ಎಲ್ರ ಕಾಲೆಳಿಯತ್ತೆ ಕಾಲ ಪೋಸ್ಟರ್
- ಚಂದನ್ ನಟನೆಯ, ಸುಜಯ್ ಶಾಸ್ತ್ರಿ ನಿರ್ದೇಶನದ ಚಿತ್ರ
- ಇದೇ 17ಕ್ಕೆ ರಾಜ್ಯಾದ್ಯಂತ ಬಿಡುಗಡೆ
- ರೆಟ್ರೋ ಕಥೆಯಲ್ಲಿ ಕುತೂಹಲ, ನವಿರಾದ ಹಾಸ್ಯ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ರೆಟ್ರೋ ಹಿನ್ನೆಲೆ ಸಿನಿಮಾಗಳ ಸಂಖ್ಯೆಹೆಚ್ಚುತ್ತಿವೆ. ಇದೇ ವರ್ಷ ‘ಲ್ಯಾಂಡ್‌ಲಾರ್ಡ್’, ‘ದ ರೈಸ್ ಆಫ್ ಅಶೋಕ’, ‘ಮಾರ್ನಮಿ’ ಸೇರಿ ಕೆಲ ಸಿನಿಮಾಗಳು ರಿಲೀಸ್ ಆಗಿದ್ದವು. ಇದೀಗ ಈ ಸಾಲಿಗೆ ಸುಜಯ್ ಶಾಸ್ತ್ರಿ ನಿರ್ದೇಶನದ ‘ಎಲ್ರ ಕಾಲೆಳಿಯತ್ತೆ ಕಾಲ’ ಸೇರ್ಪಡೆಯಾಗುತ್ತಿದೆ. ಇದು 90ರ ಕಾಲಘಟ್ಟದ ಕಥೆಯಾಗಿದ್ದು, ಇದೇ 17ಕ್ಕೆ ತೆರೆ ಮೇಲೆ ಬರಲು ರೆಡಿಯಾಗುತ್ತಿದೆ. ಗಾಯಕ, ರ‌್ಯಾಪರ್ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಆಯ್ಕೆಯಾದ ಹಾಗೂ ಮುಹೂರ್ತವಾದ ಚಿತ್ರವಿದು. ಆದರೆ, ‘ಸೂತ್ರಧಾರಿ’, ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಬಳಿಕ ರಿಲೀಸ್ ಆಗುತ್ತಿರುವ ಮೂರನೇ ಚಿತ್ರವಾಗಿದೆ. ಅವರಿಗಿಲ್ಲಿ ಅರ್ಚನಾ ಕೊಟ್ಟಿಗೆ ಜೋಡಿಯಾಗಿದ್ದಾರೆ. ಎರಡೂವರೆ ನಿಮಿಷದ ಟ್ರೇಲರ್‌ನಲ್ಲಿ ಚಂದನ್ ರೆಟ್ರೋ ಶೈಲಿಯ ಅವತಾರದಲ್ಲಿ ಗಮನಮ ಸೆಳೆಯುತ್ತಾರೆ. ಬೆಂಗಳೂರಿನಿಂದ ಹಳ್ಳಿಗೆ ಬಂದಿರುವ ಚಂದನ್, ವಾಪಸ್ಸು ಬೆಂಗಳೂರಿಗೆ ಹೋಗಲು ಹೆಣಗಾಡುತ್ತಿದ್ದಾರೆ. ಹಾಸ್ಯದ ಜತೆಗೆ ಕೆಲವು ಸಸ್ಪೆನ್ಸ್ ಅಂಶಗಳನ್ನು ಟ್ರೇಲರ್‌ನಲ್ಲಿ ಕಾಣಬಹುದು. ಸುಜಯ್ ಶಾಸಿ, ‘ರಿಯಾಲಿಟಿ ಶೋವೊಂದರಲ್ಲಿ ಚಂದನ್ ಶೆಟ್ಟಿ ನೋಡಿದ ಮೇಲೆ ನಮ್ಮ ಕಥೆಗೆ ಇವರೇ ನಾಯಕನಾಗಿ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೆವು. ಚಿತ್ರೀಕರಣಕ್ಕೂ ಮುನ್ನ ಪೂರ್ವ ತಯಾರಿ ನಡೆಸಲಾಗಿದ್ದು, ಚಂದನ್ ತುಂಬ ಶ್ರಮಪಟ್ಟಿದ್ದಾರೆ. ರಾಜಗುರು ಎಲ್ಲರ ಮನಸ್ಸಿಗೆ ಹತ್ತಿರವಾಗುವಂತಹ ಕಥೆ ಬರೆದಿದ್ದಾರೆ’ ಎಂದು ಹೇಳಿದರು. ಚಂದನ್, ಅರ್ಚನಾ ಜತೆ ಮಂಜು ಪಾವಗಡ, ದಿ. ರಾಕೇಶ್ ಪೂಜಾರಿ, ಸುಜಯ್ ಶಾಸಿ, ಮಹಾಂತೇಶ್ ಕಲಾಬಳಗದಲ್ಲಿದ್ದಾರೆ.