೊಳ್ತಾ ಸ್ಟಾರ್​ ವಾರ್​​?
  • ಮಾರ್ಕ್​ ಸಿನಿಮಾ ವಿರುದ್ಧ ನಡೆಯುತ್ತಿದೆಯಾ ಪಿತೂರಿ? ಕಿಚ್ಚನ ಮಾತಿನ ಮರ್ಮವೇನು?
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ( Kichcha Sudeepa ​) ಅಭಿನಯದ ಬಹುನಿರೀಕ್ಷಿತ ಮಾರ್ಕ್​ ಸಿನಿಮಾ ಇದೇ ಡಿಸೆಂಬರ್​ 25ಕ್ಕೆ ಬಿಡುಗಡೆಯಾಗಲಿದೆ. ಹೀಗಾಗಿ ಮಾರ್ಕ್​ ಚಿತ್ರದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಇದರ ನಡುವೆ ನಟ ಸುದೀಪ್ ಅವರು ಹೇಳಿದ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಬಹು ದೊಡ್ಡ ವೇದಿಕೆಯಲ್ಲೇ ಯುದ್ಧಕ್ಕೆ ರೆಡಿ ಎಂದಿದ್ದೇಕೆ ಕಿಚ್ಚ? ಕಿಚ್ಚನ ಹೇಳಿಕೆಯಿಂದ ಹುಟ್ಟಿಕೊಳ್ತಾ ಸ್ಟಾರ್​ ವಾರ್​​? ಮಾರ್ಕ್​ ಸಿನಿಮಾ ವಿರುದ್ಧ ನಡೆಯುತ್ತಿದೆಯಾ ಪಿತೂರಿ? ಕಿಚ್ಚನ ಮಾತಿನ ಮರ್ಮವೇನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವ ಪ್ರಯತ್ನವನ್ನು ನಾವೀಗ ಮಾಡೋಣ.
ಡಿಸೆಂಬರ್​ 20ರಂದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾರ್ಕ್​ ಚಿತ್ರದ ಪ್ರೀರಿಲೀಸ್​ ಈವೆಂಟ್​ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಅಭಿಮಾನ ಸಾಗರವೇ ಹರಿದುಬಂದಿತ್ತು. ಸಾವಿರಾರು ಸಂಖ್ಯೆ ಜನರು ಸೇರಿದ್ದರು. ಇಡೀ ಕಾರ್ಯಕ್ರಮದ ಕ್ರೇಂದ್ರ ಬಿಂದು ಯಾರೆಂದರೆ ಅದು ಅಭಿನಯ ಚಕ್ರವರ್ತಿ ಬಾದ್​ಷಾ ಕಿಚ್ಚ ಸುದೀಪ್​. ಕಿಚ್ಚನ ಮಾತು ಕೇಳಲೆಂದೇ ಭಾರಿ ಸಂಖ್ಯೆಯಲ್ಲಿ ಜನರ ಸೇರಿದ್ದರು. ಈ ವೇಳೆ ಬಹುದೊಡ್ಡ ವೇದಿಕೆಯಲ್ಲಿ ಕಿಚ್ಚ ಆಡಿದ ಒಂದು ಮಾತು ಸ್ಯಾಂಡಲ್​ವುಡ್​ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂಚಲವನ್ನೇ ಸೃಷ್ಟಿ ಮಾಡಿದೆ.

ಕಿಚ್ಚ ಹೇಳಿದ್ದೇನು?

ಅಷ್ಟಕ್ಕೂ ಕಿಚ್ಚ ಹೇಳಿದ್ದೇನು ಎಂದು ನೋಡುವುದಾದರೆ, ನಾನು ಇಲ್ಲಿಯವರೆಗೂ ನಮ್ಮ ಅಭಿಮಾನಿಗಳಿಗೆ ಏನೂ ಮಾತನಾಡದೇ ಸುಮ್ಮನಿದ್ದೇನೆ. ನಾನು ಸುಮ್ಮನಿದ್ದ ಮಾತ್ರಕ್ಕೆ ನನ್ನಿಂದು ಏನು ಆಗಲ್ಲ ಅಂತಲ್ಲ. ತಾಳ್ಮೆಗೂ ಒಂದು ಮಿತಿ ಇದೆ. ಎಲ್ಲವನ್ನು ಸಹಿಸಿಕೊಂಡು ಇರಲಾಗದು. ಇದೇ ಡಿ.25ಕ್ಕೆ ಒಂದು ಸಿನಿಮಾ ಬರುತ್ತಿದೆ. ಇನ್ನೊಂದೆಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗುತ್ತಿದೆ. ಆ ಯುದ್ಧಕ್ಕೆ ನಾವು ರೆಡಿಯಾಗಿದ್ದೇವೆ. ಏಕೆಂದರೆ, ನಾವು ನಮ್ಮ ಮಾತಿಗೆ ಬದ್ದ ಎಂದು ಸುದೀಪ್​ ಹೇಳಿದರು.

ದರ್ಶನ್​ ಅಭಿಮಾನಿಗಳ ಆಕ್ರೋಶ

ಅಂದಹಾಗೆ, ಇಲ್ಲಿ ಸುದೀಪ್​ ಅವರು ಯಾರ ಹೆಸರನ್ನು ಸಹ ಉಲ್ಲೇಖಿಸಲಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್​ ಅಭಿಮಾನಿಗಳು ಸುದೀಪ್​ ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಸುದೀಪ್​ ಅವರು ನಮ್ಮನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ ಎಂದು ಭಾವಿಸಿರುವ ದರ್ಶನ್​ ಅಭಿಮಾನಿಗಳು ಸುದೀಪ್​ ವಿರುದ್ಧ ಹರಿಹಾಯ್ದಿದ್ದಾರೆ. ಸುದೀಪ್​ ಅವರ ತೇಜೋವಧೆ ಮಾಡುತ್ತಿದ್ದು, ಇನ್ನೂ ಬಿಡುಗಡೆಯಾಗದ ಮಾರ್ಕ್​ ಸಿನಿಮಾದ ಬಗ್ಗೆ ನೆಗೆಟಿವ್​ ಹರಡುತ್ತಿದ್ದಾರೆ. ಹಳೆಯ ವಿಚಾರಗಳನ್ನು ಕೆದುಕುತ್ತಾ ಸುದೀಪ್​ ಅವರ ಇಮೇಜ್​ಗೆ ಧಕ್ಕೆ ತರುವ ಕೆಲಸಕ್ಕೆ ದರ್ಶನ್​ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವರು ಇಳಿದಿದ್ದಾರೆ. ಇದರಿಂದ ದರ್ಶನ್​ ಹಾಗೂ ಸುದೀಪ್​ ಅಭಿಮಾನಿಗಳ ನಡುವೆ ಸ್ಟಾರ್​ ವಾರ್​ ಶುರುವಾಗಿದೆ.

ಸುದೀಪ್​ ಹೇಳಿದ್ದು ಯಾರಿಗೆ?

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಯನ್ನು ನೋಡಿ ಸಹನೆ ಕಳೆದುಕೊಂಡ ಸುದೀಪ್​, ವೇದಿಕೆಯ ಮೇಲೆಯೇ ತಮ್ಮ ಆಕ್ರೋಶದ ಮಾತುಗಳನ್ನು ಆಡಿದರು. ಮಾರ್ಕ್​ ಸಿನಿಮಾ ಡಿ.25ಕ್ಕೆ ಬಿಡುಗಡೆಯಾಗುತ್ತಿದೆ. ಆದರೆ, ಕಳೆದ ಒಂದು ವಾರದಿಂದ ಮಾರ್ಕ್​ ಸಿನಿಮಾ ಬಗ್ಗೆ ನೆಗೆಟಿವ್​ ಪ್ರಚಾರಗಳು ಹಬ್ಬಿವೆ. ಅಲ್ಲದೆ, ಸಿನಿಮಾವನ್ನು ಪೈರಸಿ ಮಾಡಿ ಹಂಚುತ್ತೇವೆ ಎಂಬ ಬೆದರಿಕೆಗಳು ಬರುತ್ತಿವೆ. ಮಾರ್ಕ್​ ಸಿನಿಮಾ ಕನ್ನಡ ಸಿನಿಮಾ ಅಲ್ಲ, ಅದೊಂದು ತಮಿಳು ಸಿನಿಮಾ, ಯಾರೂ ಕೂಡ ಮಾರ್ಕ್​ ಸಿನಿಮಾವನ್ನು ನೋಡಬೇಡಿ ಎಂದು ಜಾಲತಾಣದಲ್ಲಿ ಅನೇಕರು ಪೋಸ್ಟ್​ಗಳನ್ನು ಹರಿಬಿಡುತ್ತಿದ್ದಾರೆ. ಅಲ್ಲದೆ, ಸುದೀಪ್​ ಅವರು ಕಾವೇರಿ ನೀರು ತಮಿಳುನಾಡಿಗೆ ಸೇರಿದ್ದು ಎಂದು ತಮಿಳುನಾಡಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಹ ಹರಿಬಿಡುತ್ತಿದ್ದಾರೆ. ಹೀಗೆ, ಇಲ್ಲಸಲ್ಲದ ಪೋಸ್ಟ್​ಗಳನ್ನು ಮಾಡುತ್ತಿದ್ದಾರೆ. ಇದು ಸುದೀಪ್​ ಅವರ ಗಮನಕ್ಕೆ ಬಂದಿದ್ದು, ಹುಬ್ಬಳ್ಳಿ ಪ್ರೀರಿಲೀಸ್​ ಈವೆಂಟ್​ ವೇದಿಕೆಯಲ್ಲೇ ಕಿಚ್ಚ ಗುಡುಗಿದ್ದಾರೆ. ಆದರೆ, ಸುದೀಪ್​ ಅವರು ಯಾರನ್ನೋ ಉದ್ದೇಶಿಸಿ ನೇರವಾಗಿ ಈ ಮಾತುಗಳನ್ನು ಹೇಳಿಲ್ಲ. ತಮ್ಮ ಚಿತ್ರದ ಪರ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ. ಆದರೆ, ದರ್ಶನ್​ ಅಭಿಮಾನಿಗಳು, ಸುದೀಪ್​ ಅವರು ತಮಗೇ ಹೇಳಿದ್ದಾರೆಂದು ಭಾವಿಸಿ, ಜಾಲತಾಣದಲ್ಲಿ ಸುದೀಪ್​ ವಿರುದ್ಧ ಮುಗಿಬಿದ್ದಿದ್ದಾರೆ.

ದರ್ಶನ್​ ಪತ್ನಿ ಟಾಂಗ್​ ಕೊಟ್ರಾ?

ಸುದೀಪ್​ ಹೇಳಿಕೆ ಬೆನ್ನಲ್ಲೇ ದರ್ಶನ್​ ಪತ್ನಿ ನೀಡಿರುವ ಹೇಳಿಕೆ ಕೂಡ ಇದೀಗ ಜಾಲತಾಣದಲ್ಲಿ ಹಲ್​ಚಲ್​ ಎಬ್ಬಿಸಿದೆ. ಡೆವಿಲ್​ ಸಿನಿಮಾದ ವಿಜಯಯಾತ್ರೆ ಮಾಡುತ್ತಿರುವ ವಿಜಯಲಕ್ಷ್ಮೀ, ವೇದಿಕೆಯೊಂದಲ್ಲಿ ಅಭಿಮಾನಿಗಳ ಮುಂದೆ ಮಾತನಾಡುವಾಗ, ಕೆಲವೊಂದು ವ್ಯಕ್ತಿಗಳು ದರ್ಶನ್ ಅವರು ಇಲ್ಲದೇ ಇದ್ದಾಗ, ಅವರ​ ಬಗ್ಗೆ ಹಾಗೂ ಅವರ ಫ್ಯಾನ್ಸ್​ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವುದು ಹಾಗೂ ಮಾಧ್ಯಮಗಳಲ್ಲಿ ಕೂತು ಮಾತನಾಡುತ್ತಿದ್ದಾರೆ. ಅದೇ ಜನರು ದರ್ಶನ್​ ಅವರು ಇದ್ದಾಗ ಅವರು ಬೆಂಗಳೂರಲ್ಲಿ ಇರ್ತಾರಾ? ಇಲ್ವಾ? ಅಂತಾ ಗೊತ್ತಾಗುವುದೇ ಇಲ್ಲ. ಹಾಗೇ ಎಲ್ಲಿ ಮಾಯವಾಗ್ತಾರೆ ಅಂತಾನೂ ಗೊತ್ತಾಗುವುದಿಲ್ಲ. ಅಂಥವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಜಯಲಕ್ಷ್ಮೀ ಅವರು ಸುದೀಪ್​ ಅವರಿಗೆ ಟಾಂಗ್​ ಕೊಟ್ಟಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ. ಇನ್ನು ಕೆಲವರು ವಿಜಯಲಕ್ಷ್ಮೀ ವಿರುದ್ಧ ಕಿಡಿಕಾರುತ್ತಿದ್ದಾರೆ. ಮೊದಲು ನಿಮ್ಮ ಗಂಡ ಮಾಡಿರುವ ಕೆಲಸ ಏನು ಅನ್ನೋದು ನಿಮಗೆ ಗೊತ್ತಿರಲಿ ಎಂದು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
ಸದ್ಯ ಸುದೀಪ್​ ಹೇಳಿದ ಮಾತಿನಿಂದ ಸ್ಯಾಂಡಲ್​ವುಡ್​ನಲ್ಲಿ ಮತ್ತೊಮ್ಮೆ ಸ್ಟಾರ್​ ವಾರ್​ ಜತೆಗೆ ಫ್ಯಾನ್ಸ್​ ವಾರ್​ ಕೂಡ ಶುರುವಾಗಿದೆ. ಮಾರ್ಕ್​ ಬಿಡುಗಡೆಗೆ ಇನ್ನೂ ಕೆಲವು ದಿನಗಳು ಬಾಕಿ ಉಳಿದಿದ್ದು, ಈ ಫ್ಯಾನ್ಸ್​ ವಾರ್​ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡಬೇಕಿದೆ. ಸುದೀಪ್​ ಹಾಗೂ ವಿಜಯಲಕ್ಷ್ಮೀ ಅವರ ಹೇಳಿಕೆ ಬಗ್ಗೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.