ಸೀಗೆಗುಡ್ಡ 
ಸ್ಯಾಂಡಲ್‌ವುಡ್

ಸಿನಿಮಾ ಹಿಟ್, ಲೊಕೇಷನ್ ಸೂಪರ್‌ಹಿಟ್! : ‘ಪ್ರೇಮದ ಊರಾದ’ ಸೀಗೆಗುಡ್ಡ, ‘ಹನುಮಾನ್ ಅಂಶ್’ ಬಳಿಕ ಕೈಂಚಿ ಧಾಮ್‌ಗೆ ಜನಸಾಗರ

ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆದ ಬಳಿಕ ಆ ಸಿನಿಮಾ ಶೂಟಿಂಗ್ ನಡೆದ ಸ್ಥಳಕ್ಕೆ ಜನರು ಧಾವಿಸಿದ ಉದಾಹರಣೆಗಳಿವೆ. ಅದರಿಂದ ಸ್ಥಳೀಯ ಉದ್ಯಮ, ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವಾದ ನಿದರ್ಶನಗಳಿವೆ.

ಶಿವ ಸ್ಥಾವರಮಠ, ಬೆಂಗಳೂರು

ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆದ ಬಳಿಕ ಆ ಸಿನಿಮಾ ಶೂಟಿಂಗ್ ನಡೆದ ಸ್ಥಳಕ್ಕೆ ಜನರು ಧಾವಿಸಿದ ಉದಾಹರಣೆಗಳಿವೆ. ಅದರಿಂದ ಸ್ಥಳೀಯ ಉದ್ಯಮ, ಪ್ರವಾಸೋದ್ಯಮ ಅಭಿವೃದ್ಧಿಗೆ ನೆರವಾದ ನಿದರ್ಶನಗಳಿವೆ. ಗಣೇಶ್ ಅಭಿನಯದ ‘ಮುಂಗಾರುಮಳೆ’ (2006) ರಿಲೀಸ್ ಆಗಿ, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಚಿತ್ರದಲ್ಲಿದ್ದ ಜೋಗ್ ಫಾಲ್ಸ್ ದೃಶ್ಯ ನಯನ ಮನೋಹರವಾಗಿ ಮೂಡಿಬಂದಿತ್ತು. ಸಿನಿಮಾ ರಿಲೀಸ್ ಬಳಿಕ ಜೋಗ್‌ಗೆ ಹೆಚ್ಚಿನ ಪ್ರವಾಸಿಗರು ಬರಲಾರಂಭಿಸಿ ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕಿತು. ಇದೀಗ ಮತ್ತೆ ಅದೇ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ತೆರೆಕಂಡು ಸಂಚಲನ ಮೂಡಿಸಿದ ನಾಲ್ಕೈದು ಸಿನಿಮಾಗಳು ಪ್ರೇಕ್ಷಕರನ್ನು ಥಿಯೇಟರ್‌ಗಷ್ಟೇ ಅಲ್ಲ, ಶೂಟಿಂಗ್ ನಡೆದ ಸ್ಥಳಕ್ಕೂ ಕರೆಸಿಕೊಳ್ಳುತ್ತಿವೆ. ಆ ಮೂಲಕ ಚಿತ್ರವೊಂದು ಪ್ರೇಕ್ಷಕರ ಮನಸ್ಸು ಗೆದ್ದರೆ, ಅದರ ಪ್ರಭಾವ ಥಿಯೇಟರ್‌ಗೆ ಮಾತ್ರವಲ್ಲದೇ, ಚಿತ್ರದಲ್ಲಿ ಕಾಣಿಸಿಕೊಂಡ ಸುಂದರ ತಾಣಗಳ ಮೇಲೂ ಬೀರುತ್ತದೆ ಎಂಬುದನ್ನು ಸಾಬೀತುಪಡಿಸಿವೆ.

‘ಪ್ರೇಮದೂರು’ ಸೀಗೆಗುಡ್ಡದಲ್ಲಿ ಜನದಟ್ಟಣೆ

ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸಿನ ಮಳೆ ಸುರಿಸಿದ ‘ಪ್ರೇಮದ ಊರಲಿ’ ಚಿತ್ರ ಶೂಟಿಂಗ್ ನಡೆದ ಹಾಸನ ಜಿಲ್ಲೆಯ ಸೀಗೆಗುಡ್ಡಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಒಂದು ಕಾಲದಲ್ಲಿ ಕೇವಲ ಸ್ಥಳೀಯರಿಗೆ ಮಾತ್ರ ಪರಿಚಿತವಾಗಿದ್ದ ಈ ಕ್ಷೇತ್ರಕ್ಕೆ ದೂರದೂರುಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ಜನದಟ್ಟಣೆ ಹೆಚ್ಚಾಗಿದೆ. ಮಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಜತೆಗೆ ಹಸಿರು ತುಂಬಿದ ನಯನ ಮನೋಹರ ವಾತಾವರಣ, ಎತ್ತರದ ಗುಡ್ಡಗಳು ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿವೆ. ಹಾಸನ ನಗರದಿಂದ ಕೇವಲ 15 ಕಿಮೀ ದೂರದಲ್ಲಿರುವ ಸೀಗೆಗುಡ್ಡ ಈಗ ಪ್ರವಾಸಿಗರ ನೆಚ್ಚಿನ ಕ್ಷೇತ್ರವಾಗಿ ಮಾರ್ಪಟ್ಟಿದೆ.

ಕೈಂಚಿ ಧಾಮ್‌ನಲ್ಲಿ ಟ್ರಾಫಿಕ್ ಜಾಮ್

ವಿಶಾಲ್ ಚತುರ್ವೇದಿ ನಿರ್ದೇಶನದ ಕಳೆದ ಆಗಸ್ಟ್ 7ರಂದು ರಿಲೀಸ್ ಆಗಿದ್ದ ‘ಹನುಮಾನ್ ಅಂಶ್’ ಅಧ್ಯಾತ್ಮಿಕತೆಗೂ, ಜೀವನಕ್ಕೂ ಸ್ಫೂರ್ತಿಯಾಗಿತ್ತು. ನೀಮ್ ಕರೋಲಿ ಬಾಬಾ ಜೀವನದಿಂದ ಸ್ಫೂರ್ತಿಗೊಂಡು ತೆರೆಕಂಡಿದ್ದ ಈ ಸಿನಿಮಾದ ಬಳಿಕ ಇದೀಗ ಬಾಬಾ ಆಶ್ರಮವಿರುವ ಉತ್ತರಾಖಂಡದ ನೈನಿತಾಲ್ ಸಮೀಪದ ಕೈಂಚಿ ಧಾಮ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಮೊದಲು ಪ್ರತಿ ದಿನ ಎರಡರಿಂದ ಮೂರು ಸಾವಿರ ಭಕ್ತರು ಆಗಮಿಸುತ್ತಿದ್ದರು. ‘ಹನುಮಾನ್ ಅಂಶ’ ಸಿನಿಮಾ ಬಳಿಕ ಈ ಸಂಖ್ಯೆ ಹೆಚ್ಚಳವಾಗಿದ್ದು, ಪ್ರತಿ ದಿನ 5ರಿಂದ 6 ಸಾವಿರ ಭಕ್ತರು ಆಗಮಿಸುತ್ತಿದ್ದಾರೆ. ವೀಕೆಂಡ್ ಅಥವಾ ರಜೆ ದಿನಗಳಲ್ಲಿ ಭಕ್ತರ ಸಂಖ್ಯೆ 15 ಸಾವಿರ ದಾಟುತ್ತಿದೆದ್ದು, ಕೆಲವೊಮ್ಮೆ ಎರಡು ಕಿಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಹಾಗೇ ಈ ಮೊದಲು ನೈನಿತಾಲ್ ಮತ್ತು ಕೈಂಚಿ ಧಾಮ್‌ನಲ್ಲಿ 2000-3000 ರೂ. ಇದ್ದ ಹೋಟೆಲ್ ರೂಮ್ ಬಾಡಿಗೆ ಇದೀಗ 7000 ರೂ. ದಾಟಿದೆ ಎನ್ನಲಾಗಿದೆ.

‘ಕಾಕ್‌ಟೇಲ್’ನಿಂದ ಇಟಲಿಗೆ ಪ್ರಯಾಣ

ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನನ್ ಅಭಿನಯದ ‘ಕಾಕ್‌ಟೇಲ್ 2’ ಶೂಟಿಂಗ್ ಬಹುತೇಕ ಇಟಲಿಯಲ್ಲಿ ನಡೆದಿತ್ತು. ಸಿಸಿಲಿ, ಕ್ಯಾಟನಿಯಾ, ನೋಟೊ, ಸಿರಾಕುಸಾ, ಅವೋಲಾ ಸೇರಿ ಹಲವು ಸ್ಥಳಗಳನ್ನು ಪರಿಚಯಿಸಲಾಗಿತ್ತು. ಇದೀಗ ಸಿನಿಮಾ ರಿಲೀಸ್ ಬಳಿಕ ಭಾರತದಿಂದ ಇಟಲಿಗೆ ಹೋಗುವ ಪ್ರವಾಸಿಗರಲ್ಲಿ ಶೇ.38ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಸದ್ಯ ಇಟಲಿ ಸೇರಿ ಯುರೋಪ್‌ನ ಕೆಲ ದೇಶಗಳಲ್ಲಿ ಉಂಟಾಗಿರುವ ಆಂತರಿಕ ಕಲಹದಿಂದಾಗಿ ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಇನ್ನು ಹಿಂದಿಯ ‘ಕಹೋ ನಾ ಪ್ಯಾರ್ ಹೈ’ (2000) ಬಳಿಕ ನ್ಯೂಜಿಲೆಂಡ್, ‘ಜಿಂದಗಿ ಮಿಲೆ ನಾ ದೊಬಾರಾ’ನಲ್ಲಿ (2011) ಸ್ಪೇನ್ ಹಾಗೂ ‘3 ಈಡಿಯಟ್ಸ್’ (2009) ರಿಲೀಸ್ ಬಳಿಕ ಲಡಾಕ್‌ಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು.