ಟಾಕ್ಸಿಕ್​ ಚಿತ್ರದ ನಿರ್ದೇಶಕಿ ಗೀತು ಮೋಹನ್​ದಾಸ್​ 
ಸ್ಯಾಂಡಲ್‌ವುಡ್

"ತಪ್ಪುಗಳ ಹುಡುಕಾಟದಲ್ಲಿ..." ಚಿತ್ರದ​ ವಿರುದ್ಧ ಟೀಕೆಗಳ ಸುರಿಮಳೆ! ರೀಲ್​ ಮೂಲಕ 'ಟಾಕ್ಸಿಕ್​' ಗೀತು ಖಡಕ್ ತಿರುಗೇಟು

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ​ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ ಬಹುನಿರೀಕ್ಷಿತ ಸಿನಿಮಾ ಟೀಸರ್​
  • ಹಸಿಬಿಸಿ ದೃಶ್ಯಗಳ ಬೆನ್ನಲ್ಲೇ ನಿರ್ದೇಶಕಿ ಗೀತು ಮೋಹನ್​ದಾಸ್​ ವಿರುದ್ಧ ವ್ಯಾಪಕ ಟೀಕೆ
  • ರೀಲ್​ ವಿಡಿಯೋ ಮೂಲಕ ಖಡಕ್​ ತಿರುಗೇಟು ಕೊಟ್ಟ ಗೀತು
ಬೆಂಗಳೂರು: ಕೆಜಿಎಫ್​ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಬೆಳೆದಿರುವ ನಟ ರಾಕಿಂಗ್​ ಸ್ಟಾರ್​ ಯಶ್ 40ನೇ ವಸಂತಕ್ಕೆ ಬಹುನಿರೀಕ್ಷಿತ 'ಟಾಕ್ಸಿಕ್​' ಚಿತ್ರದ ಟೀಸರ್​ ರಿಲೀಸ್ ಆಯಿತು. ಟೀಸರ್​ನ ಆರಂಭದಲ್ಲಿ ಮೂಡಿಬಂದ ಹಸಿಬಿಸಿ ದೃಶ್ಯವಂತು ಸದ್ಯ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಸಿನಿಮಾದ ನಿರ್ದೇಶಕಿ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಸರಣಿ ಟ್ರೋಲ್​, ಟೀಕೆಗಳ ಬೆನ್ನಲ್ಲೇ ಗೀತು ಮೋಹನ್​ದಾಸ್​ ಇನ್​ಸ್ಟಾಗ್ರಾಮ್​ ರೀಲ್​ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.
ಜ.8ರಂದು ಯಶ್ ಹುಟ್ಟುಹಬ್ಬಕ್ಕೆ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ನಿರ್ಮಾಪಕಿ ಗೀತು ಮೋಹನ್​ದಾಸ್​, ನಟನ ಅಭಿಮಾನಿಗಳಿಗೆಂದು ಸಿನಿಮಾದ ಟೀಸರ್ ಅನ್ನು ಬಿಡುಗಡೆಗೊಳಿಸಿದರು. ಅಂದುಕೊಂಡಂತೆ ರಿಲೀಸ್​ ಆದರೂ ಟೀಸರ್​ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚಿತು. ಕಾರಣ, ಅದರಲ್ಲಿನ ವಯಸ್ಕ-ಆಧಾರಿತ ದೃಶ್ಯಗಳು. ಇದು ಹಲವರ ಸಿಡಿನುಡಿಗೆ ಕಾರಣವಾಗಿದ್ದು, ಭಾರೀ ಟ್ರೋಲ್​ ಮತ್ತು ಅಸಮಾಧಾನಕ್ಕೆ ಗುರಿಯಾಗಿದೆ.

ಮಾಲಿವುಡ್​ನಲ್ಲಿ ಗೀತು ಟ್ರೋಲ್​

ಗೀತು ವಿರುದ್ಧ ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಇದಕ್ಕೆ ಕಾರಣ 'ಕಸಬಾ' (Kasaba) ಚಿತ್ರದ ವಿವಾದ. 2017ರಲ್ಲಿ ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFK), ನಟಿ ಪಾರ್ವತಿ ತಿರುವೋತ್ತು ಅವರು ಮಮ್ಮುಟ್ಟಿ ಅಭಿನಯದ 'ಕಸಬಾ' ಚಿತ್ರವನ್ನು ಟೀಕಿಸಿದರು. ಈ ಸಿನಿಮಾದಲ್ಲಿ ಮಹಿಳೆಯರನ್ನು ಕೀಳಾಗಿ ಚಿತ್ರಿಸಲಾಗಿದೆ ಮತ್ತು ಮಹಿಳಾ ವಿರೋಧಿ ಸಂಭಾಷಣೆಗಳಿವೆ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಗೀತು ಮೋಹನ್‌ದಾಸ್ ಅವರು ಪಾರ್ವತಿ ಅವರಿಗೆ ಬೆಂಬಲ ನೀಡಿ, ಕಸಬಾ ಸಿನಿಮಾವನ್ನು ಟೀಕಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಮ್ಮುಟ್ಟಿ ಫ್ಯಾನ್ಸ್​, ಆ ಸಮಯದಲ್ಲಿ ಜಾಲತಾಣದಲ್ಲಿ ಗೀತು ಮತ್ತು ಪಾರ್ವತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಇದೀಗ ಟಾಕ್ಸಿಕ್​ ಸಿನಿಮಾದ ಟೀಸರ್​ ಬಿಡುಗಡೆಯಾಗಿದ್ದು, ಹಸಿಬಿಸಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಹಾಲಿವುಡ್​ ಸಿನಿಮಾಗಳಲ್ಲಿ ಇರುವಂತೆಯೇ ಟಾಕ್ಸಿಕ್​ ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳಿವೆ. ಆ ದೃಶ್ಯಗಳನ್ನು ಮನೆ ಮಂದಿ ಒಟ್ಟಿಗೆ ನೋಡಲು ಆಗುವುದಿಲ್ಲ. ಹೆಣ್ಣಿನ ಗೌರವದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಿದ್ದ ಗೀತು, ಇದೀಗ ತಮ್ಮ ಚಿತ್ರದಲ್ಲಿ ಮಾಡಿರುವುದೇನು ಎಂದು ವ್ಯಂಗ್ಯವಾಡಿದ್ದಾರೆ. ತನ್ನ ಚಿತ್ರದ ವಿರುದ್ಧ ಕೇಳಿಬರುತ್ತಿರುವ ನೆಗೆಟಿವ್ ಕಮೆಂಟ್​ ಮತ್ತು ಸರಣಿ ಟ್ರೋಲ್​ಗಳಿಂದ ಕೆರಳಿರುವ ಗೀತು, ಕಡೆಗೂ ಪರೋಕ್ಷವಾಗಿ ಇದೆಲ್ಲದಕ್ಕೂ ಪ್ರತಿಕ್ರಿಯಿಸಿದ್ದಾರೆ.

ಗೀತು ರೀಲ್​ನಲ್ಲಿ ಹೇಳಿರುವುದೇನು?

"ಜನರು ಸ್ತ್ರೀಯಿಂದ ದೊರೆಯುವ ಖುಷಿ, ಒಪ್ಪಿಗೆ ಸೇರಿ ಇತ್ಯಾದಿ ತಪ್ಪುಗಳನ್ನು ಕಂಡುಹಿಡಿಯುವಾಗ ನಾನಿಲ್ಲಿ ಹಾಯಾಗಿರುವೆ" ಎಂದು ರೀಲ್​ ವಿಡಿಯೋ ಮೇಲೆ ಬರೆದುಕೊಂಡಿದ್ದಾರೆ. ಇಲ್ಲಿಯವರೆಗೆ ಸೋಷಿಯಲ್ ಮೀಡಿಯಾ ಮೂಲಕ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ನಿರ್ದೇಶಕಿ, ಯಾವ ಮಾಧ್ಯಮಗಳ ಮುಂದೆಯೂ ತಮ್ಮ ಸಿನಿಮಾ ಕುರಿತಂತೆ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).