ಟಾಕ್ಸಿಕ್​ ಚಿತ್ರದ ನಿರ್ದೇಶಕಿ ಗೀತು ಮೋಹನ್​ದಾಸ್​ ಮತ್ತು ನಟ ಯಶ್​ 
ಸ್ಯಾಂಡಲ್‌ವುಡ್

ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ಟಾಕ್ಸಿಕ್​ ಟೀಸರ್​ಗೆ ಎದುರಾಯ್ತು ಕಂಟಕ: ದೂರು ದಾಖಲು, ತಕ್ಷಣದ ಕ್ರಮಕ್ಕೆ ಆಗ್ರಹ! Toxic

ಪ್ರಮುಖ ಮುಖ್ಯಾಂಶಗಳು

  • ರಾಕಿಂಗ್​ ಯಶ್​ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್​ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ
  • ಟೀಸರ್​ನಲ್ಲಿನ ಹಸಿಬಿಸಿ ದೃಶ್ಯಗಳ ಬ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ
  • ಕುಟುಂಬ ಸಮೇತ ಕುಳಿತ ನೋಡುವಂತೆ ಈ ಸಿನಿಮಾ ಇಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ
  • ಇದೀಗ ವಕೀಲರೊಬ್ಬರು ಟಾಕ್ಸಿಕ್​ ಸಿನಿಮಾ ವಿರುದ್ಧ ಕಾನೂನು ಸಮರ ಸಾರಿದ್ದಾರೆ
ಬೆಂಗಳೂರು: ರಾಕಿಂಗ್​ ಯಶ್​ ನಟನೆಯ ಟಾಕ್ಸಿಕ್ ( Toxic )​ ಸಿನಿಮಾದ ಟೀಸರ್​ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. 200 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಇದರ ನಡುವೆ ಟೀಸರ್​ನಲ್ಲಿನ ಹಸಿಬಿಸಿ ದೃಶ್ಯಗಳ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಕುಟುಂಬ ಸಮೇತ ಕುಳಿತ ನೋಡುವಂತೆ ಈ ಸಿನಿಮಾ ಇಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಇನ್ನು ಕೆಲವರು ಈ ಮುಂಚೆ ಇಂಥಾ ದೃಶ್ಯಗಳು ಬಂದೇ ಇಲ್ಲವೇ? ಎಂಬ ವಾದ ಮಂಡನೆ ಮಾಡುತ್ತಿದ್ದಾರೆ. ಈ ಎಲ್ಲ ಚರ್ಚೆಗಳ ನಡುವೆ ಇದೀಗ ವಕೀಲರೊಬ್ಬರು ಟಾಕ್ಸಿಕ್​ ಸಿನಿಮಾ ವಿರುದ್ಧ ಕಾನೂನು ಸಮರ ಸಾರಿದ್ದಾರೆ.
ಹೌದು, ಟಾಕ್ಸಿಕ್ ಟೀಸರ್ ವಿರುದ್ಧ ವಕೀಲ ಲೋಹಿತ್ ಹನುಮಪು ಎಂಬುವರು ದೂರು ದಾಖಲಿಸಿದ್ದಾರೆ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷ (CBFC) ರಿಗೆ ದೂರು ನೀಡಿದ್ದಾರೆ.
ಟಾಕ್ಸಿಕ್​​ ಟೀಸರ್​ನಲ್ಲಿ ಅಶ್ಲೀಲ ಕಂಟೆಂಟ್ ಬಳಕೆ ಮಾಡಲಾಗಿದೆ. ಇದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ, ಸಿನಿಮಾದ ಟೀಸರ್‌ಗಳಿಗೂ ಸಹ ಸೆನ್ಸಾರ್ ಪ್ರಮಾಣಪತ್ರ ಮತ್ತು ಮಾರ್ಗಸೂಚಿಯನ್ನು ಕಡ್ಡಾಯ ಮಾಡಬೇಕು. ಟೀಸರ್‌ಗಳನ್ನು ಸೂಕ್ತ ಸೆನ್ಸಾರ್ ಪ್ರಮಾಣೀಕರಣವಿಲ್ಲದೆ ಬಿಡುಗಡೆ ಮಾಡುತ್ತಿರುವುದು ಅಪ್ರಾಪ್ತ ವಯಸ್ಕರು ಹಾಗೂ ಸಾರ್ವಜನಿಕ ನೈತಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಎಂದು ವಕೀಲ ಲೋಹಿತ್ ಹನುಮಪು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಟೀಸರ್‌ನಲ್ಲಿ ತೀವ್ರ ವಯಸ್ಕ ದೃಶ್ಯಗಳು ಇವೆ. ಯಾವುದೇ ವಯೋಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕ ವೇದಿಕೆಗಳಲ್ಲಿ ಮುಕ್ತವಾಗಿ ಲಭ್ಯವಾಗಿದೆ. ಇಂತಹ ಕಂಟೆಂಟ್​ಗಳನ್ನು ಎ ಪ್ರಮಾಣಪತ್ರದೊಂದಿಗೆ ಬಿಡುಗಡೆ ಮಾಡುವುದು ಸೂಕ್ತ. ಪೋಷಕರ ಅನುಮತಿ ಅಥವಾ ಮುನ್ನಚ್ಚರಿಕೆ ಇಲ್ಲದೆ ಮಕ್ಕಳಿಗೆ ಇದು ಅಸಮಂಜಸವಾಗಿದೆ. ಈ ಬಗ್ಗೆ ಕೂಡಲೇ ಟಾಕ್ಸಿಕ್ ಚಿತ್ರದ ನಿರ್ಮಾಪಕರಿಗೆ ನಿರ್ದೇಶನ ನೀಡಿ ಮತ್ತು ವಯಸ್ಕರ ಕಂಟೆಂಟ್​ ಇರುವ ಟೀಸರ್ ತೆಗೆದುಹಾಕಲು ಅಥವಾ ಸೂಕ್ತವಾಗಿ ತಿದ್ದುಪಡಿ ಮಾಡಲು ಆದೇಶಿಸಿ ಎಂದು ಲೋಹಿತ್ ಆಗ್ರಹಿಸಿದ್ದಾರೆ.​
ಸಿನಿಮಾದಂತೆ ಟೀಸರ್‌, ಟ್ರೇಲರ್‌ ಮತ್ತು ಪ್ರಚಾರದ ವಿಡಿಯೋಗಳಿಗೂ ಸೆನ್ಸಾರ್ ಪ್ರಮಾಣೀಕರಣ ಕಡ್ಡಾಯ ಮಾಡಿ. ವಯಸ್ಕ ಅಥವಾ ಅಶ್ಲೀಲ ವಿಷಯವಿರುವ ಟೀಸರ್‌ಗಳಿಗೆ ಎ ಪ್ರಮಾಣಪತ್ರ ಅಥವಾ ಸ್ಪಷ್ಟ ವಯೋಮಿತಿ ಎಚ್ಚರಿಕೆ ಕಡ್ಡಾಯಗೊಳಿಸಿ. ಇಲ್ಲವಾದರೆ ಸೆನ್ಸಾರ್ ಮಂಡಳಿಯ ವಿರುದ್ಧ ಭಾರೀ ಪ್ರತಿಭಟನೆ ನಡೆಸಲಾಗುವುದು ಎಂದು ಲೋಹಿತ್​ ಅವರು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಸಖತ್​ ಸದ್ದು ಮಾಡುತ್ತಿರುವ ಟಾಕ್ಸಿಕ್​ ಟೀಸರ್​

ಅಂದಹಾಗೆ, ನಿನ್ನೆ ಬಿಡುಗಡೆಯಾಗಿರುವ 'ಟಾಕ್ಸಿಕ್' ಚಿತ್ರದ ಹೊಸ ಟೀಸರ್ ಸಂಚಲನ ಮೂಡಿಸಿದೆ. ಟೀಸರ್ ಮೂಲಕ ಯಶ್ ಅವರ ಪಾತ್ರದ ಹೆಸರನ್ನು 'ರಾಯ' ಎಂದು ಪರಿಚಯಿಸಲಾಗಿದೆ. ಈ ಮೊದಲಿನ ಪೋಸ್ಟರ್‌ಗಳಲ್ಲಿ ಕೇವಲ ಬೆನ್ನಿನ ಭಾಗ ಮಾತ್ರ ತೋರಿಸಲಾಗಿತ್ತು. ಈಗ ಯಶ್ ಅವರ ಪೂರ್ಣ ಖದರ್ ರಿವೀಲ್ ಆಗಿದೆ. ಯಶ್ ಅವರು ವಿಂಟೇಜ್ ಶೈಲಿಯ ಟಾಮಿ ಗನ್ ಹಿಡಿದು ವಿಲನ್‌ಗಳನ್ನು ಸದೆಬಡಿಯುವ ದೃಶ್ಯ ಫ್ಯಾನ್ಸ್‌ಗೆ ಭರ್ಜರಿ ಕಿಕ್ ನೀಡಿದೆ. ಅವರ ಸ್ಟೈಲ್ ಮತ್ತು ಗನ್ ಹಿಡಿದ ರೀತಿ ತುಂಬಾ ರಗಡ್ ಆಗಿದೆ.
ಟೀಸರ್ ಆರಂಭವಾಗುವುದೇ ಒಂದು ಸ್ಮಶಾನದ ದೃಶ್ಯದೊಂದಿಗೆ. ಅಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆಯ ನಡುವೆ ಯಶ್ ಅವರು ಕಾರಿನಲ್ಲಿ ಎಂಟ್ರಿ ಕೊಟ್ಟು, ಗುಂಡಿನ ಮಳೆ ಸುರಿಸುವುದೇ ಟೀಸರ್​ನ ಹೈಲೈಟ್. ಟೀಸರ್‌ನ ವಿಶುವಲ್ಸ್ ಮತ್ತು ಆಕ್ಷನ್ ಸನ್ನಿವೇಶಗಳು ಪಕ್ಕಾ ಹಾಲಿವುಡ್ ಗುಣಮಟ್ಟದಲ್ಲಿವೆ. ಸಿನಿಮಾದ ಕಲರ್ ಗ್ರೇಡಿಂಗ್ ಮತ್ತು ಕ್ಯಾಮೆರಾ ವರ್ಕ್ ಅಂತಾರಾಷ್ಟ್ರೀಯ ಮಟ್ಟದ ಚಿತ್ರಗಳನ್ನು ನೆನಪಿಸುತ್ತದೆ. ಟೀಸರ್ ಕೊನೆಯಲ್ಲಿ ಯಶ್ ಅವರು ಸಿಗಾರ್ ಹಚ್ಚುತ್ತಾ ಹೇಳುವ "Daddy's Home" ಎಂಬ ಸಂಭಾಷಣೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಅಲ್ಲದೆ, ಟೀಸರ್‌ನಲ್ಲಿ ಯಶ್ ಅವರು ಕಾರಿನ ಒಳಗೆ ಯುವತಿಯೊಟ್ಟಿಗೆ ಇರುವ ಒಂದು ಬೋಲ್ಡ್ ದೃಶ್ಯವಿದ್ದು, ಇದು ಸಿನೆಮಾ ಎಷ್ಟು 'ರಾ' (Raw) ಆಗಿರಲಿದೆ ಎಂಬುದನ್ನು ತೋರಿಸುತ್ತದೆ.
ಈಗಾಗಲೇ ಘೋಷಣೆಯಾಗಿರುವಂತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ , ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರ ಪಾತ್ರಗಳು ಈ ಡಾರ್ಕ್ ಜಗತ್ತಿನಲ್ಲಿ ಎಷ್ಟು ಮುಖ್ಯ ಎಂಬುದನ್ನು ಟೀಸರ್ ಬಿಂಬಿಸುತ್ತದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಯಶ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಿದ್ದಾರೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಒಂದು ಗಂಭೀರ ಮತ್ತು ತೀವ್ರವಾದ ಕಥೆ ಇದರಲ್ಲಿ ಅಡಗಿದೆ. ಟೀಸರ್‌ನ ಮ್ಯೂಸಿಕ್ ಸಖತ್ ಪವರ್‌ಫುಲ್ ಆಗಿದೆ. ಪ್ರತಿ ಶಬ್ದ ಮತ್ತು ಬಿಜಿಎಂ ದೃಶ್ಯದ ತೀವ್ರತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಟೀಸರ್​ನಲ್ಲಿ ಕೊನೆಯಲ್ಲಿ ಚಿತ್ರತಂಡ ಮತ್ತೊಮ್ಮೆ ಸಿನಿಮಾ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದೆ. ಮಾರ್ಚ್ 19, 2026 ರಂದು 'ಟಾಕ್ಸಿಕ್' ವಿಶ್ವದಾದ್ಯಂತ ತೆರೆಕಾಣಲಿದೆ, (ಏಜೆನ್ಸೀಸ್​).