ಕನ್ನಡದ ನಟಿ ರುಕ್ಮಿಣಿ ವಸಂತ್ 
ಸ್ಯಾಂಡಲ್‌ವುಡ್

ಸ್ಟಾರ್​ ನಟರ ರೇಜಿಂಗೆ ಕನ್ನಡದ ರುಕ್ಕು! ಒಂದು ಚಿತ್ರಕ್ಕೆ 'ಕಾಂತಾರ' ಕನಕಾವತಿ ಪಡೆಯೋ ಸಂಭಾವನೆ​ ಕೇಳಿದ್ರೆ ಹುಬ್ಬೇರುತ್ತೆ

ಪ್ರಮುಖ ಮುಖ್ಯಾಂಶಗಳು

  • ಕನಕಾವತಿ ಪಾತ್ರದಲ್ಲಿ ಮಿಂಚಿದ ಸೌತ್ ಬ್ಯೂಟಿ ರುಕ್ಮಿಣಿ ವಸಂತ್
  • ಬಿಗ್ ಬಜೆಟ್​ ಚಿತ್ರಗಳಿಗೆ ಕನ್ನಡದ ಬ್ಯೂಟಿಯೇ ನಾಯಕಿ
  • ಹೆಚ್ಚಾಯ್ತು ರುಕ್ಮಿಣಿ ವಸಂತ್​ ಬೇಡಿಕೆ, ಡಬಲ್ ಆಯ್ತು ಸಂಭಾವನೆ
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ' ಪ್ರೀಕ್ವೆಲ್​ ಚಿತ್ರದಲ್ಲಿ ಕನಕಾವತಿ ಪಾತ್ರದಲ್ಲಿ ಮಿಂಚಿದ ಸೌತ್ ಬ್ಯೂಟಿ ರುಕ್ಮಿಣಿ ವಸಂತ್​ಗೆ (Rukmini Vasanth) ಈಗ ಅಭಿಮಾನದ ಅಲೆ ಜೋರಾಗಿದೆ. ಕನ್ನಡದ 'ಬೀರ್​ಬಲ್​' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ರುಕ್ಕು, ಈಗ ಟಾಲಿವುಡ್​ ಮತ್ತು ಕಾಲಿವುಡ್​ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆದಿದ್ದಾರೆ. ತೆಲುಗು, ತಮಿಳು ಚಿತ್ರರಂಗದಲ್ಲಿಯೂ ಸಖತ್ ಸದ್ದು ಮಾಡುತ್ತಿರುವ ರುಕ್ಮಿಣಿ ಅವರ ಸಂಭಾವನೆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

'ಸಪ್ತ ಸಾಗರದಾಚೆ' ದಾಟಿ

ಕನ್ನಡದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದ ರುಕ್ಮಿಣಿ, ಬಳಿಕ ತಮಿಳು ಚಿತ್ರಗಳಲ್ಲಿ ನಟಿಸಿ, ಸಿನಿಪ್ರಿಯರಿಂದ ಸೈಎನಿಸಿಕೊಂಡಿದ್ದಾರೆ. ಇತ್ತೀಚೆಗೆ, ಅವರು ನಟಿಸಿದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ಕಾಂತಾರ ಚಾಪ್ಟರ್ 1' ಹೊಸ ಆಯಾಮ, ಖ್ಯಾತಿಯನ್ನೇ ತಂದುಕೊಟ್ಟಿದೆ. ಸಿನಿಮಾದ ಕೊನೆಯವರೆಗೂ ಕಾಣಿಸಿಕೊಳ್ಳುವ ರುಕ್ಮಿಣಿ, ರಾಜಕುಮಾರಿ ಕನಕಾವತಿ ಪಾತ್ರದಲ್ಲಿ ಸಿನಿಪ್ರೇಕ್ಷಕರ ಹುಬ್ಬೇರಿಸಿದರು. ತಮ್ಮ ನಟನೆ, ಆ್ಯಕ್ಷನ್​ ಮತ್ತು ಸೌಂದರ್ಯದಿಂದಲೇ ನೋಡುಗರನ್ನು ಮೋಡಿ ಮಾಡಿರುವ ಈ ಬ್ಯೂಟಿ ಸದ್ಯ ಹಲವು ಬಿಗ್ ಬ್ಯಾನರ್​ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

ಟ್ರೆಂಡಿಂಗ್​ ಪಟ್ಟಿಯಲ್ಲಿ ಕನ್ನಡದ ಬೆಡಗಿ

ಟ್ರೆಂಡಿಂಗ್​ ಪಟ್ಟಿಯಲ್ಲಿರುವ ರುಕ್ಮಿಣಿ ವಸಂತ್ ಅವರ ಸಂಭಾವನೆ ವಿಚಾರ ಸದ್ಯ ಟಾಲಿವುಡ್​ ಅಂಗಳದಲ್ಲಿ ಸದ್ದು ಮಾಡುತ್ತಿದೆ. ವರದಿಗಳ ಪ್ರಕಾರ, ಪ್ರಸ್ತುತ ನಟಿಯ ಕೈಯಲ್ಲಿ ಮೂರರಿಂದ ನಾಲ್ಕು ಸಿನಿಮಾಗಳಿವೆ. 'ಕಾಂತಾರ' ಚಿತ್ರದ ಬೆನ್ನಲ್ಲೇ ರುಕ್ಮಿಣಿ ಅವರು ತಮ್ಮ ಸಂಭಾವನೆಯನ್ನು ಈಗ ಡಬಲ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಹಾಗಿದ್ದರೆ, ಒಂದು ಬಿಗ್ ಪ್ರಾಜೆಕ್ಟ್​ಗೆ ನಟಿ ಎಷ್ಟು ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂಬುದರ ಡಿಟೇಲ್ಸ್ ಹೀಗಿದೆ ನೋಡಿ.
ಬಾಲಿವುಡ್​ನಂತಹ ಸ್ಟಾರ್​ ನಟಿಯರನ್ನೇ ಹಿಂದಿಕ್ಕಿರುವ ಕನ್ನಡದ ಬ್ಯೂಟಿ, ಪ್ರತಿ ಸಿನಿಮಾಗೆ ಐದು ಕೋಟಿ ರೂ.ಗೂ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ಈ ಲೆಕ್ಕಾಚಾರ ಗಮನಿಸಿದರೆ, ಸ್ಟಾರ್​ ನಟರಿಗೆ ಸಿಗುವ ಸಂಭಾವನೆಯೇ ನಟಿಗೂ ಸಿಗುತ್ತಿರುವುದು ನಿಜಕ್ಕೂ ಹುಬ್ಬೇರಿಸುವ ಸಂಗತಿಯೇ. ವಿಶೇಷವಾಗಿ, ಕನ್ನಡದ ನಟಿಗೆ ಈ ಮಟ್ಟಿಗಿನ ಬೇಡಿಕೆ ಮತ್ತು ಡಬಲ್​ ಸಂಭಾವನೆ ಸಿಗುತ್ತಿರುವುದು ನಿಜಕ್ಕೂ ಖುಷಿ ವಿಷಯವೇ.

'ಟಾಕ್ಸಿಕ್'​ನಲ್ಲಿ ಮೆಲಿಸಾ

ಗೀತು ಮೋಹನ್​ದಾಸ್​ ನಿರ್ದೇಶನದ ಹಾಗೂ ರಾಕಿಂಗ್ ಸ್ಟಾರ್ ಯಶ್​ ಅಭಿನಯದ 'ಟಾಕ್ಸಿಕ್' ಚಿತ್ರದಲ್ಲಿ ಐವರು ನಾಯಕಿಯರಿದ್ದಾರೆ. ಈ ಪೈಕಿ ರುಕ್ಮಿಣಿ ವಸಂತ್ ಕೂಡ ಒಬ್ಬರು. ಮೆಲಿಸಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ರುಕ್ಕು ಫಸ್ಟ್​ ಲುಕ್​, ನೋಡುಗರಲ್ಲಿ ಕುತೂಹಲ ಕೆರಳಿಸಿದೆ. ಇದೇ ಮಾ.19ರಂದು ಟಾಕ್ಸಿಕ್​ ಚಿತ್ರ ತೆರೆಗೆ ಬರಲಿದೆ. ಇನ್ನು ಜೂ. ಎನ್​ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬೊ ಜೊತೆ ತೆಲುಗಿನಲ್ಲಿ 'ಡ್ರ್ಯಾಗನ್' ಸಿನಿಮಾದಲ್ಲಿಯೂ ಅವರು ನಟಿಸುತ್ತಿದ್ದಾರೆ. ಇದು ಕೂಡ ಬಿಗ್ ಬಜೆಟ್​ ಚಿತ್ರವಾಗಿದ್ದು, ನಟಿಯ ಮೇಲಿನ ನಿರೀಕ್ಷೆಗಳನ್ನು ಹಿಂದಿಗಿಂತ ದುಪ್ಪಟ್ಟಾಗಿಸಿದೆ,(ಏಜೆನ್ಸೀಸ್).