- ನಟನೆಯತ್ತ ಮುಖ ಮಾಡಿದ ವಿತರಕ ಶ್ರೀನಿವಾಸಲು ಪುತ್ರಿ
- ಜೆಸಿ ಮೂಲಕ ಭರವಸೆ ಕಾಣುತ್ತಿರುವ ಭಾವನಾ ರೆಡ್ಡಿ
- ವಯಸ್ಸು ಮೀರಿದ ವಿಭಿನ್ನ ಪಾತ್ರದಲ್ಲಿದ್ದಾರೆ ನಟಿ
ಬೆಂಗಳೂರು : ಸಿನಿಮಾ ಎಂಬುದೇ ದೊಡ್ಡ ಆಕರ್ಷಣೆ. ಚಿತ್ರರಂಗದಲ್ಲಿ ಕಲಾವಿದರಾಗಿ ಮಿಂಚಬೇಕು ಎಂಬುದು ಬಹುತೇಕರು ಕನಸು. ಇನ್ನು ಮನೆಯಲ್ಲಿ ಯಾರಾದರೂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಒಡನಾಟ ಇಟ್ಟುಕೊಂಡಿದ್ದರೆ ಕಲಾವಿದರಾಗುವ ಕನಸಿಗೆ ರೆಕ್ಕೆ ಬರುವುದು ಸಾಮಾನ್ಯ. ಇದೇ ರೀತಿ ಅಪ್ಪನ ನೆರಳಲ್ಲಿ ಚಿತ್ರರಂಗಕ್ಕೆ ಬಂದವರು ನಟಿ ಭಾವನಾ ರೆಡ್ಡಿ. ಕನ್ನಡ ಚಿತ್ರರಂಗದಲ್ಲಿ ವಿತರಕರಾಗಿ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿರುವ ಜೆ. ಶ್ರೀನಿವಾಸಲು ಪುತ್ರಿ ಭಾವನಾ ರೆಡ್ಡಿ, ಇದೀಗ ಚೇತನ್ ಜಯರಾಮ್ ನಿರ್ದೇಶನದ, ಸೂರ್ಯ ಪ್ರಖ್ಯಾತ್ ಅಭಿನಯದ ‘ಜೆಸಿ: ದ ಯೂನಿವರ್ಸಿಟಿ’ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ಖುಷಿಯಲ್ಲಿ ಸಿನಿಮಾ ಜರ್ನಿ ಕುರಿತು, ‘ಸಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುವಾಗ ಅಂತರ್ ಕಾಲೇಜು ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆ ಬಳಿಕ ಮಾಡೆಲಿಂಗ್‌ನಲ್ಲಿ ಮುಂದುವರಿಯಬೇಕು ಅಂತ ಆಸೆಯಾಯಿತು. ಅಪ್ಪ- ಅಮ್ಮ ಮಾಡೆಲಿಂಗ್‌ಗಿಂತ ಆ್ಯಕ್ಟಿಂಗ್ ಮಾಡು ಎಂದರು. ಅವರ ಮಾತು ಕೇಳಿ ನನಗೂ ನಟಿಯಾಗುವ ಆಸೆ ಚಿಗುರೊಡೆಯಿತು. ಬಳಿಕ ಸಿದ್ಧತೆ ನಡೆಸಿದೆ. ಆಡಿಷನ್ ಕೊಡಲು ಪ್ರಾರಂಭಿಸಿದೆ. 2023ರಲ್ಲಿ ಮೊದಲು ‘ಜೆಸಿ’ಗೆ ಆಯ್ಕೆಯಾದೆ. 2024ರಲ್ಲಿ ಶೂಟಿಂಗ್ ಆರಂಭವಾಯಿತು. ಮೂರು ವರ್ಷಗಳ ಕನಸಿನ ಪ್ರಾಜೆಕ್ಟ್ ಇದು. ಮೊದಲ ಚಿತ್ರದ ಮೇಲೆ ತುಂಬಾ ಭರವಸೆಯಿದೆ’ ಎನ್ನುತ್ತಾರೆ ಭಾವನಾ.
‘ಜೆಸಿ’ಯಲ್ಲಿ ಭಾವನಾ ರೆಡ್ಡಿ, ಮೇಘನಾ ಎಂಬ ಪಾತ್ರದಲ್ಲಿ, ಎರಡು-ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಮೊದಲ ಚಿತ್ರವೇ ನನಗೆ ತುಂಬಾ ಸವಾಲಾಗಿತ್ತು. 15 ವರ್ಷದಿಂದ 35 ವರ್ಷದ ಹುಡುಗಿಯ ವಿಭಿನ್ನ ಶೇಡ್‌ನಲ್ಲಿದ್ದೇನೆ. 15 ವರ್ಷದ ಹುಡುಗಿ ಎಂದರೆ, ಕ್ಯೂಟ್ ಆಗಿ ಕಾಣಿಸಿಕೊಂಡು ನಿರ್ವಹಿಸಬಹುದು, ಆದರೆ, ವಯಸ್ಸು ಮೀರಿ ಪಾತ್ರದಲ್ಲಿ ಅಭಿನಯಿಸುವುದು ತುಂಬಾ ಕಷ್ಟ. ಅದಕ್ಕಾಗಿ ನಿರಂತರ ತಯಾರಿ ನಡೆಸಿದೆ. ಸಿನಿಮಾ ಆರಂಭಕ್ಕೂ ಮುನ್ನ ವರ್ಕ್‌ಶಾಪ್ ಮೂಲಕ ರಿಹರ್ಸಲ್ ಮಾಡಿದೆವು. ಮೇಕಪ್, ಕಾಸ್ಟ್ಯೂಮ್ ಸೇರಿ ಎಲ್ಲವೂ ಭಿನ್ನ. ಇನ್ನು, ಪ್ರೀತಿಸಿದ ಹುಡುಗ ತಪ್ಪು ದಾರಿ ಹಿಡಿದಾಗ, ಆಕೆಯ ಬದುಕಿನ ಮೇಲೆ ಬೀರುವ ಪರಿಣಾಮಗಳ ಸುತ್ತ ಪಾತ್ರ ಸುತ್ತುತ್ತದೆ. ಸೂರ್ಯ ಪ್ರಖ್ಯಾತ್ ತುಂಬಾ ದಿನಗಳ ಬಳಿಕ ನಟನೆಗೆ ಮರಳಿದರೂ, ಉತ್ಸಾಹಿಯಾಗಿ ಅಭಿನಯಿಸಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ. ‘ಜೆಸಿ’ ಬೆನ್ನಲ್ಲೇ ಮೂರು ಕಥೆಗಳನ್ನು ಕೇಳಿರುವ ಭಾವನಾ ಸದ್ಯ ‘ಜೆಸಿ’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.