ಚಿತ್ರ: ಭಾವಾಂತರ
ನಿರ್ದೇಶಕ: ಕಾರ್ತಿಕ್ ಶರ್ಮಾ
ತಾರಾಗಣ: ಕಾರ್ತಿಕ್ ಶರ್ಮಾ, ತನ್ವಿ ರಾವ್, ಪ್ರಣವ್ ಶ್ರೀಧರ್, ಶ್ರೀ ವೈಷ್ಣವ್ ಮತ್ತಿತರರು.
‘ಮೊಲೆ ಮೂಡಿ ಬಂದೆಡೆ ಹೆಣ್ಣೆಂಬರು, ಗಡ್ಡ ಮೀಸೆ ಬಂದೆಡೆ ಗಂಡೆಂಬರು, ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ ಕಾಣಾ!’ ರಾಮನಾಥ’- ಇದು ಜೇಡರ ದಾಸೀಮಯ್ಯರ ಪ್ರಸಿದ್ಧ ವಚನ. ಈ ಸಾಲಿನ ಭಾವನೆಗಳ ರೂಪಾಂತರವೇ ಕಾರ್ತಿಕ್ ಶರ್ಮಾ ನಿರ್ದೇಶನದ ‘ಭಾವಾಂತರ’ ಸಿನಿಮಾ. ಪ್ರೀತಿಸುತ್ತಿದ್ದ ಪ್ರಿಯಕರ ಹೆಣ್ಣಾದಾಗ, ಪ್ರೇಯಸಿಯಲ್ಲಿ ಮೂಡುವ ಭಾವನೆ ಮತ್ತು ಪ್ರೀತಿ ಎಲ್ಲವನ್ನೂ ಮೀರಿದ್ದು ಎಂಬುದನ್ನು ಹೇಳುವ ಪ್ರಯತ್ನ ಈ ಚಿತ್ರದ್ದು.
ಸಿನಿಮಾ ಆಸಕ್ತಿಯೊಂದಿಗೆ ಒಬ್ಬಂಟಿಯ ದಿನಗಳನ್ನು ಕಳೆಯುತ್ತಿರುವವಳು ರಾಧಾ (ತಾನ್ವಿ). ಆಂತರಿಕವಾಗಿ ಸೋತಂತೆ ಇದ್ದರೂ, ಬಹಿರಂಗವಾಗಿ ಗೆದ್ದವಳಂತೆ ಕಾಣುವ ಹುಡುಗಿ. ಆಕೆಯ ಒಳಗಡೆ ಏನೋ ಒಂದು ಕಾಡುವಿಕೆಯಿದೆ. ಅದನ್ನು ಯಾರಿಗೂ ಹೇಳಿದವಳಲ್ಲ. ಪ್ರತಿಷ್ಠಿತ ಫಿಲಂ ಫೆಸ್ಟಿವಲ್ಗಾಗಿ ಡಾಕ್ಯುಮೆಂಟರಿ ಮಾಡಿ ಕಳುಹಿಸಲು ರಾಧಾ, ಗೆಳೆಯರ ಬಳಿ ಸಲಹೆ ಕೇಳುತ್ತಾಳೆ. ಅದಕ್ಕೆ ಅಭಿ (ಪ್ರಣವ್) ಮಂಗಳಮುಖಿಯರ ಜೀವನದ ಬಗ್ಗೆ ಎಂದಾಗ, ಮೊದಲಿಗೆ ಒಪ್ಪದಿದ್ದರೂ ವಿಷಯವಸ್ತುವಿನ ಆಳದ ಬಗ್ಗೆ ತಿಳಿದು ಆಕೆ ‘ಎಸ್’ ಎನ್ನುತ್ತಾಳೆ. ನಾಲ್ಕು ಜನರ ತಂಡ ತಮಿಳುನಾಡಿನ ಕೂವಗಂನಲ್ಲಿ ನಡೆಯುವ ಮಂಗಳಮುಖಿಯರ ಜಾತ್ರೆಗೆ ತೆರಳುತ್ತದೆ. ಮೊದಲ ದಿನದ ಶೂಟಿಂಗ್ ಮುಗಿಸಿಕೊಳ್ಳುತ್ತಾರೆ. ಆ ದಿನ ರಾತ್ರಿ ಅಭಿ, ರಾಧಾಳ ಮೇಲೆ ಇರುವ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದು ಅವಳನ್ನು ಹೊರಗೆ ಕರೆದೊಯ್ಯುತ್ತಾನೆ. ಇನ್ನೇನು ಅವನು ಪ್ರೇಮ ನಿವೇದಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ರಾಧಾ ಕುಸಿಯುತ್ತಾಳೆ. ಆಕೆ ಕುಸಿಯುವುದು ಅಭಿ ವಿಚಾರಕಲ್ಲ. ಬದಲಾಗಿ ತಾನೇ ಪ್ರೀತಿಸಿದ ಹುಡುಗ ಮಾಧವ ಮತ್ತು ಆತನ ಅವತಾರ ಕಂಡು! ಹುಡುಗನಂತಿದ್ದ ಮಾಧವ (ಕಾರ್ತಿಕ್) ಹೆಣ್ಣಾಗಿ ಬದಲಾಗಿದ್ದಾನೆ. ಅವನ ಅವತಾರ ಕಂಡು ಬೆಚ್ಚುವ ರಾಧೆಯ ಮನದಲ್ಲಿ ಮೂಡುವ ಭಾವನೆಗಳ ಸಂಕೋಲೆಯೇ ‘ಭಾವಾಂತರ’ದ ಮುಂದುವರಿದ ಕಥೆ.
ಈ ಪ್ರಬುದ್ಧ ಕಥೆಯಲ್ಲಿ ಸಮಾಜದಿಂದ ತಿರಸ್ಕರಿಸಲ್ಪಟ್ಟ ಸಮುದಾಯವೊಂದರ ವ್ಯಥೆಯಿದೆ. ಬಹಿರಂಗವಾಗಿ ಗಂಡಿನಂತಿದ್ದರೂ, ಆಂತರಿಕ ಹೆಣ್ಣಿನ ನೈಜ ರೂಪವನ್ನು ತೋರಿಸಿದರೆ ಎಲ್ಲಿ ಜನ ತಿರಸ್ಕರಿಸುತ್ತಾರೆ ಎಂಬ ಒಳಕುದಿಯಿದೆ. ಇನ್ನು ‘ಅವನು, ಅವಳಾದಾಗ’ ಆಕೆ ಅನುಭವಿಸುವ ತಿರಸ್ಕಾರ, ಸಂಕಟಗಳಿವೆ. ಈ ಎಲ್ಲ ವಿಚಾರವನ್ನು ಕಾರ್ತಿಕ್ ಆಳವಾಗಿ ಹೇಳದಿದ್ದರೂ, ಭಾವ ಮತ್ತು ಮಾಹಿತಿ ಪೂರ್ಣವಾಗಿ ನಿರೂಪಿಸಿದ್ದಾರೆ. ನಟನೆ, ನಿರ್ದೇಶನ ಎರಡೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯಾಗಿ ಕಾಡುತ್ತಾರೆ. ತನ್ವಿ ಅಭಿನಯ ‘ಅವಾರ್ಡ್ ವಿನ್ನಿಂಗ್ ರ್ಪಾಮೆನ್ಸ್’. ‘ಮೊದ ಮೊದಲಿದು.. ’ ಹಾಡು ನೆನಪಿನಲ್ಲಿ ಉಳಿಯುತ್ತದೆ. ಕೂವಗಂ ಜಾತ್ರೆಯನ್ನು ಛಾಯಾಗ್ರಾಹಕ ಸಾಗರ್ ನೈಜವಾಗಿ ಚಿತ್ರಿಸಿದ್ದಾರೆ. ತಮಿಳಿನ ‘ಡೊರೊಥಿ’ ನೋಡಿ ಮೆಚ್ಚಿದ ಪ್ರೇಕ್ಷಕ ಅದೇ ರೀತಿಯ ‘ಭಾವಾಂತರ’ಕ್ಕೂ ಒಂದು ಪ್ರೋತ್ಸಾಹ ನೀಡಬೇಕಷ್ಟೆ.