ಭಾರತಿ ಟೀಚರ್ ಚಿತ್ರದ ಪೋಸ್ಟರ್
- ಏಳನೇ ತರಗತಿ ವಿದ್ಯಾರ್ಥಿನಿಯಿಂದ ಅಕ್ಷರ ಕ್ರಾಂತಿ
- ಕಮರ್ಷಿಯಲ್ ಕಥೆಯಲ್ಲಿ ಭಾವನಾತ್ಮಕ ಪಯಣ
- ಯಶಿಕಾ ನಟನೆ ಚೆನ್ನಾಗಿ ಮೂಡಿಬಂದಿದೆ
ಚಿತ್ರ: ‘ಭಾರತಿ ಟೀಚರ್ 7ನೇ ತರಗತಿ’
ತಾರಾಗಣ: ಕು.ಯಶಿಕಾ, ಸಿಹಿ-ಕಹಿ ಚಂದ್ರು, ಆದಿತ್ಯ, ಅಶ್ವಿನ್ ಹಾಸನ್, ರೋಹಿತ್ ಮತ್ತಿತರರು.
ಹುಟ್ಟುವ ಮುಂಚೆಯೇ ತಂದೆ ಕಳೆದುಕೊಂಡ ಹುಡುಗಿ ಭಾರತಿ (ಯಶಿಕಾ). ತಾಯಿ ಮತ್ತು ಪ್ರೀತಿಯ ಮೇಷ್ಟ್ರು (ಸಿಹಿಕಹಿ ಚಂದ್ರು) ಅಕ್ಕರೆಯಲ್ಲಿ ಬೆಳೆಯುವ ಭಾರತಿ ಓದಿನಲ್ಲಿ ಸದಾ ಮುಂದು. ಊರಿನ ಎಲ್ಲರೂ ಅಕ್ಷರಸ್ಥರಾಗಬೇಕು ಹಾಗೂ ಕಡ್ಡಾಯವಾಗಿ ಕನ್ನಡ ಕಲಿಯಬೇಕು ಎಂಬ ಅಪೇಕ್ಷೆ ಆಕೆಯದು. ಆ ಸಮಯದಲ್ಲಿ ಮೇಷ್ಟ್ರು ನೆರವು ಪಡೆದು ಸಂಜೆ ಶಾಲೆ ಆರಂಭಿಸುತ್ತಾಳೆ. ಆದರೆ, ಯಾರೊಬ್ಬರೂ ಬರುವುದಿಲ್ಲ. ಇದು ಆಕೆಯ ನಿರಾಸೆಗೆ ಕಾರಣವಾಗುತ್ತದೆ. ಕೊನೆಗೆ ಉಪಾಯ ಮಾಡಿ ಜಿಲ್ಲಾಧಿಕಾರಿ ಆದಿತ್ಯ ನೆರವಿನಿಂದ ಇಡೀ ಊರಿನ ಜನ ಅಕ್ಷರ ಕಲಿಯುವಂತೆ ಮಾಡುತ್ತಾಳೆ. ಹಾಗಾದರೆ, ಜಾಣೆ ಭಾರತಿ ಊರಿನವರು ಅಕ್ಷರ ಕಲಿಯಲು ಮಾಡಿದ ಉಪಾಯವೇನು? ಈ ಸಮಯದಲ್ಲಿ ಆಕೆ ಎದುರಿಸಿದ ಸವಾಲುಗಳೇನು? ತಿಳಿಯಲು ‘ಭಾರತಿ ಟೀಚರ್ ಏಳನೇ ತರಗತಿ’ ಸಿನಿಮಾ ನೋಡಿ.
ಗ್ರಾಮೀಣ ಭಾಗದಲ್ಲಿ ಈ ಹಿಂದೆ ಹಿರಿಯರ ಶಿಕ್ಷಣಕ್ಕಾಗಿ ಸಂಜೆ ಶಾಲೆಗಳಿರುತ್ತಿದ್ದವು. ಆ ಮೂಲಕ ಅನಕ್ಷರಸ್ಥ ಹಳ್ಳಿ ಜನರಿಗೆ ಅಕ್ಷರ ಕಲಿಸುವ ಕೆಲಸವಾಗುತ್ತಿತ್ತು. ಅದನ್ನೇ ಸ್ಫೂರ್ತಿಯನ್ನಾಗಿಟ್ಟುಕೊಂಡು ಪ್ರಸನ್ನ ಈ ಕಥೆ ಹೇಳಿದಂತಿದೆ. ಇಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ ಭಾರತಿ ಮೂಲಕ ಪಾಠ ಮಾಡಿಸಿರುವುದು ಕಥೆಯನ್ನು ಹೆಚ್ಚು ಆಪ್ತವಾಗಿಸುತ್ತದೆ. ಆರಂಭದಲ್ಲಿ ಕಥೆಯು ಭಾವನಾತ್ಮಕವಾಗಿ ಸೆಳೆಯುತ್ತದೆ. ತಣ್ಣಗೆ ಸಾಗುವ ಕಥೆಯ ನಡುವೆ ಬರುವ ರಾಜಶೇಖರ್ ಎಂಬ ಪಾತ್ರದ ಹೀರೋಯಿಸಂ ಅವಶ್ಯಕತೆ ಇರಲಿಲ್ಲ. ಭಾರತಿ ಸಾಹಸವನ್ನು ಇನ್ನಷ್ಟು ಭಾವನಾತ್ಮಕವಾಗಿ ಕಟ್ಟಿಕೊಡಲು ಅವಕಾಶವಿತ್ತು. ಭಾರತಿ ಪಾತ್ರಧಾರಿ ಯಶಿಕಾ ಮುದ್ದಾಗಿ ನಟಿಸಿದ್ದಾರೆ. ಸಿಹಿಕಹಿ ಚಂದ್ರು, ಗೋವಿಂದೇಗೌಡ, ಅಶ್ವಿನ್ ಹಾಸನ್, ದಿವ್ಯಾ ಅಂಚನ್ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಆದಿತ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ನೀಡುತ್ತಾರೆ. ಹಾಡುಗಳು ಕೇಳಲು ಇಂಪಾಗಿದ್ದು, ಪ್ರಸನ್ನ ಸಂಗೀತ ಚೆನ್ನಾಗಿ ಮೂಡಿಬಂದಿದೆ.