ಅಕ್ಷಿತಾ ಬೋಪಯ್ಯ 
ಸ್ಯಾಂಡಲ್‌ವುಡ್

ಚೆಂಕೋಲ್ ಹಿಡಿದ ಅಕ್ಷಿತಾ : ‘ಚಿರಕ್ಕಲ್ ದೇವಿ’ ಪಾತ್ರದಲ್ಲಿ ಉಗ್ರಾವತಾರ ತಾಳಿದ ಕೊಡಗು ಮೂಲದ ನಟಿ

ಶಿವಮಲ್ಲಯ್ಯ ಸ್ಥಾವರಮಠ

ಪ್ರಮುಖ ಮುಖ್ಯಾಂಶಗಳು

  • ಮೊದಲ ಬಾರಿಗೆ ಪೀರಿಯಾಡಿಕ್ ಚಿತ್ರದಲ್ಲಿ ಕಾಣಿಸಿಕೊಂಡ ನಟಿ
  • ಚಿರಕ್ಕಲ್​ ದೇವಿ ಪಾತ್ರದಲ್ಲಿ ನಟಿಸಿದ ಕೊಡಗು ಮೂಲದ ನಟಿ
  • ತಂದೆಯ ಸಾವಿನ ದುಃಖದ ಮಡುವಿನಲ್ಲಿಯೇ ಚಿತ್ರ ಒಪ್ಪಿಕೊಂಡಿದ್ದ ಅಕ್ಷಿತಾ
ಬೆಂಗಳೂರು: ‘ಕಮಲ್ ಶ್ರೀದೇವಿ’, ‘ಫ್ಲರ್ಟ್’ ಸೇರಿ ಕೆಲ ಸಿನಿಮಾಗಳಲ್ಲಿ ಗ್ಲಾಮರಸ್, ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ನಟಿ ಅಕ್ಷಿತಾ ಬೋಪಯ್ಯ ಇದೀಗ ಹೊಸ ಅವತಾರ ಎತ್ತಿದ್ದಾರೆ. ಅವರ ಮುಂದಿನ ಸಿನಿಮಾ ಸಂತೋಷ್ ಆರ್ಯನ್ ನಟಿಸಿ, ನಿರ್ದೇಶಿಸಿರುವ ಪೀರಿಯಾಡಿಕ್ ‘ಚೆಂಕೋಲ್’ನಲ್ಲಿ ದೇವಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಅಕ್ಷಿತಾ ‘ಚಿರಕ್ಕಲ್ ದೇವಿ’ ಎಂಬ ಪಾತ್ರದಲ್ಲಿದ್ದು, ಇತ್ತೀಚೆಗೆ ಟೀಸರ್ ಜತೆಗೆ ನಟಿಯ ಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ‘ಇದೇ ಮೊದಲ ಬಾರಿಗೆ ಪೀರಿಯಾಡಿಕ್ ಚಿತ್ರದಲ್ಲಿ ನಟಿಸುವ ಜತೆಗೆ ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸುವ ಅಕ್ಷಿತಾ, ‘ಕಳೆದ ವರ್ಷ ನಮ್ಮ ತಂದೆ ನಿಧನರಾದರು. ಅವರು ತೀರಿಹೋದ ವಾರದಲ್ಲೇ ಈ ಚಿತ್ರದ ಆರ್ ಬಂತು. ಅದು ಬೇರೆ ದೇವಿ ಪಾತ್ರ ಎಂದಾಗಲೇ ರೋಮಾಂಚಿತಳಾದೆ. ನಾನು ದೊಡ್ಡ ಹೀರೋಯಿನ್ ಆಗಬೇಕು ಎಂದು ಕನಸು ಕಂಡಿದ್ದ ಅಪ್ಪನ ಆಶೀರ್ವಾದವೇ ಇರಬೇಕು ಎಂದು ಒಪ್ಪಿಕೊಂಡೆ. ಆಗಿನ್ನೂ 11 ದಿನಗಳ ಕಾರ್ಯ ಕೂಡ ಮುಗಿದಿರಲಿಲ್ಲ. ಆದರೂ ಧೈರ್ಯ ಮಾಡಿ, ಚಿಕ್ಕಮಗಳೂರಿನಲ್ಲಿ ಶೂಟಿಂಗ್‌ನಲ್ಲಿ ಪಾಲ್ಗೊಂಡೆ. ಮೂಲತಃ ಕೊಡಗಿನವಳಾದ ನಾನು ದೇವಿಯ ಮಹಿಮೆ ಕೇಳುತ್ತಾ, ನೋಡುತ್ತಾ ಬೆಳೆದವಳು. ಇದೀಗ ಅಂತಹ ದೇವಿ ಪಾತ್ರ ನಿರ್ವಹಿಸುವ ಅವಕಾಶ ಬಂದರೆ, ಬೇಡ ಎನ್ನುವುದು ಹೇಗೆ?’ ಎಂದು ಮಾಹಿತಿ ನೀಡುತ್ತಾರೆ.

ಮಾಂಸಾಹಾರ ಮುಟ್ಟಿಲ್ಲ

‘ಚಿರಕ್ಕಲ್ ದೇವಿ’ ಪಾತ್ರದ ಬಗ್ಗೆ ನಟಿ ಅಕ್ಷಿತಾ, ‘ನನಗೆ ಈ ಪಾತ್ರ ಸಿಕ್ಕಿರುವುದು ಅಪ್ಪನ ಆಶೀರ್ವಾದ, ದೇವಿಯ ವರ ಎಂದು ಭಾವಿಸುವೆ. ಚಿಕ್ಕಮಗಳೂರಿನ ಭಯಾನಕ ಕಾಡಿನಲ್ಲಿ ಮಧ್ಯರಾತ್ರಿ, ಬೆಳಗಿನ ಜಾವದಲ್ಲಿ ನನ್ನ ಭಾಗದ ಶೂಟಿಂಗ್ ಇರುತ್ತಿತ್ತು. ದೇವಿ ಅವತಾರ ತಾಳಿ ಶೂಟಿಂಗ್ ಮಾಡುವುದು ಒಂದು ವಿಶಿಷ್ಟ ರೋಮಾಂಚನದ ಅನುಭವ. ಡೈಲಾಗ್‌ಗಿಂತ ಆರ್ಭಟವೇ ಹೆಚ್ಚು. ಪಾತ್ರ ಒಪ್ಪಿಕೊಳ್ಳುವ ಮುನ್ನ ದೇವಿಗೆ ಪೂಜೆ ಮಾಡಿಸಿದ್ದೆ, ಹಾಗೆಯೇ, ಶೂಟಿಂಗ್ ಪೂರ್ಣವಾಗುವವರೆಗೂ ಮಾಂಸಾಹಾರ ಸೇವಿಸದೆ, ಕಠಿಣ ವ್ರತ ಕೈಗೊಂಡಿದ್ದೆ. ಕಾಡಿನಲ್ಲಿ ರಾತ್ರಿ ಹೊತ್ತು ಶೂಟಿಂಗ್ ಮಾಡುವಾಗ ಹಲವು ಬಾರಿ ಅಗೋಚರ ಅನುಭವಗಳಾಗಿದ್ದೂ ಇದೆ. ಒಂದು ರಾತ್ರಿ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಂದು ಶೂಟಿಂಗ್ ಸ್ಥಗಿತಗೊಳಿಸಿ, ಮರುದಿನ ಮುಂದುವರಿಸಿದೆವು. ಆರ್ಯನ್ ಸಂತೋಷ್ ನಟನೆ, ಡೈರೆಕ್ಷನ್‌ನಲ್ಲಿ ಹೆಚ್ಚು ಪರಿಶ್ರಮಪಟ್ಟಿದ್ದಾರೆ’ ಎನ್ನುತ್ತಾರೆ. ‘ಚೆಂಕೋಲ್’ ಜತೆಗೆ ಅಕ್ಷಿತಾ ‘ಧರಣಿ’ ಎಂಬ ಮತ್ತೊಂದು ಚಿತ್ರದಲ್ಲಿ ನಟಿಸಿದ್ದು, ಅದು ಬಿಡುಗಡೆಗೆ ರೆಡಿಯಿದೆ. ‘ಓವೆಲ್ಸ್’ ಬಳಿಕ ಮತ್ತೊಂದು ತಮಿಳು ಸಿನಿಮಾ ಒಪ್ಪಿಕೊಂಡಿದ್ದು. ಇನ್ನಷ್ಟೇ ಆ ಚಿತ್ರದ ಘೋಷಣೆಯಾಗಬೇಕಿದೆ.