ಜಾಹ್ನವಿ, ಸ್ಪಂದನಾ ಸೋಮಣ್ಣ 
ಸ್ಯಾಂಡಲ್‌ವುಡ್

‘ದೊಡ್ಮನೆ’ ತಾರೆಯರ ಸಂಕ್ರಾಂತಿ ಸಂಭ್ರಮ : ಸುಗ್ಗಿ ಹಬ್ಬದ ಹಿಗ್ಗಿನಲ್ಲಿ ‘ಬಿಗ್‌ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳು

ಪ್ರಮುಖ ಮುಖ್ಯಾಂಶಗಳು

  • ಫಿನಾಲೆ ವಾರದಲ್ಲಿ ಕನ್ನಡದ ಜನಪ್ರಿಯ ಬಿಗ್​ಬಾಸ್ ಶೋ
  • ದೊಡ್ಮನೆಯ ಅನುಭವಗಳನ್ನು ಹಂಚಿಕೊಂಡ ಸ್ಪರ್ಧಿಗಳು
  • ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಧ್ಯೇಯ ಹೊಂದಿದ ನಟಿಯರು
ವರ್ಷದ ಮೊದಲ ಹಬ್ಬ ಹಾಗೂ ಸಮೃದ್ಧಿಯ ಸಂಕೇತವಾದ ಸಂಕ್ರಾಂತಿ ಆಚರಣೆ ರಂಗೇರಿದೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್ ಸೀಸನ್ 12’ ಕೂಡ ಫಿನಾಲೆ ವಾರದಲ್ಲಿದ್ದು, ಹೀಗಾಗಿ ‘ದೊಡ್ಮನೆ’ಯಲ್ಲೂ ಸುಗ್ಗಿ ಹಬ್ಬದ ಆಚರಣೆ ಜೋರಾಗಿದೆ. ಈ ನಡುವೆ ‘ದೊಡ್ಮನೆ’ ಆಟ ಮುಗಿಸಿ ಬಂದಿರುವ ನಟಿಯರಾದ ಜಾಹ್ನವಿ, ಸ್ಪಂದನಾ ಸೋಮಣ್ಣಗೂ ಈ ಬಾರಿಯ ಸಂಕ್ರಾಂತಿ ವಿಶೇಷ. ಸುಗ್ಗಿ ಹಬ್ಬದ ಹಿಗ್ಗಿನಲ್ಲಿರುವ ಅವರು, ಈ ಬಾರಿಯ ಆಚರಣೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ನೆನಪು, ಹಬ್ಬದ ಹೊಳಪು
ಮೊದಲು ಜಾಹ್ನವಿ ಎನ್ನುತ್ತಿದ್ದರು, ಇದೀಗ ಎಲ್ಲೆಡೆ ‘ಬಿಗ್‌ಬಾಸ್ ಜಾಹ್ನವಿ’ ಎಂದು ಕರೆಯುತ್ತಿದ್ದಾರೆ. ಮೊದಲು ಪ್ರತಿಭೆ ಗುರುತಿಸಿದ್ದ ಜನ, ಬಿಗ್‌ಬಾಸ್ ಆಟದಲ್ಲಿ ನನ್ನ ವ್ಯಕ್ತಿತ್ವವನ್ನು ಗುರುತಿಸಿ, ಪ್ರೀತಿ ನೀಡಿದ್ದಾರೆ. ‘ಬಿಗ್‌ಬಾಸ್’ ಮನರಂಜನೆಯ ಆಟವಷ್ಟೇ. ಅಲ್ಲಿಂದ ನಾನು ಹಲವು ನೆನಪುಗಳನ್ನು ತಂದಿದ್ದೇನೆ. ಜೀವನವೇ ನನಗೆ ಹೆಚ್ಚು ಪಾಠ ಕಲಿಸಿದ್ದರಿಂದ ‘ದೊಡ್ಮನೆ’ಯಿಂದ ಇಂತಹ ವಿಚಾರ ಕಲಿತಿದ್ದೇನೆ ಎಂಬುದೇನೂ ಇಲ್ಲ. ಜರ್ನಿಯನ್ನು ಎಂಜಾಯ್ ಮಾಡಿದ್ದೇನೆ. ಇನ್ನುಮುಂದೆ ಹೆಚ್ಚು ವಿಧೇಯಳಾಗಿರಬೇಕು, ಯಾವುದಕ್ಕೂ ರಾಜೀ ಆಗದೇ ವ್ಯಕ್ತಿಗತ ಗೌರವದಿಂದ ಮುನ್ನಡೆಯಬೇಕು ಹಾಗೂ ಕೆಲಸಕ್ಕಾಗಿ ಶೇ.100 ರಷ್ಟು ಪರಿಶ್ರಮ ಹಾಕಬೇಕು- ಇವು ಈ ಬಾರಿ ಸಂಕ್ರಾಂತಿ ಹಬ್ಬದಲ್ಲಿ ನಾನು ತೆಗೆದುಕೊಂಡಿರುವ ನಿರ್ಧಾರಗಳು. ಮಗ ಮತ್ತು ನಾನು ಇಬ್ಬರೂ ಮನೆಯಲ್ಲೇ ಹಬ್ಬ ಆಚರಿಸಲಿದ್ದೇವೆ. ಹೊಸ ಬಟ್ಟೆ ಧರಿಸಿ, ಮನೆಯಲ್ಲಿ ಪೂಜೆ ಮಾಡಿ ನಂತರ ದೇವಸ್ಥಾನಕ್ಕೆ ತೆರಳುತ್ತೇವೆ. ಕಬ್ಬು, ಅವರೇಕಾಯಿ ಖರೀದಿಸಿದ್ದೇವೆ. ‘ಬಿಗ್‌ಬಾಸ್’ನಿಂದ ಬಂದಿರುವ ಕಾರಣ ಹಬ್ಬದ ಖುಷಿ ಹೆಚ್ಚಿರಲಿದೆ. ಹೊಸ ಸಿನಿಮಾ ಸದ್ಯದಲ್ಲೇ ಘೋಷಣೆಯಾಗಲಿದ್ದು, ಅದರಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಕನ್ನಡದ ‘ಯುವ ರಾಬಿನ್‌ಹುಡ್’ ಸಿನಿಮಾ ಅಂತಿಮ ಹಂತದಲ್ಲಿದೆ. ಅದು ಈ ವರ್ಷ ರಿಲೀಸ್ ಆಗಲಿದೆ. ಎಲ್ಲ ಏಳು-ಬೀಳುಗಳಿಗೆ ಇಂದಿನಿಂದಲೇ ಫುಲ್‌ಸ್ಟಾಪ್ ಇಟ್ಟು, ಅಮ್ಮ, ಮಗನ ಜತೆ ಜೀವನವನ್ನು ಎಂಜಾಯ್ ಮಾಡುತ್ತೇನೆ.
| ಜಾಹ್ನವಿ, ನಟಿ

ಮೈಸೂರಿನಲ್ಲಿ ಸುಗ್ಗಿಯ ಹಿಗ್ಗು

‘ಬಿಗ್‌ಬಾಸ್’ನಿಂದ ಹೆಚ್ಚು ಗುರುತಿಸಿಕೊಳ್ಳಲು ಸಾಧ್ಯವಾಯಿತು. ಹಿಂದೆ ಧಾರಾವಾಹಿಯಲ್ಲಿ ನಟಿಸಿದ್ದರೂ, ಅಭಿಮಾನಿಗಳಿಂದ ಈಗ ಹೆಚ್ಚು ಪ್ರೀತಿ ಸಿಗುತ್ತಿದೆ. ನನ್ನ ನಿರ್ಧಾರಗಳು ಎಷ್ಟು ಸರಿಯಾಗಿರುತ್ತವೆ ಎಂಬುದು ಈ ಶೋನಿಂದ ಆರ್ಥವಾಗಿದೆ. ಅದೇ ಕಾರಣಕ್ಕಾಗಿ ತುಂಬಾ ದಿನಗಳ ಕಾಲ ದೊಡ್ಮನೆಯಲ್ಲಿ ಜರ್ನಿ ಮಾಡಲು ಸಾಧ್ಯವಾಯಿತು. ಅಲ್ಲಿಂದ ಹೊರಬಂದ ಬಳಿಕವೂ, ಎಲ್ಲಿಯೂ ನನ್ನ ಬಗ್ಗೆ ನಕರಾತ್ಮಕ ವಿಚಾರಗಳು ಬಂದಿಲ್ಲ. ಹಾಗಾಗಿ, ಆಟವನ್ನು ಚೆನ್ನಾಗಿ ಆಡಿದ್ದೇನೆ ಎಂಬ ಆತ್ಮತೃಪ್ತಿಯಿದೆ. ಈ ಜರ್ನಿಯಲ್ಲಿ ಕಲಿತಿದ್ದು ತುಂಬಾ ಇದೆ. ಜೀವನದಲ್ಲಿ ಜಿದ್ದು ಸಾಧಿಸುತ್ತಿರುತ್ತೇವೆ. ಸಣ್ಣ ವಿಷಯಗಳಿಗೂ ಜಗಳ ಮಾಡಿಕೊಂಡು ಮಾತು ಬಿಡುತ್ತೇವೆ. ಆ ಮನಸ್ತಾಪಗಳನ್ನು ದೀರ್ಘಕಾಲ ಮುಂದುವರಿಸದೇ, ಖುಷಿಯಿಂದ ಇರಬೇಕು ಎನ್ನುವುದನ್ನು ಕಲಿತಿದ್ದೇನೆ. ಈ ಬಾರಿ ಸಂಕ್ರಾಂತಿಯನ್ನು ಮೈಸೂರಿನಲ್ಲಿ ಆಚರಿಸಲಿದ್ದೇನೆ. ಹಳ್ಳಿಯಿಂದ ಅಜ್ಜ-ಅಜ್ಜಿ ಹೊಲದಲ್ಲಿ ಬೆಳೆದ ಅಕ್ಕಿಯನ್ನು ತರುತ್ತಾರೆ. ಅದನ್ನೇ ನಾವು ಹೊಸ ಅಕ್ಕಿ ಎಂದು ಪೂಜಿಸುವ ಪ್ರತೀತಿ ಇದೆ. ಪೂಜೆಯ ಬಳಿಕ ದೇವಸ್ಥಾನಗಳಿಗೆ ಹೋಗಿ, ಬಳಿಕ ನೆರೆ-ಹೊರೆಯವರು, ಸಂಬಂಧಿಗಳಿಗೆ ಎಳ್ಳು-ಬೆಲ್ಲ ಬೀರುತ್ತೇವೆ. ಚಿಕ್ಕಂದಿನಿಂದಲೂ ಊರಿನಲ್ಲಿ ದನಗಳ ಕಿಚ್ಚಾಯಿಸುವುದು, ಸುಗ್ಗಿ ಸೊಬಗನ್ನು ಕಣ್ತುಂಬಿಕೊಂಡು ಬೆಳೆದವಳು ನಾನು. ಹೀಗಾಗಿಯೇ ಸಂಕ್ರಾಂತಿ ನನಗೆ ವಿಶೇಷ. ‘ಬಿಗ್‌ಬಾಸ್’ ಬಳಿಕ ಹೆಚ್ಚು ಅವಕಾಶಗಳು ಬರುತ್ತಿವೆ. ಆದರೆ, ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಕಲಾವಿದಳಾಗಿಯೇ ಮುಂದುವರಿಯಬೇಕು, ಒಳ್ಳೆಯ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಬೇಕು ಎನ್ನುವುದು ನನ್ನ ಗುರಿ.
| ಸ್ಪಂದನಾ ಸೋಮಣ್ಣ, ನಟಿ