ಬಿಗ್ಬಾಸ್ ಸೀಸನ್ 9ರ ಸ್ಪರ್ಧಿ ಹಾಗೂ ಕನ್ನಡ ಪರ ಹೋರಾಟಗಾರರಾದ ರೂಪೇಶ್ ರಾಜಣ್ಣ ಖಡಕ್ ಮತ್ತು ನಟ ಕಿಚ್ಚ ಸುದೀಪ್
- ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ನಿರೂಪಕ ಸುದೀಪ್ ಅವರ ಹಸ್ತಕ್ಷೇಪವೂ ಇದೆ ಎಂಬ ಆರೋಪ
- ಬಿಗ್ಬಾಸ್ ಸೀಸನ್ 9ರ ಸ್ಪರ್ಧಿ ಹಾಗೂ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಖಡಕ್ ಉತ್ತರ
- ಸುದೀಪ್ ಸರ್ ಹಸ್ತಕ್ಷೇಪ ಇದೆ ಅಂತ ಯಾವ ಮುಠ್ಠಾಳ ಹೇಳಿದ ಎಂದು ಗುಡುಗಿದ ರೂಪೇಶ್ ರಾಜಣ್ಣ
ಬೆಂಗಳೂರು: ಬಿಗ್ಬಾಸ್ ಶೋ ( BBK 12 ) ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಶೋ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಪ್ರಸ್ತುತ ನಡೆಯುತ್ತಿರುವ 12ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದೆ. ಇನ್ನೂ ಎರಡು ದಿನದಲ್ಲಿ ತೆರೆಬೀಳಲಿದ್ದು, ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಇದರ ನಡುವೆ ರಾಜಕೀಯ ಚರ್ಚೆಯು ಶುರುವಾಗಿದೆ. ಕೆಲವರು ನಿರೂಪಕ ಸುದೀಪ್ ವಿರುದ್ಧವೂ ಟೀಕಾಪ್ರಹಾರ ನಡೆಸುತ್ತಿದ್ದಾರೆ.
ಹಾಸ್ಯ ಕಲಾವಿದ ಗಿಲ್ಲಿ ಈ ಬಾರಿಯ ಬಿಗ್ಬಾಸ್ ಶೋ ಗೆಲ್ಲುತ್ತಾರೆ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಈಗಾಗಲೇ ಗಿಲ್ಲಿಯ ಬಗ್ಗೆ ಸಾಕಷ್ಟು ಪ್ರಚಾರ ಕೂಡ ನಡೆದಿದೆ. ಅದರಲ್ಲೂ ಮಂಡ್ಯದಲ್ಲಿ ಶಾಸಕರಿಂದ ಹಿಡಿದು ಸಾರ್ವಜನಿಕರವರೆಗೆ ಗಿಲ್ಲಿ ಗೆಲ್ಲಬೇಕೆಂದು ಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆ, ಕೆಲವರು ಅಶ್ವಿನಿ ಗೌಡ ಅವರನ್ನು ಗೆಲ್ಲಿಸಲು ಬಿಗ್ಬಾಸ್ ಮುಂದಾಗಿದೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ.
ಇತ್ತೀಚೆಗೆ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ತಮ್ಮ ಮಗನ ಮದುವೆಗೆ ಆಮಂತ್ರಣ ನೀಡಲು ನಟ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಉಭಯ ನಾಯಕರು ಕುಶಲೋಪರಿ ನಡೆಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಯಿತು. ಅಶ್ವಿನಿ ಗೌಡ ಕೂಡ ಕನ್ನಡ ಹೋರಾಟಗಾರ್ತಿ ಆಗಿರುವ ಹಿನ್ನೆಲೆಯಲ್ಲಿ ನಾರಾಯಣ ಗೌಡರು ಅಶ್ವಿನಿ ಗೆಲ್ಲಿಸಲು ಸುದೀಪ್ ಭೇಟಿಯಾಗಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಇದರ ನಡುವೆ, ಈ ಶೋನಲ್ಲಿ ಸುದೀಪ್ ಅವರ ಹಸ್ತಕ್ಷೇಪವೂ ಇದೆ ಎಂಬ ಆರೋಪವೂ ಇದೆ. ಅಂದರೆ, ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡುವ ವಿಚಾರದಲ್ಲಿ ಸುದೀಪ್ ಅವರು ಹಸ್ತಕ್ಷೇಪ ಮಾಡುತ್ತಾರೆ ಎಂಬ ಆರೋಪಕ್ಕೆ ಬಿಗ್ಬಾಸ್ ಸೀಸನ್ 9ರ ಸ್ಪರ್ಧಿ ಹಾಗೂ ಕನ್ನಡ ಪರ ಹೋರಾಟಗಾರರಾದ ರೂಪೇಶ್ ರಾಜಣ್ಣ ಖಡಕ್ ಉತ್ತರ ನೀಡಿದ್ದಾರೆ.
ವಿಜಯವಾಣಿ ಡಿಜಿಟಲ್ ಸಂದರ್ಶನದಲ್ಲಿ ಮಾತನಾಡಿದ ರೂಪೇಶ್ ರಾಜಣ್ಣ, ಸುದೀಪ್ ಸರ್ ಹಸ್ತಕ್ಷೇಪ ಇದೆ ಅಂತ ಯಾವ ಮುಠ್ಠಾಳ ಹೇಳಿದ. ವರ್ಷದ ಮೂರ್ಖ ಎಂಬ ಪ್ರಶಸ್ತಿ ಇದ್ದರೆ ಈ ಮಾತನ್ನು ಹೇಳಿದವರಿಗೆ ಕೊಡಬೇಕು. ಈ ಶೋನಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಸುದೀಪ್ ಸರ್ ಕೈಯಲ್ಲಿ ಇಲ್ಲ. ಮುಂದಿನ ಸ್ಪರ್ಧಿ ಯಾರೆಂಬ ವಿಚಾರವೂ ಅವರಿಗೆ ಗೊತ್ತಿರುವುದಿಲ್ಲ. ಸ್ಪರ್ಧಿಗಳ ಆಯ್ಕೆಯಿಂದ ಹಿಡಿದು ಪ್ರತಿಯೊಂದು ವಿಚಾರವೂ, ಆ ಶೋನ ನಿರ್ದೇಶಕರು ಮತ್ತು ಆ ಶೋನ ತಂಡ ಮತ್ತು ಕಲರ್ಸ್ ಕನ್ನಡ ಚಾನೆಲ್ ನಿರ್ಧರಿಸುತ್ತದೆ. ಅದೊಂದು ದೊಡ್ಡ ಪ್ರಕ್ರಿಯೆಯಾಗಿದ್ದು, ನಾವು-ನೀವು ಸುಮ್ಮನೇ ಮಾತನಾಡಬಾರದು ಎಂದರು.
ಸುದೀಪ್ ಸರ್ ಏನೇ ಮಾತನಾಡಿದರು ಎಪಿಸೋಡ್ ನೋಡಿಯೇ ಮಾತನಾಡುವುದು. ಬಿಗ್ಬಾಸ್ ಮನೆಯಲ್ಲಿ ಯಾರಿದ್ದರೆ ಅಥವಾ ಯಾರು ಹೋದರೆ ಅವರಿಗೇನು? ಅವರಿಗೆ ಬರುವ ಹಣ ಬಂದೇ ಬರುತ್ತದೆ. ಅವರು ನಡೆಸುವ ಎಪಿಸೋಡ್ ನಡೆಸಿಕೊಡುತ್ತಾರೆ. ಹಾಗಾಗಿ, ಸುದೀಪ್ ಸರ್ ನಿರ್ಧಾರ ಮಾಡುತ್ತಾರೆ ಅನ್ನೋದು ಸುಳ್ಳು. ಶೋನಲ್ಲಿ ಯಾರೇ ಸ್ಪರ್ಧಿಯಾಗಲಿ, ಅವರು ಕುಗ್ಗಿದಾಗ ಮೇಲಕ್ಕೆ ಎತ್ತುತ್ತಾರೆ ಮತ್ತು ಅತಿರೇಕಕ್ಕೆ ಹೋದ ಸ್ಪರ್ಧಿಗಳನ್ನು ಸರಿಯಾದ ದಾರಿಗೆ ತರುತ್ತಾರೆ. ಅವರ ಮೇಲೆ ಈ ರೀತಿಯ ಆರೋಪ ಸರಿಯಲ್ಲ. ಈ ರೀತಿ ಮಾತನಾಡಬಾರದು ಎಂದು ರೂಪೇಶ್ ರಾಜಣ್ಣ ವಿಜಯವಾಣಿ ಡಿಜಿಟಲ್ ಜತೆ ಮಾತನಾಡುತ್ತಾ ಸ್ಪಷ್ಟನೆ ನೀಡಿದರು.