- ಮಾ.19ಕ್ಕೆ ಯಶ್ 'ಟಾಕ್ಸಿಕ್' ತೆರೆಗೆ ಬರಲು ಸಿದ್ಧ
- ಈಗಾಗಲೇ ಮೊದಲ ಟೀಸರ್ ಭಾರೀ ವಿವಾದ, ಟೀಕೆಗಳಿಗೆ ಗುರಿ
- ರಕ್ತಸಿಕ್ತ ದೃಶ್ಯಗಳು, ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರ!
- ಟಾಕ್ಸಿಕ್ ರನ್ಟೈಮ್ ಕೇಳಿದ್ರೆ ಇಷ್ಟೊಂದಾ ಅಂತೀರಾ...
ಬೆಂಗಳೂರು: ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್, ನಟ ಯಶ್ ಅಭಿನಯದ ಹಾಗೂ ಮಾಲಿವುಡ್ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' (Toxic) ಚಿತ್ರದ ಹವಾ ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಬಲು ಜೋರಾಗಿದೆ. ಈಗಾಗಲೇ ಸಿನಿಮಾದ ಮೊದಲು ಮತ್ತು ಎರಡನೇ ಟೀಸರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುವುದರ ಜತೆಗೆ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿವೆ. ಈ ಮಧ್ಯೆ, ಚಿತ್ರದ ಒಂದು ಹಾಡು ಇದೇ ಮಾ.02ರಂದು ರಿಲೀಸ್ ಆಗಲಿದ್ದು, ಸಿನಿಮಾದ ಒಟ್ಟು ರನ್ಟೈಮ್ ಎಷ್ಟು ಎಂಬುದರ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ.
ಇದೇ ಮಾರ್ಚ್ 19ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿರುವ ಟಾಕ್ಸಿಕ್, ಕನ್ನಡ, ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲು ಎದುರುನೋಡುತ್ತಿದೆ. ಮತ್ತೊಂದೆಡೆ, ಇದೇ ದಿನದಂದು ರಣವೀರ್ ಸಿಂಗ್ ಅಭಿನಯದ ಬ್ಲಾಕ್ಬಸ್ಟರ್ 'ಧುರಂಧರ್' ಸಿನಿಮಾ ಸೀಕ್ವೆಲ್ ಕೂಡ ಬಿಡುಗಡೆಯಾಗುತ್ತಿದೆ. ಇದು ಜಾಗತಿಕ ಹಾಗೂ ದೇಶಿಯ ಬಾಕ್ಸ್ ಆಫೀಸ್ನಲ್ಲಿ ಭಾರೀ ಪೈಪೋಟಿಗೆ ಸಾಕ್ಷಿಯಾಗಲಿದೆ.
ಇಷ್ಟೊತ್ತು ಕುಳಿತು ನೋಡಬೇಕಾ?
'ಗುಲ್ಟೇ' ಸಿನಿ ವರದಿ ಪ್ರಕಾರ, ಯಶ್ ಅವರ ಟಾಕ್ಸಿಕ್ ಚಿತ್ರದ ರನ್ಟೈಮ್ ಬರೋಬ್ಬರಿ 3 ಗಂಟೆ 15 ನಿಮಿಷವಿದೆ. ಅಮೆರಿಕನ್ ಶೋಗಳನ್ನು ಗಮನದಲ್ಲಿಟ್ಟುಕೊಂಡು ಇಷ್ಟು ಗಂಟೆಗಳ ಕಾಲ ಸಿನಿಮಾವನ್ನು ತಯಾರಿಸಲಾಗಿದೆ. ಮತ್ತೊಂದೆಡೆ, 'ಧುರಂಧರ್ 2: ದಿ ರಿವೆಂಜ್' ಚಿತ್ರವು 3 ಗಂಟೆ 40 ನಿಮಿಷಗಳ ಲೆಂಥಿ ರನ್ಟೈಮ್ ಹೊಂದಿದೆ ಎಂದು ವರದಿಗಳು ಉಲ್ಲೇಖಿಸಿವೆ.
'ಟಾಕ್ಸಿಕ್' ವಿವಾದ
'ಕೆಜಿಎಫ್' ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ನಟ ರಾಕಿಂಗ್ ಸ್ಟಾರ್ ಯಶ್ 40ನೇ ವಸಂತಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಮೊದಲ ಟೀಸರ್ ರಿಲೀಸ್ ಆಯಿತು. ಟೀಸರ್ನ ಆರಂಭದಲ್ಲಿ ಮೂಡಿಬಂದ ಹಸಿಬಿಸಿ ದೃಶ್ಯವಂತು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿ, ಹಲವು ಕಾನೂನು ದೂರುಗಳಿಗೂ ಕಾರಣವಾಯಿತು. ಸಿನಿಮಾದ ನಿರ್ದೇಶಕಿ ವಿರುದ್ಧ ತೀವ್ರ ಟೀಕೆಗಳು ಹರಿದುಬಂದಿತು. ಈಗ ಎರಡನೇ ಟೀಸರ್ ಯಶ್ ಪಾತ್ರದ ಮೇಲೆ ಭಾರೀ ಕುತೂಹಲವನ್ನು ಕೆರಳಿಸಿದೆ. ಕಾರಣ, ಇದರಲ್ಲಿ ತೋರಿಸಲಾದ ಸ್ಟಾರ್ ನಟನ ದ್ವಿಪಾತ್ರ.
ಮಾ.19 ಡ್ಯಾಡಿ ಕಮ್ಸ್ ಹೋಮ್
2026ರ ಮಾರ್ಚ್ 19ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ಗೆ ಸಜ್ಜಾಗಿರುವ 'ಟಾಕ್ಸಿಕ್' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಥೋವಿನೋ ಥಾಮಸ್, ಅಕ್ಷಯ್ ಓಬ್ರಾಯ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).