ಬೆಂಗಳೂರು:
"ಅಧಿಪತ್ರ' ಬಳಿಕ ನಿರ್ದೇಶಕ ಚಯನ್ ಶೆಟ್ಟಿ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ "ಮ್ಯಾರೇಜ್ ಪಾರ್ಟಿ'. ಇದೊಂದು ಹಾರರ್ ಕಾಮಿಡಿ ಚಿತ್ರವಾಗಿದ್ದು, ಕಳೆದ ವರ್ಷ ತೆರೆಕಂಡು ಹಿಟ್ ಆದ "ಸು ಫ್ರಮ್ ಸೋ' ಸಿನಿಮಾದಲ್ಲಿ ನಟಿಸಿರುವ ಪ್ರಕಾಶ್ ತೂಮಿನಾಡ್, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ಮೈಮ್ ರಾಮದಾಸ್ ಸೇರಿ ಹಲವರು ಈ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಮದುವೆಯ ಸುತ್ತ ಸಾಗುವ "ಮ್ಯಾರೇಜ್ ಪಾರ್ಟಿ'ಯ ಗಲಾಟೆ ಹಾಡನ್ನು ಇತ್ತೀಚೆಗಷ್ಟೆ ರಿಲೀಸ್ ಮಾಡಲಾಯಿತು.
ನಿರ್ದೇಶಕ ಚಯನ್ ಶೆಟ್ಟಿ, "ಹೆಸರೇ ಹೇಳುವಂತೆ ಇದು ಮದುವೆಯ ಸುತ್ತ ಘಟಿಸುವ ಕಥೆಯಾದರೂ, ಬೇರೆ ವಿಷಯಗಳೂ ಇವೆ. ಜತೆಗೆ ಹಾರರ್ ಅಂಶಗಳೂ ಇವೆ. "ಗಲಾಟೆ' ಸಾಂಗ್ ಚೆನ್ನಾಗಿ ಮೂಡಿಬಂದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ' ಎಂದು ಸಂತಸ ಹಂಚಿಕೊಂಡರು. ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ, ರಿತ್ವಿಕ್ ಮುರಳೀಧರ್ ಸಂಗೀತದಲ್ಲಿ ಮೂಡಿಬಂದಿರುವ ಈ ಮದುವೆ ಮನೆಯ ಎಣ್ಣೆ ಪಾರ್ಟಿ ಸಾಂಗ್ಗೆ ಪ್ರಣವಮ್ ಶಶಿ ಧ್ವನಿಯಾಗಿದ್ದಾರೆ. ಹಲವು ಡಾನ್ಸ್ ರಿಯಾಲಿಟಿ ಶೋಗಳಿಗೆ ಕೊರಿಯೋಗ್ರಫಿ ಮಾಡಿರುವ ಮುರುಗ ಮಾಸ್ಟರ್ ಈ ಹಾಡಿಗೆ ನೃತ್ಯನಿರ್ದೇಶಿಸಿದ್ದು, ಪ್ರಕಾಶ್ ತೂಮಿನಾಡ್, ನವೀನ್ ಪಡೀಲ್, ದೀಪಕ್ ಪಾಣಾಜೆ ಸೇರಿ ಹಲವರು ಕುಣಿದು ಕುಪ್ಪಳಿಸಿದ್ದಾರೆ.
"ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್', "ಒಂದು ಮೊಟ್ಟೆಯ ಕಥೆ', "ಗರುಡ ಗಮನ ವೃಷಭ ವಾಹನ' ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ವಿನೀತ್ ಕುಮಾರ್ ಈ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಸಂಪೂರ್ಣ ಕೆಲಸಗಳು ಮುಗಿದಿದ್ದು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ "ಮ್ಯಾರೇಜ್ ಪಾರ್ಟಿ' ತೆರೆಗೆ ಬರಲಿದೆ.