ಐಪಿಎಲ್​ ಲೋಗೋ 
ಸ್ಯಾಂಡಲ್‌ವುಡ್

ಕ್ರಿಕೆಟ್ ಹಂಗಾಮಾ ವರ್ಸಸ್ ಸಿನಿಮಾ ಜಾತ್ರೆ

ಪ್ರಮುಖ ಮುಖ್ಯಾಂಶಗಳು

  • ಟಿ-20 ವಿಶ್ವಕಪ್, ಐಪಿಎಲ್ ಜ್ವರ, ಚುನಾವಣೆ ಮಧ್ಯೆ ಸಿನಿಮಾ ಗೆಲ್ಲಿಸುವ ಚಾಲೆಂಜ್
  • ಕನ್ನಡದಲ್ಲಿ ಬಹುನಿರೀಕ್ಷಿತ ಸಾಲು ಸಿನಿಮಾಗಳು ರಿಲೀಸ್
  • ಪ್ರೇಕ್ಷಕರ ಒಲವು ಯಾವುದರ ಕಡೆಗೆ
ಶಿವ ಸ್ಥಾವರಮಠ, ಬೆಂಗಳೂರು
ಇಂದಿನಿಂದ ಟಿ-20 ವಿಶ್ವಕಪ್ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡದ ಮೇಲೆ ಹೆಚ್ಚು ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಚುಟುಕು ಕ್ರಿಕೆಟ್ ಜ್ವರ ಹೆಚ್ಚಲಿದೆ. ದಿನಕ್ಕೆ ಮೂರು ಲೀಗ್ ಹಂತದ ಪಂದ್ಯಗಳು ಇರುವುದರಿಂದ ಬಹುತೇಕರು ಸ್ಮಾರ್ಟ್‌ಫೋನ್, ಟಿವಿಗಳ ಮುಂದೆ ಠಿಕಾಣಿ ಹೂಡುವುದು ಸಾಮಾನ್ಯ. ಹೀಗಿರುವಾಗ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಜಾತ್ರೆ ಆರಂಭವಾಗಿದೆ. ಕಳೆದ ವಾರ ಹತ್ತು ಸಿನಿಮಾಗಳು ರಿಲೀಸ್ ಆಗಿದ್ದರೆ, ಈ ವಾರ 11 ಚಿತ್ರಗಳು ತೆರೆಗೆ ಬರುತ್ತಿವೆ. ಇನ್ನು ‘ಸರಳ ಸುಬ್ಬರಾವ್’ (ಫೆ.12), ‘ಸೀತಾ ಪಯಣ’ (ಫೆ.14), ‘ಮಾರ್ನಮಿ’, ‘ಆಲ್ಫಾ’ (ಫೆ.20), ‘ಹಯಗ್ರೀವ’ (ಫೆ.27), ‘ಟಾಕ್ಸಿಕ್’ (ಮಾ.19), ‘ಲವ್ ಮಾಕ್ಟೇಲ್ 3’ (ಏ.10), ‘ಕೆಡಿ: ದ ಡೆವಿಲ್’ (ಏ.30), ‘ಕೊರಗಜ್ಜ’, ‘ದ ರೈಸ್ ಆಫ್​ ಅಶೋಕ’, ‘ಮ್ಯಾಂಗೋ ಪಚ್ಚ’ ಸೇರಿ ಹಲವು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಫೀವರ್ ಮಧ್ಯೆ ಪ್ರೇಕ್ಷಕರನ್ನು ಥಿಯೇಟರ್‌ನತ್ತ ಕರೆತರುವ ಬಹುದೊಡ್ಡ ಸವಾಲು ಚಿತ್ರತಂಡಗಳ ಮೇಲಿದೆ.

ಮೂರು ತಿಂಗಳು ಕ್ರಿಕೆಟ್ ಜ್ವರ

ಕನ್ನಡದ ಮಟ್ಟಿಗೆ ಸಿನಿಮಾಗಳನ್ನು ಗೆಲ್ಲಿಸಲು ಹಾಗೂ ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆಯಲು ಚಿತ್ರತಂಡಗಳು ಹರಸಾಹಸ ಪಡುತ್ತವೆ. ಈ ಮಧ್ಯೆ, ಟಿ-20 ವಿಶ್ವಕಪ್ ಆರಂಭವಾಗುತ್ತಿದೆ. ಭಾರತ ಮತ್ತು ಶ್ರೀಲಂಕಾದಲ್ಲಿ ಈ ಬಾರಿಯ ಪಂದ್ಯಾವಳಿ ನಡೆಯುತ್ತಿರುವುದರಿಂದ ಸಾಮಾನ್ಯವಾಗಿಯೇ ಜನರ ಗಮನ ಕ್ರಿಕೆಟ್ ಮೇಲೆ ಇರಲಿದ್ದು, ಫೆ.7ರಿಂದ ಆರಂಭವಾಗಿ ಮಾರ್ಚ್ 8ರವರೆಗೆ ಚುಟುಕು ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಈ ಸಮಯದಲ್ಲಿ ಸಿನಿಮಾ ರಿಲೀಸ್ ಆದರೆ, ಪ್ರೇಕ್ಷಕರು ಥಿಯೇಟರ್‌ನತ್ತ ಬರುತ್ತಾರಾ ಎಂಬುದೇ ಸದ್ಯದ ಕುತೂಹಲ. ಇನ್ನು ಟಿ-20 ವಿಶ್ವಕಪ್ ಪೂರ್ಣಗೊಂಡ ಕೇವಲ 18 ದಿನಗಳಲ್ಲಿ ಮಾರ್ಚ್ 26ಕ್ಕೆ ಐಪಿಎಲ್ ಪ್ರಾರಂಭವಾಗಲಿದೆ. ಐಪಿಎಲ್ ಸೀಸನ್ 19 ಮೇ 31ರಂದು ಕೊನೆಗೊಳ್ಳುತ್ತವೆ. ಹೀಗಾಗಿ ಫೆಬ್ರವರಿಯಿಂದ ಮೇವರೆಗೆ ಮೂರು ತಿಂಗಳು ಕ್ರಿಕೆಟ್ ಹವಾ ಆವರಿಸಲಿದೆ. ಇವುಗಳ ಮಧ್ಯೆ ಕನ್ನಡದಲ್ಲಿ ಹಲವು ಚಿತ್ರಗಳು ತೆರೆಗೆ ಬರಲು ಸಿದ್ಧತೆ ನಡೆಸುತ್ತಿವೆ. ಕ್ರಿಕೆಟ್ ಎಫೆಕ್ಟ್ ಗಮನದಲ್ಲಿಟ್ಟುಕೊಂಡು ಸಿನಿಮಾಗಳು ರಿಲೀಸ್ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯವ್ಯಕ್ತವಾಗುತ್ತಿದೆ.

ಹೆಚ್ಚಲಿದೆ ಚುನಾವಣೆಯ ಕಾವು

ಕನ್ನಡದಲ್ಲಿ ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಕ್ರಿಕೆಟ್ ಹಂಗಾಮಾದ ನಡುವೆ ರಿಲೀಸ್ ಮಾಡಲು ಹಿಂದೇಟು ಹಾಕಿದರೆ, ಮುಂದೆ ಚುನಾವಣೆಗಳ ಎಫೆಕ್ಟ್ ಚಿತ್ರತಂಡಗಳ ಮೇಲೆ ಬೀಳಲಿದೆ. ಈ ವರ್ಷ ಗ್ರಾಮ ಪಂಚಾಯಿತಿ, ತಾಲೂಕು-ಜಿಲ್ಲಾ ಪಂಚಾಯತ್ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಯಲಿದೆ. ಇನ್ನೆರೆಡು ತಿಂಗಳಲ್ಲಿ ಗ್ರಾಪಂ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆ ಬಳಿಕ ತಾ.ಪಂ-ಜಿ.ಪಂ., ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ಘೋಷಣೆಯಾಗಲಿದೆ. ಚುನಾವಣೆ ಕಾವಿನ ಮಧ್ಯೆ, ಎಷ್ಟರ ಮಟ್ಟಿಗೆ ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ಧಾವಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆ.

ಪರೀಕ್ಷೆ, ಪ್ರವಾಸ, ಬೇಸಗೆಯ ಪ್ರಯಾಸ:

ಕ್ರಿಕೆಟ್, ಚುನಾವಣೆ ಒಂದು ಕಡೆಯಾದರೆ ಇನ್ನೇನು ಮಾರ್ಚ್‌ಗೆ ಬೇಸಗೆ ಆರಂಭವಾಗಲಿದೆ. ಈ ಬಿಸಿಲಿನ ಧಗೆಯಲ್ಲಿ ಹೊರಬರಲು ಹರಸಾಹಸಪಡುವ ಜನರು, ಥಿಯೇಟರ್‌ಗೆ ಹೋಗುತ್ತಾರಾ? ಗೊತ್ತಿಲ್ಲ. ಮಾರ್ಚ್‌ನಲ್ಲಿ ಪರೀಕ್ಷೆಗಳು ಆರಂಭವಾಗುತ್ತವೆ. ಅದು ಮುಗಿದ ಬಳಿಕ ಬೇಸಗೆ ರಜೆ ಶುರುವಾಗುತ್ತವೆ. ಆ ಸಮಯದಲ್ಲಿ ಕುಟುಂಬ ಸಮೇತರಾಗಿ ಪ್ರವಾಸ ತೆರಳುವವರೇ ಹೆಚ್ಚು. ಈ ಎಲ್ಲರ ಮಧ್ಯೆ, ಚಿತ್ರತಂಡಗಳು ‘ನಮ್ಮ ಸಿನಿಮಾಗಳ ಕಂಟೆಂಟೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುತ್ತದೆ’ ಎಂಬ ಆತ್ಮವಿಶ್ವಾಸದಲ್ಲಿವೆ.
"

‘ಸರಳ ಸುಬ್ಬರಾವ್’ ಕೆಲ ತಿಂಗಳ ಹಿಂದೆಯೇ ರಿಲೀಸ್ ಆಗಬೇಕಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಇದೀಗ ಫೆ. 12ರಂದು ತೆರೆಗೆ ಬರಲು ಸಿದ್ಧರಾಗಿದ್ದೇವೆ. ನಮ್ಮ ನಿರ್ಮಾಪಕರೇ ತಡ ಮಾಡುವುದು ಬೇಡ ಅಂತ ಧೈರ್ಯದಿಂದ ಈ ದಿನಾಂಕ ಆಯ್ಕೆ ಮಾಡಿದ್ದಾರೆ. ನಮ್ಮ ಸಿನಿಮಾದ ಕಂಟೆಂಟ್ ಮೇಲೆ ನಂಬಿಕೆಯಿದೆ. ಏನೇ ಇದ್ದರೂ ಪ್ರೇಕ್ಷಕರು ನಮ್ಮ ಸಿನಿಮಾ ನೋಡುತ್ತಾರೆ ಎಂಬ ಭರವಸೆಯಿದೆ. | ಮಂಜು ಸ್ವರಾಜ್, ‘ಸರಳ ಸುಬ್ಬರಾವ್’ ನಿರ್ದೇಶಕ

"

‘ಕೊರಗಜ್ಜ’ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ವಿತರಣಾ ಸಂಸ್ಥೆಯೊಂದು ನಮ್ಮ ಚಿತ್ರವನ್ನು ಖರೀದಿಸುತ್ತಿದೆ. ಹಾಗಾಗಿ, ರಿಲೀಸ್ ಡೇಟ್ ನಾವು ಅವರ ಜತೆ ಚರ್ಚೆ ನಡೆಸಿಯೇ ನಿರ್ಧರಿಸಬೇಕಿದೆ. ನಿರ್ದೇಶಕರು, ವಿತರಕರ ಜತೆ ಚರ್ಚೆ ನಡೆಸಿ, ಸೂಕ್ತ ದಿನಾಂಕವನ್ನು ಅಂತಿಮಗೊಳಿಸುತ್ತೇವೆ. ನಮ್ಮ ಸಿನಿಮಾ ಮೇಲೆ ನಂಬಿಕೆಯಿದೆ. ಹಾಗೆಯೇ, ಅದಕ್ಕೆ ಯಾವುದೇ ಪರಿಣಾಮ ಆಗದ ರೀತಿಯಲ್ಲಿಯೇ ತೆರೆ ಮೇಲೆ ತರುತ್ತೇವೆ.