ರಿಷಾ ಗೌಡ 
ಸ್ಯಾಂಡಲ್‌ವುಡ್

ರಿಷಾ ಇನ್ ಬೆಂಗಳೂರು : ಕನ್ನಡ ಸೇರಿ ತೆಲುಗು, ತಮಿಳಿನಲ್ಲೂ ಬಿಜಿಯಾದ ‘ಬಿಗ್‌ಬಾಸ್’ ಖ್ಯಾತಿಯ ನಟಿ

ಪ್ರಮುಖ ಮುಖ್ಯಾಂಶಗಳು

  • ಬಿಗ್ ಬಾಸ್ ಎಂಟ್ರಿ ನೀಡಿ ಆಟಕ್ಕೆ ತಿರುವು ನೀಡಿದ್ದ ನಟಿ
  • ರಿಷಾ ಅಭಿನಯದ ಬೆಂಗಳೂರು ಇನ್​ ಸಿನಿಮಾ 17ಕ್ಕೆ ರಿಲೀಸ್​
  • ತಮಿಳು, ತೆಲುಗು ಚಿತ್ರರಂಗದಲ್ಲಿ ನಟಿಯ ಛಾಪು
ಬೆಂಗಳೂರು: ‘ಬಿಗ್‌ಬಾಸ್ ಕನ್ನಡ ಸೀಸನ್ 12’ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ನೀಡಿ, ಆಟಕ್ಕೆ ತಿರುವು ತಂದಿದ್ದ ಸ್ಪರ್ಧಿ ನಟಿ ರಿಷಾ ಗೌಡ. ‘ದೊಡ್ಮನೆ’ ಸ್ಪರ್ಧೆ ಬಳಿಕ ರಿಷಾ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ಸದ್ಯ ಅವರು ಕನ್ನಡ ಸೇರಿ ಪರಭಾಷಾ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅದರಲ್ಲಿ ನಟಿಯ ‘ಬೆಂಗಳೂರು ಇನ್’ ಇದೇ 17ಕ್ಕೆ ರಿಲೀಸ್ ಆಗಲಿದೆ. ‘ಮೊದಲ ಸಿನಿಮಾ ‘ಕ್ರೇಜಿ ಕೀರ್ತಿ’ಯಲ್ಲಿ ನನ್ನ ನಟನೆ ನೋಡಿ ಓಂಪ್ರಕಾಶ್ ರಾವ್ ಸರ್ ಈ ಚಿತ್ರಕ್ಕೆ ರೆಫರ್ ಮಾಡಿದ್ದರು. ಮೊದಲ ಮೀಟಿಂಗ್‌ನಲ್ಲಿಯೇ ನಾನು ಮತ್ತು ಅನುಷಾ ಇಬ್ಬರು ಆಯ್ಕೆಯಾಗಿದ್ದೆವು. ನನ್ನ ಪಾತ್ರಕ್ಕೆ ತುಂಬಾ ಶೇಡ್‌ಗಳಿದ್ದು, ಧರ್ಮ ಕೀರ್ತಿರಾಜ್, ಶಶಿಕುಮಾರ್, ಬಲ ರಾಜವಾಡಿ ಸೇರಿ ಎಲ್ಲ ಕಲಾವಿದರ ಜತೆ ಸ್ಕ್ರೀನ್ ಸ್ಪೇಸ್ ದೊರೆತಿರುವುದು ನನ್ನ ಅದೃಷ್ಟ. ಸದ್ಯಕ್ಕೆ ಪಾತ್ರದ ಬಗ್ಗೆ ಹೆಚ್ಚು ಬಿಟ್ಟುಕೊಡುವಂತಿಲ್ಲ. ಶೂಟಿಂಗ್ ವೇಳೆ ನರ್ವಸ್ ಆಗುತ್ತಿದ್ದೆ. ಆಗ ಶಶಿಕುಮಾರ್ ಸರ್ ಸಹಜವಾಗಿ ಅಭಿನಯಿಸಿ, ಹೆದರಬೇಡಿ ಎಂದು ಧೈರ್ಯ ತುಂಬುತ್ತಿದ್ದರು’ ಎಂದು ರಿಷಾ ಶೂಟಿಂಗ್ ಅನುಭವದ ಬಗ್ಗೆ ಹಂಚಿಕೊಳ್ಳುತ್ತಾರೆ.
ಟಾಲಿವುಡ್, ಕಾಲಿವುಡ್‌ಗೆ ‘ತೀರ್ಥಯಾತ್ರೆ’
ಕನ್ನಡದಲ್ಲಿ ಮಿಂಚುತ್ತಿರುವಾಗಲೇ ರಿಷಾ ತೆಲುಗು, ತಮಿಳು ಚಿತ್ರರಂಗದತ್ತ ಯಾತ್ರೆ ಬೆಳೆಸಿದ್ದಾರೆ. ಪರಭಾಷೆಯ ಮೂರು ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ‘ತೆಲುಗಿನ ‘ಮಗರಂ’ ಶೂಟಿಂಗ್ ಮುಗಿಸಿದ್ದೇನೆ. ಜತೆಗೆ ಇನ್ನೊಂದು ತೆಲುಗು ಚಿತ್ರಕ್ಕೆ ಸಹಿ ಮಾಡಿದ್ದೇನೆ. ‘ಮಗರಂ’ನಲ್ಲಿ ಹಳ್ಳಿ ಹುಡುಗಿಯ ಪಾತ್ರ. ಗ್ಲಾಮರಸ್ ಆಗಿ ನೋಡಿರುವ ನನ್ನನ್ನು ಪಕ್ಕಾ ಜವಾರಿ ಸ್ಟೈಲ್‌ನಲ್ಲಿ ನೋಡಬಹುದು. ‘ತೀರ್ಥಯಾತ್ರಂ’ ಎಂಬ ಆ್ಯಕ್ಷನ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದೇನೆ. ಎರಡು-ಮೂರು ´ಫೈಟ್‌ಗಳಿದ್ದು, ಅದಕ್ಕಾಗಿ ತಯಾರಿ ನಡೆಸಿದ್ದೇನೆ. ಪಾತ್ರಕ್ಕಾಗಿ ಎರಡು ತಿಂಗಳಲ್ಲಿ ಆರು ಕೆಜಿ ಕಡಿಮೆಯಾಗಿದ್ದೇನೆ. ಸಿನಿಮಾ ಬಿಜಿ ನಡುವೆಯೂ ಬಲ ರಾಜವಾಡಿ ಪತ್ನಿ ಪರಿಮಳಾ ಹತ್ತಿರ ಭರತನಾಟ್ಯ ಕಲಿಯುತ್ತಿದ್ದೇನೆ. ಭರತನಾಟ್ಯ ಮೂಲಕ ಭಾರತೀಯ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸಬೇಕು ಎಂಬುದು ನನ್ನ ಗುರಿ’ ಎನ್ನುತ್ತಾರೆ ರಿಷಾ.