Naveen Chandra - "ಮಾರ್ಕ್' ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಒನ್ ಮ್ಯಾನ್ ಆರ್ಮಿಯಂತೆ ಮಿಂಚಿದ್ದರೂ, ಅವರಿಗೆ ಖಡಕ್ ಸವಾಲು ಹಾಕಿದ್ದ ಭದ್ರನ ಪಾತ್ರದಲ್ಲಿ ನಟಿಸಿದ್ದ ನಟ ನವೀನ್ ಚಂದ್ರ ಕೂಡ ತಮ್ಮದೇ ರೀತಿಯಲ್ಲಿ ಅಬ್ಬರಿಸಿದ್ದರು. "ಮಾರ್ಕ್' ಯಶಸ್ಸಿನ ಬೆನ್ನಲ್ಲೇ ಸದ್ಯ ಚೆನ್ನೈನಲ್ಲಿ ಶೂಟಿಂಗ್ನಲ್ಲಿ ಬಿಜಿಯಾಗಿರುವ ನವೀನ್, ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. ಬಾಲ್ಯ, ಸಿನಿಮಾ ಪ್ಯಾಷನ್, ಇದುವರೆಗಿನ ಪಯಣ, ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.
* ಸಿನಿಮಾ ಜರ್ನಿ ಶುರುವಾಗಿದ್ದು ಹೇಗೆ?
- ನಾನು ಹುಟ್ಟಿದ್ದು, ಬೆಳೆದಿದ್ದು ಬಳ್ಳಾರಿಯಲ್ಲಿ. ಸೇಂಟ್ ಜಾನ್ಸ್ ಶಾಲೆಯಲ್ಲಿ ಓದಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿದೆ. ಬಾಲ್ಯದಿಂದಲೂ ಡಾನ್ಸ್ ಹುಚ್ಚು. ಡಿಪ್ಲೊಮಾ ಓದುವಾಗಲೇ ನಾನು, ಅಣ್ಣ ಸೇರಿ ಡಾನ್ಸ್ ಸ್ಕೂಲ್ ಪ್ರಾರಂಭಿಸಿದೆವು. ಅದೇ ಸಮಯದಲ್ಲಿ ಅಪ್ಪ ತೀರಿಕೊಂಡರು. ಬಳಿಕ ಡಾನ್ಸ್ಅನ್ನೇ ವೃತ್ತಿಯಾಗಿಸಿಕೊಂಡೆ. ಆಗ ಹುಬ್ಬಳ್ಳಿ, ಬೆಂಗಳೂರು ಸೇರಿ ಹಲವೆಡೆ ಕಾರ್ಯಕ್ರಮ ನೀಡಿದೆ. ಒಳ್ಳೆ ಹೆಸರು ಬಂತು. ಮೊದಲಿನಿಂದಲೂ ನಟಿಸುವ ಆಸೆ ಇತ್ತು. 3 ಸಾವಿರ ರೂಪಾಯಿ ದುಡ್ಡಿನೊಂದಿಗೆ ಬೆಂಗಳೂರಿಗೆ ಬಂದೆ. ತುಂಬ ಓಡಾಡಿದೆ. ದುಡ್ಡು ಖಾಲಿಯಾಯಿತು, ಆದರೆ ಅವಕಾಶ ಸಿಗಲಿಲ್ಲ. ನಂತರ ಹೈದರಾಬಾದ್ಗೆ ಹೋದೆ. ಅಲ್ಲಿ ಸಿನಿಮಾ ಸಿಕ್ಕಿದರೂ ಅದು ವರ್ಕ್ ಆಗಲಿಲ್ಲ. ನಂತರ ಚೆನ್ನೈಗೆ ಹೋದೆ. ಅಲ್ಲಿ ಪ್ರಾರಂಭವಾದ ಚಿತ್ರವೊಂದು ಮುಗಿಯಲೇ ಇಲ್ಲ. ಆದರೆ, ನಾನು ಪ್ರಯತ್ನ ಬಿಡಲಿಲ್ಲ. ಇದೀಗ "ಮಾರ್ಕ್' ಮೂಲಕ ನನ್ನೂರಿಗೆ ಬಂದಿರುವುದು ತುಂಬ ಖುಷಿ ನೀಡಿದೆ.
* ಸುದೀಪ್ ಜತೆ ಕೆಲಸ ಮಾಡಿದ ಅನುಭವ?
- ಸುದೀಪ್ ಅಮೇಜಿಂಗ್ ಆ್ಯಕ್ಟರ್, ಆಜಾನುಬಾಹು. ಡೇಟ್ಸ್ ಇಲ್ಲದಿದ್ದರೂ ಸುದೀಪ್ ಸರ್ ಸಿನಿಮಾ ಅಂತ ಡೇಟ್ಸ್ ಮಾಡಿಕೊಂಡು "ಮಾರ್ಕ್'ನಲ್ಲಿ ನಟಿಸಿದೆ. ಕಲಾವಿದರು, ತಂತ್ರಜ್ಞರು ಎಲ್ಲರನ್ನೂ ಗೌರವದಿಂದ ನೋಡಿಕೊಳ್ಳುತ್ತಾರೆ. ನನ್ನ ಭಾಗದ ಕೆಲ ದೃಶ್ಯಗಳನ್ನು ನೋಡಿ ಚೆನ್ನಾಗಿ ಮಾಡಿದ್ದೀಯಾ ಅಂತ ಬೆನ್ನು ತಟ್ಟುತ್ತಿದ್ದರು.
* "ಭದ್ರ' ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ...
- ಡಾ. ರಾಜಕುಮಾರ್, ಪುನೀತ್, ವಿಷ್ಣುವರ್ಧನ್, ಅನಂತ್ ನಾಗ್, ಶಂಕರ್ ನಾಗ್, ಅಂಬರೀಷ್... ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು ನಾನು. ಶಾಲೆಯಲ್ಲೂ ಕನ್ನಡ ಮೊದಲ ಭಾಷೆಯಾಗಿತ್ತು. "ಜಿಗರ್ಥಂಡ ಡಬಲ್ ಎಕ್ಸ್'ನಲ್ಲಿ ನನ್ನ ರತ್ನ ಪಾತ್ರ ನೋಡಿದ್ದ ನಿರ್ದೇಶಕ ವಿಜಯ್ ಕಾರ್ತಿಕೇಯ ಇಷ್ಟಪಟ್ಟಿದ್ದರು. ಒಂದೇ ಸಾಲಿನಲ್ಲಿ ಪಾತ್ರದ ಬಗ್ಗೆ ಹೇಳಿದರು. ಮೃದು ಸ್ವಭಾವದವನಾದ "ಮಾರ್ಕ್'ನಲ್ಲಿ ಭದ್ರ ಎಂಬ ಕ್ರೂರಿ ಪಾತ್ರದಲ್ಲಿ ನಟಿಸಿದ್ದೇನೆ. ಹೋದಲ್ಲೆಲ್ಲ ಜನ ಬೆಂಕಿ ಭದ್ರ ಎಂದೇ ಕರೆಯುತ್ತಿದ್ದಾರೆ. ಪಾತ್ರದ ಮೂಲಕ ಒಬ್ಬ ಕಲಾವಿದನನ್ನು ಜನ ಗುರುತಿಸಿದರೆ, ಅದಕ್ಕಿಂತ ಹೆಚ್ಚು ಸಂತೋಷ ಬೇರೊಂದಿಲ್ಲ.
* ಮುಂದೆ ಕನ್ನಡದಲ್ಲಿ ಹೆಚ್ಚು ನೋಡಬಹುದೇ?
- ನನಗೆ ಕನ್ನಡದಲ್ಲಿ ಹೆಚ್ಚು ನಟಿಸಬೇಕು ಎಂಬ ಆಸೆಯಿದೆ. ಹೀರೋ ಆಗಲಿ, ವಿಲನ್ ಆಗಲಿ ಒಳ್ಳೆ ಕಥೆ, ಪಾತ್ರ ಸಿಕ್ಕರೆ ಖಂಡಿತ ನಟಿಸುತ್ತೇನೆ. ನನ್ನ ಮೊದಲ ಚಿತ್ರದ ನಟನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ಮುಂದೆ ಹೆಚ್ಚು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು.
* ಈಗ ಯಾವೆಲ್ಲ ಪ್ರಾಜೆಕ್ಟ್ ಮಾಡುತ್ತಿದ್ದೀರಿ?
- ಸದ್ಯ "ಇನ್ಸ್ಪೆಕ್ಟರ್ ರಿಷಿ ಸೀಸನ್ 2' ವೆಬ್ಸರಣಿ ಜತೆಗೆ ತೆಲುಗಿನಲ್ಲಿ ಎರಡು ಒಟಿಟಿಗಳ ಜತೆ ಎರಡು ಪ್ರಾಜೆಕ್ಟ್ಗಳನ್ನು ಮಾಡುತ್ತಿದ್ದೇನೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ, ವಿಶೇಷ ಕಥೆಗಳು. ಇದೇ ೆ. 6ರಂದು "ಹನಿ' ಎಂಬ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ರಿಲೀಸ್ ಆಗಲಿದೆ.