ಬೆಂಗಳೂರು: "ರಂಕಲ್ ರಾಟೆ', "ಕಪಾಲ', "ಮತ್ಸ್ಯಗಂಧ' ಸೇರಿ ಕೆಲ ಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿ ಅನುಭವ ಪಡೆದಿರುವ ಪ್ರವೀಣ್ ಎಂ. ಪ್ರಭು ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ "ಮೈಸೂರು ಸ್ಟುಡಿಯೋ'. ಇತ್ತೀಚೆಗಷ್ಟೆ ಮೈಸೂರು ದಸರಾ ಹಬ್ಬದ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನಿರ್ದೇಶನಕ್ಕೆ ಮುಂದಾಗುವ ಮುನ್ನ ಎರಡು ಕಿರುಚಿತ್ರಗಳನ್ನು ಮಾಡಿದ್ದ ಪ್ರವೀಣ್, ಅದರಲ್ಲಿ ಒಂದು ಕಥೆಯನ್ನೇ ಹಿಗ್ಗಿಸಿ ಸಿನಿಮಾ ರೂಪ ನೀಡಿದ್ದಾರೆ. "150 ವರ್ಷಗಳ ಹಿಂದೆ ಮೈಸೂರು ಮಹಾರಾಜರಿಂದ ಕುಟುಂಬವೊಂದಕ್ಕೆ ಉಡುಗೊರೆಯಾಗಿ ಸಿಕ್ಕ ಅಪರೂಪದ ಕ್ಯಾಮರಾ, ಅದಕ್ಕೆ ಅಂಟಿಕೊಂಡ ನಾಲ್ಕು ತಲೆಮಾರುಗಳು ಮತ್ತು ಹೊಸ ತಲೆಮಾರಿನ 10 ವರ್ಷದ ಬಾಲಕನ ಮನಸ್ಸಿನಲ್ಲಿ ಕ್ಯಾಮರಾ ಕುರಿತು ಟಿಸಿಲೊಡೆಯುವ ಹಂಬಲಗಳ ಸುತ್ತ "ಮೈಸೂರು ಸ್ಟುಡಿಯೋ' ಕಥೆ ಸಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ ಪ್ರವಿಣ್. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ರಿಷಿಕೇಶ್, ಧನಂಜಯ್, ಯುದಿತ್ ಶೆಟ್ಟಿ, ದಿವ್ಯಶ್ರೀ, ಗೌರವ್, ಮಹಾಂತೇಶ್ ಹಿರೇಮಠ, ಮಾಸ್ಟರ್ ಪೀಸ್ ಅನಂತ್, ಮೂಗು ಸುರೇಶ್ ಪ್ರಮುಖ ತಾರಾಗಣದಲ್ಲಿದ್ದಾರೆ. "ಎಲ್ಟು ಮುತ್ತ', "ಹುಬ್ಬಳ್ಳಿ ಹಂರ್ಟಸ್' ಖ್ಯಾತಿಯ ಪ್ರಸನ್ನ ಕೇಶವ ಕೆ.ಎಸ್ ಸಂಗೀತ, ಕೆ. ಯೇಸು ಸಂಕಲನವಿರುವ ಈ ಚಿತ್ರಕ್ಕೆ ಖುದ್ದು ಪ್ರವಿಣ್ ಅವರೇ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.