Biffes 17, Anurag Kashyap - ಹಿಂದೂ ಪಾತ್ರಗಳನ್ನು ವಿಲನ್ ಎಂದು ತೋರಿಸುವುದು ರಾಜಕೀಯವಾಗಿ ಸ್ಮೂ ವಿಚಾರವಾಗಿ ಪರಿಣಮಿಸಿದೆ ಮತ್ತು ವಿವಾದಗಳಿಗೆ ಕಾರಣವಾಗುತ್ತದೆ. ಆದರೂ, ಇರಾನ್ ಅಥವಾ ರಷ್ಯಾದಂತಹ ದೇಶಗಳಲ್ಲಿ ನಿರ್ದೇಶಕರು ನಮಗಿಂತ ಹೆಚ್ಚಿನ ರ್ನಿಬಂಧಗಳ ನಡುವೆಯೂ ಸಿನಿಮಾ ಮಾಡುತ್ತಿದ್ದಾರೆ, ಭಾರತೀಯ ನಿರ್ದೇಶಕರು ಅವರಿಂದ ಸ್ಫೂರ್ತಿ ಪಡೆಯಬೇಕು ಎಂದು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶನಿವಾರ ಆಯೋಜಿಸಲಾಗಿದ್ದ "ಫಿಯರ್ಲೆಸ್ ಫಿಲ್ಮ್ ಮೇಕಿಂಗ್' ಸಂವಾದದಲ್ಲಿ ಮಾತನಾಡಿದರು. ಹಾಗೇ ರಾಜಕೀಯ ಚಿತ್ರಗಳ ಇಂದಿನ ಸ್ಥಿತಿಗತಿ ಮತ್ತು ಭವಿಷ್ಯದ ಬಗ್ಗೆ, "ಹಿಟ್ಲರ್ ನಿಧನ ಹೊಂದಿದ ಬಳಿಕವಷ್ಟೇ ಜರ್ಮನಿಯಲ್ಲಿ ಆತ ನಡೆಸಿದ ಹತ್ಯಾಕಾಂಡಗಳ ಕುರಿತ ಚಿತ್ರಗಳು ಬಂದವು' ಎಂದು ಮಾರ್ಮಿಕವಾಗಿ ನುಡಿದರು.
ಕನ್ನಡ ಸಾಹಿತ್ಯದ ಬಗ್ಗೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ ಕಶ್ಯಪ್, ಸಾಹಿತಿ ವಿವೇಕ ಶಾನಭಾಗ ರಚನೆಯ "ಘಾಚರ್ ಘೋಚರ್' ಕಾದಂಬರಿ ಆಧರಿಸಿ ಕನ್ನಡ ಚಿತ್ರವೊಂದನ್ನು ನಿರ್ಮಿಸುತ್ತಿರುವುದಾಗಿ ಬಹಿರಂಗಪಡಿಸಿದರು. ಈ ಚಿತ್ರವು ಸದ್ಯ ಬರವಣಿಗೆ ಹಂತದಲ್ಲಿದ್ದು, ಮುಂದೆ ಹಿಂದಿಯಲ್ಲೂ ಬರಲಿದೆ. ಇದರ ನಿರ್ದೇಶಕರು ಮತ್ತು ಕಲಾವಿದರ ವಿವರಗಳನ್ನು ಶ್ರೀದಲ್ಲೆ ಪ್ರಕಟಿಸುವುದಾಗಿ ತಿಳಿಸಿದರು.
ರಣವೀರ್ ಸಿಂಗ್ ನಾಯಕತ್ವ, ಆದಿತ್ಯ ಧರ್ ನಿರ್ದೇಶನದ "ಧುರಂಧರ್' ಹಿಂದಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅನುರಾಗ್, "ಓಪನಿಂಗ್ ಸನ್ನಿವೇಶ, ಆರ್. ಮಾಧವನ್ ಪಾತ್ರದ ಮೋನೋಲಾಗ್ ಮತ್ತು "ನಯಾ ಭಾರತ್' ಡೈಲಾಗ್ ಹೊರತುಪಡಿಸಿ ನನಗೆ ಸಿನಿಮಾ ತುಂಬ ಇಷ್ಟವಾಯಿತು. ಪ್ಯಾನ್ ಇಂಡಿಯಾ ಚಿತ್ರಗಳಂತೆ ದೊಡ್ಡ ಬಜೆಟ್ ಕೂಡ ಚಿತ್ರಕ್ಕೆ ಬೇಕಾಗಲಿಲ್ಲ. ₹250 ಕೋಟಿ ಬಜೆಟ್ನಲ್ಲಿ ಎರಡು ಭಾಗಗಳ ಶೂಟಿಂಗ್ ಮುಗಿಸಿದ್ದಾರೆ ಎಂದರು.
"ಟಾಕ್ಸಿಕ್' ಧೈರ್ಯಶಾಲಿ ಪ್ರಯತ್ನ
ಯಶ್ ನಟಿಸುತ್ತಿರುವ, ಗೀತು ಮೋಹನ್ದಾಸ್ ನಿರ್ದೇಶಿಸುತ್ತಿರುವ "ಟಾಕ್ಸಿಕ್' ಚಿತ್ರದ ಹಸಿಬಿಸಿ ಟೀಸರ್ ಸಾಕಷ್ಟು ಚರ್ಚೆಗೀಡಾಗಿತ್ತು. ಈ ಬಗ್ಗೆ ಅನುರಾಗ್, "ಟಾಕ್ಸಿಕ್' ಒಂದು ಧೈರ್ಯಶಾಲಿ ಪ್ರಯತ್ನ. ಟೀಸರ್ ವಿರುದ್ಧ ವ್ಯಕ್ತವಾದ ಆಕ್ರೋಶ ನಮ್ಮ ಸಾಂಸ್ಕೃತಿಕ ಬೂಟಾಟಿಕೆಯನ್ನು ತೋರಿಸುತ್ತದೆ. ತೆರೆಯ ಮೇಲೆ ಸಲ್ಮಾನ್ ಖಾನ್, ಟೈಗರ್ ಶ್ರಾಫ್ನಂತೆ ನಟರು ಶರ್ಟ್ ಇಲ್ಲದೆ ಕಾಣಿಸಿಕೊಂಡರೆ ಅಥವಾ ಅತಿಯಾದ ಪೌರುಷ ತೋರಿಸಿದರೆ ಯಾರೂ ಪ್ರಶ್ನಿಸುವುದಿಲ್ಲ. ಆದರೆ ಒಬ್ಬ ಮಹಿಳೆ ತನ್ನ ಲೈಂಗಿಕತೆಯನ್ನು ಆಚರಿಸಿದರೆ ಅದನ್ನು ಒಪ್ಪಲು ಕಷ್ಟವಾಗುತ್ತದೆ ಎಂದರು.
ಮೊಬೈಲ್ ಮತ್ತು ಸೋಷಿಯಲ್ ಮೀಡಿಯಾ
ಸಿನಿಮಾ ಮತ್ತು ಪ್ರೇಕ್ಷಕರ ಮೇಲೆ ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ಗಳ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅನುರಾಗ್, "ಸಾಮಾಜಿಕ ಜಾಲತಾಣಗಳು ಸಿನಿಮಾ ನಿರ್ದೇಶಕರನ್ನು ಆತಂಕಕ್ಕೀಡು ಮಾಡಿವೆ. ಅದರಲ್ಲಿನ ಪ್ರತಿಕ್ರಿಯೆ ವೇಗವಾಗಿರುತ್ತದೆ. ತೀರ್ಪಿನಂತಿರುತ್ತದೆ. "ಹಕ್' ಚಿತ್ರ ಬಿಡುಗಡೆಗೂ ಮುನ್ನವೇ, ಅದನ್ನು ನೋಡದೇ ಅದನ್ನು ತುಂಬ ಜನ ವಿರೋಧಿಸಿದ್ದರು. ನಂತರ ಒಟಿಟಿಯಲ್ಲಿ ನೋಡಿದ ಬಳಿಕ ವಿರೋಧಿಸಿದ್ದವರು ಮೌನಕ್ಕೆ ಶರಣಾದರು' ಎಂದು ಹೇಳಿದರು.
ಮಲಯಾಳಂ ನಿರ್ದೇಶಕ ಮಹೇಶ್ ನಾರಾಯಣನ್, "ದ ಗರ್ಲ್್ರೆಂಡ್' ಖ್ಯಾತಿಯ ನಿರ್ದೇಶಕ ರಾಹುಲ್ ರವೀಂದ್ರನ್, "ಪಾನ್ ಸಿಂಗ್ ತೋಮರ್', "ನೋ ಒನ್ ಕಿಲ್ಡ್ ಜೆಸಿಕಾ', "ಬೈಸನ್ - ಕಾಳಮಾದನ್' ನಿರ್ಮಾಪಕಿ ಅದಿತಿ ಆನಂದ್ ಜತೆ ಸಂವಾದಗಳು ಇರಲಿವೆ. ಹಾಗೇ ಕನ್ನಡದ "ವನ್ಯ', "ರಾವಣ ರಾಜ್ಯದಲ್ಲಿ ನವದಂಪತಿಗಳು', "ಖಾಲಿ ಪುಟ', "ಸು ಫ್ರಮ್ ಸೋ', "ನಮ್ ಸಾಲಿ', "ಅಮ್ಮಂಗ್ ಹೇಳ್ಬೇಡ', "ಕೂರ್ಮಾವತಾರ', "ಅಮರಶಿಲ್ಪಿ ಜಕ್ಕಣಾಚಾರಿ' ಸೇರಿ ದೇಶ ವಿದೇಶಗಳ 50ಕ್ಕೂ ಹೆಚ್ಚು ಸಿನಿಮಾಗಳ ಸ್ಕ್ರೀನಿಂಗ್ ಇರಲಿದೆ.