- ಕಲ್ಟ್ ನಲ್ಲಿ ಭಗ್ನಪ್ರೇಮಿಯೊಬ್ಬನ ಅಂತರಾಳ ಸುಡುವ ಜ್ವಾಲೆಯಿದೆ.
- ಝೈದ್ ಖಾನ್ ನಟನೆಯಲ್ಲಿ ಮಾಗಿದ್ದಾರೆ. ಭಿನ್ನ-ವಿಭಿನ್ನ ಶೇಡ್‌ಗಳಲ್ಲಿ ಮಿಂಚಿದ್ದಾರೆ.
- ರಚಿತಾ ರಾಮ್ ಭಾವುಕರನ್ನಾಗಿಸುತ್ತಾರೆ, ಮಲೈಕಾ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದಾರೆ
ತಾರಾಗಣ: ಝೈದ್ ಖಾನ್, ರಚಿತಾ ರಾಮ್, ಮಲೈಕಾ ವಸುಪಾಲ್, ಅಚ್ಯುತ್ ಕುಮಾರ್, ರಂಗಾಯಣ ರಘು, ಅಲೋಕ್ ಮತ್ತಿತರರು
ಪ್ರೀತಿಯಲ್ಲಿ ಮೋಸ ಹೋಗುವ ಪ್ರೇಮಿಗಳ ಕುರಿತ ಸಿನಿಮಾಗಳು ಈಗಾಗಲೇ ಹಲವು ಬಂದಿವೆ. ಇದೇ ಹಾದಿಯಲ್ಲಿ ಅನಿಲ್ ಕುಮಾರ್ ನಿರ್ದೇಶನದ ‘ಕಲ್ಟ್’ ಇದ್ದರೂ, ನಿರೂಪಣೆ ಹಾಗೂ ತೆರೆ ಮೇಲೆ ತಂದಿರುವ ರೀತಿ ವಿಭಿನ್ನವಾಗಿದೆ. ಇನ್ನು ಕಥೆಗೆ ಪೂರಕವಾಗಿರುವ ಪಾತ್ರಗಳು ‘ಕಲ್ಟ್’ಅನ್ನು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿಸುತ್ತವೆ.
ಕೃಷ್ಣಾಪುರದ ಸ್ಪುರದ್ರೂಪಿ ಯುವಕ ಮಾಧವನಿಗೆ (ಝೈದ್ ಖಾನ್) ಅದೇ ಊರಿನ ಗೀತಾ (ಮಲೈಕಾ) ಮೇಲೆ ಬೆಟ್ಟದಷ್ಟು ಪ್ರೀತಿ. ಪ್ರತಿ ದಿನ ಆಕೆಯ ಜತೆ ಕಾಲ ಕಳೆಯಬೇಕು ಎನ್ನುವಷ್ಟು ಆಕೆಯನ್ನು ಹಚ್ಚಿಕೊಂಡಿರುತ್ತಾನೆ. ಇಂಜಿನಿಯರಿಂಗ್ ಓದಲು ಮಾಧವ ಮಣಿಪಾಲ್ ಹಾದಿ ಹಿಡಿಯಬೇಕಾಗುತ್ತದೆ. ಗೀತಾ ಕೂಡ ವ್ಯಾಸಂಗಕ್ಕೆ ಬೆಂಗಳೂರಿಗೆ ಬರುತ್ತಾಳೆ. ಪ್ರತಿದಿನ ಫೋನ್ ಮಾಡಿ ವಿಚಾರಿಸಿಕೊಳ್ಳುವವಳು ಒಮ್ಮೆ ಫೋನ್ ಸ್ವಿಚ್ ಆಫ್ ಮಾಡುತ್ತಾಳೆ. ಆಗ ಆತಂಕಕ್ಕೊಳಗಾಗುವ ಮಾಧವ ಆಕೆಯನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಾಗ ಗೀತಾಳ ನಿಜ ಸ್ವರೂಪ ಬಯಲಾಗುತ್ತದೆ. ಆಕೆಯ ವಂಚನೆಯಿಂದ ಮಾಧವ, ಮ್ಯಾಡಿಯಾಗಿ ಬದಲಾಗಿ ಕ್ರೂರಿಯಾಗುತ್ತಾನೆ. ಹಾಗಾದರೆ, ಭಗ್ನಪ್ರೇಮಿಯ ಮುಂದಿನ ಕಥೆಯೇನು? ಈತನ ಬದುಕಿನ ಅಂಧಕಾರಕ್ಕೆ ಯಾರಾದರೂ ‘ಇತಿ’ಶ್ರೀ ಹಾಡುತ್ತಾರಾ? ಎಂಬುದೇ ‘ಕಲ್ಟ್’ ಮುಂದಿನ ಕಥೆ.
‘ಕಲ್ಟ್’ ಟೈಟಲ್‌ಗೆ ತಕ್ಕಂತೆ ಹೆಚ್ಚು ರಕ್ತಪಾತ ಇಲ್ಲದಿದ್ದರೂ, ಭಗ್ನಪ್ರೇಮಿಯೊಬ್ಬನ ಅಂತರಾಳ ಸುಡುವ ಜ್ವಾಲೆಯಿದೆ. ಸ್ವಲ್ಪ ದೀರ್ಘ ಅನಿಸಿದರೂ ಅದಕ್ಕೆ ತಕ್ಕಂತೆ ರೊಮ್ಯಾಂಟಿಕ್ ಸಾಂಗ್, ಬಡಿದೆಚ್ಚರಿಸುವ ಸಂಭಾಷಣೆಯ ಮೂಲಕ ಅನಿಲ್‌ಕುಮಾರ್ ಕಥೆಯನ್ನು ಸಮದೂಗಿಸಿದ್ದಾರೆ. ಎಲ್ಲಿಯೂ ಬೋರ್ ಹೊಡೆಯದಂತೆ ನೋಡಿಕೊಂಡಿದ್ದಾರೆ. ಮೇಕಿಂಗ್, ಅದ್ದೂರಿ ಸೆಟ್‌ಗಳು ಗಮನ ಸೆಳೆಯುತ್ತವೆ. ಪ್ರತಿ ಪಾತ್ರಗಳಿಗೂ ಹಿನ್ನೆಲೆಯಿದ್ದು, ಲವ್, ಸೆಂಟಿಮೆಂಟ್, ತಂದೆಯ ಬಾಂಧವ್ಯ ಹಾಗೂ ಸ್ನೇಹ ಸೇರಿ ಹಲವು ಅಂಶಗಳ ಮೂಲಕ ಕಥೆ ಆಪ್ತವಾಗುತ್ತದೆ. ಝೈದ್ ಖಾನ್ ನಟನೆಯಲ್ಲಿ ಮಾಗಿದ್ದಾರೆ. ಭಿನ್ನ-ವಿಭಿನ್ನ ಶೇಡ್‌ಗಳಲ್ಲಿ ಮಿಂಚಿದ್ದಾರೆ. ರಚಿತಾ ರಾಮ್ ಇಡೀ ಕಥೆಯನ್ನು ಹಿಡಿದಿಟ್ಟುಕೊಳ್ಳುವುದಷ್ಟೇ ಅಲ್ಲದೇ ಭಾವುಕರನ್ನಾಗಿಸುತ್ತಾರೆ. ಮಲೈಕಾ ವಸುಪಾಲ್ ಎರಡು ಶೇಡ್‌ಗಳಲ್ಲೂ ಮುದ್ದಾಗಿ ನಟಿಸಿ, ಕಥೆಗೆ ಗ್ಲಾಮರ್ ಲುಕ್ ತಂದಿದ್ದಾರೆ. ರಂಗಾಯಣ ರಘು, ಅಚ್ಯುತ್ ಕುಮಾರ್ ಪಾತ್ರಗಳು ಚೆನ್ನಾಗಿ ಮೂಡಿಬಂದಿವೆ. ಅರ್ಜುನ್ ಜನ್ಯ ಸಂಗೀತದ ‘ಅಯ್ಯೋ ಶಿವನೇ’, ‘ಹೃದಯವು ಕೇಳದೆ’ ಮತ್ತೆ ಮತ್ತೆ ಗುನುಗುವಂತೆ ಮಾಡುತ್ತವೆ. ಛಾಯಾಗ್ರಾಹಕ ಜೆ.ಎಸ್.ವಾಲಿ ಇಡೀ ಕಥೆಯನ್ನು ಅಂದವಾಗಿ ತೋರಿಸಿದ್ದಾರೆ.