ಉತ್ತರ, ಅಭ್ಯಂಜನ ಚಿತ್ರತಂಡ 
ಸ್ಯಾಂಡಲ್‌ವುಡ್

ದಿನೇಶ್ ಬಾಬುಗೆ ಡಬಲ್ ಧಮಾಕಾ! : ನಿರ್ದೇಶಕನ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ

ಶಿವಮಲ್ಲಯ್ಯ ಸ್ಥಾವರಮಠ

ಪ್ರಮುಖ ಮುಖ್ಯಾಂಶಗಳು

  • ಉತ್ತರ, ಅಭ್ಯಂಜನ ಸಿನಿಮಾ ಒಂದೇ ದಿನ ರಿಲೀಸ್
  • ದಿನೇಶ್ ಬಾಬು ನಿರ್ದೇಶನದ ಎರಡು ಸಿನಿಮಾಗಳು
  • ಇದೇ ಜೂನ್ 12ಕ್ಕೆ ಸಿನಿಮಾ ರಿಲೀಸ್
ಬೆಂಗಳೂರು: ಒಬ್ಬ ನಿರ್ದೇಶಕನ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿರುವುದು ತೀರಾ ವಿರಳ. ಕಳೆದ ವರ್ಷ ಜೆ.ಜೆ.ಶ್ರೀನಿವಾಸ್ ನಿರ್ದೇಶಿಸಿದ್ದ ‘ಕಸ್ಟಡಿ’, ‘ಫಲ್ಗುಣಿ’ ಚಿತ್ರಗಳು ಒಂದೇ ದಿನ ಬಿಡುಗಡೆಯಾಗಿ ಅಚ್ಚರಿ ಮೂಡಿಸಿದ್ದವು. ಇದೀಗ ಮತ್ತೊಬ್ಬ ನಿರ್ದೇಶಕನ ಎರಡು ಚಿತ್ರಗಳು ಒಂದೇ ದಿನ ತೆರೆ ಮೇಲೆ ಬರುತ್ತಿವೆ. ಕನ್ನಡದ ‘ಸುಪ್ರಭಾತ’, ‘ಅಮೃತವರ್ಷಿಣಿ’ ಖ್ಯಾತಿಯ ನಿರ್ದೇಶಕ ದಿನೇಶ್ ಬಾಬು ಆ್ಯಕ್ಷನ್-ಕಟ್ ಹೇಳಿರುವ ‘ಉತ್ತರ’, ‘ಅಭ್ಯಂಜನ’ ಎರಡು ಸಿನಿಮಾಗಳು ಇದೇ ಶುಕ್ರವಾರ (ಜೂ.12) ರಿಲೀಸ್ ಆಗುತ್ತಿವೆ. ಇದರಿಂದಾಗಿ ಆ ದಿನ ದಿನೇಶ್ ಬಾಬುಗೆ ಡಬಲ್ ಧಮಾಕಾ. ರಿಲೀಸ್‌ಗೆ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಎರಡು ಸಿನಿಮಾಗಳ ಟ್ರೇಲರ್ ಇತ್ತೀಚೆಗೆ ಒಂದೇ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು. ಸಾಮಾಜಿಕ ಕಥಾ ಹಂದರದ ‘ಉತ್ತರ’ ಚಿತ್ರದಲ್ಲಿ ನಟಿ ತಾರಾ ಅನುರಾಧಾ, ನಾರಾಯಣಸ್ವಾಮಿ, ಅಶ್ವಿನಿಗೌಡ, ಸಂಪ್ರತಿ ಆಳ್ವ, ಅರ್ಜುನ್ ಚವಾಣ್ ಕಲಾಬಳಗದಲ್ಲಿದ್ದಾರೆ. ತಂದೆ-ಮಗನ ಬಾಂಧವ್ಯ ಸಾರುವ ‘ಅಭ್ಯಂಜನ’ದಲ್ಲೂ ನಟ ನಾರಾಯಣಸ್ವಾಮಿ ನಾಯಕನಾಗಿ ಮುಂದುವರಿದಿದ್ದು, ಕರಿಸುಬ್ಬು, ಅಪೂರ್ವ ಭಾರದ್ವಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರಜಿನಿಕಾಂತ್, ವಿಷ್ಣುವರ್ಧನ್ ಸೇರಿ ಹಲವು ನಟರಿಗೆ ಕೇಶ ವಿನ್ಯಾಸಕಾರರಾಗಿ ಕೆಲಸ ಮಾಡಿರುವ ನಾಗೇಶ್ವರರಾವ್ ಈ ಎರಡು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.