ಬಯಕೆಗಳು ಬೇರೂರಿದಾಗ ಪೋಸ್ಟರ್​ 
ಸ್ಯಾಂಡಲ್‌ವುಡ್

bayakegalu beruridaaga movie: ಬಯಕೆಗಿಂತ ಸಂಬಂಧವೇ ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ವೈವಾಹಿಕ ಬಂಧನ ಮಹತ್ವ ಸಾರುವ ಸಿನಿಮಾ
  • ಅಕರ್ಷ್​ ಆದಿತ್ಯ ರಚಿಸಿರುವ ಕಾದಂಬರಿಯೇ ಚಿತ್ರವಾಗಿದೆ
  • ಕೆಲವೇ ಪಾತ್ರಗಳಲ್ಲಿ ನೇರವಾಗಿ ಕಥೆ ನಿರೂಪಣೆ
ಬೆಂಗಳೂರು: ಮದುವೆ ಬಹುದೊಡ್ಡ ಅನುಬಂಧ. ಇನ್ನು ಪ್ರೀತಿಸಿ ಮದುವೆಯಾದವರ ನಡುವೆ ಸಾಕಷ್ಟು ನಿರೀಕ್ಷೆ, ಆಸೆಗಳಿರುತ್ತವೆ. ಅದರಲ್ಲಿ ಸ್ವಲ್ಪ ಕೊರತೆ ಉಂಟಾದರೆ ಮುಂದೆ ಜೀವನದಲ್ಲಿ ಬಿರುಗಾಳಿ ಬೀಸುವುದು ಸಾಮಾನ್ಯ. ಅದಕ್ಕೂ ಮುನ್ನವೇ ಸಮಾಧಾನದಿಂದ ಗೊಂದಲಗಳನ್ನು ನಿವಾರಿಸಿಕೊಂಡು, ಜೀವನ ಅರಿತು ಸಾಗಬೇಕು ಎಂದು ಸಾರುವ ಚಿತ್ರ ‘ಬಯಕೆಗಳು ಬೇರೂರಿದಾಗ’. ಲೇಖಕ ಆಕರ್ಷ್ ಆದಿತ್ಯಅವರ ಕಾದಂಬರಿಯಾಧಾರಿತ ಚಿತ್ರವಿದು. ಸಂಬಂಧಗಳ ನಡುವಿನ ಬಂಧನ, ಪ್ರೀತಿ, ನಂಬಿಕೆ ಸೇರಿ ಹಲವು ವಿಚಾರಗಳ ಸುತ್ತ ನಿರ್ದೇಶಕಿ ಜ್ಯೋತಿಲಕ್ಷ್ಮೀ ಕಥೆ ನಿರೂಪಿಸಿದ್ದಾರೆ.
ಸಾಹಿತ್ಯಾಸಕ್ತಿ ಇರುವ ರಾಧಾ (ಶರಣ್ಯ) ಲೈಬ್ರೇರಿಯನ್. ಆಕೆಯ ಊರಿಗೆ ಸರ್ವೇಯರ್ ಆಗಿ ಬರುವ ಸತ್ಯನ (ಅಕರ್ಷ್) ಮೇಲೆ ಪ್ರೀತಿ ಚಿಗುರೊಡೆಯುತ್ತದೆ. ಮನೆಯಲ್ಲಿ ಒಪ್ಪಿಸಿ ಇಬ್ಬರೂ ಮದುವೆಯಾಗುತ್ತಾರೆ. ಯಾವುದೇ ಕೊರತೆ ಬಾರದಂತೆ ರಾಧಾಳನ್ನು ನೋಡಿಕೊಳ್ಳುತ್ತೇನೆ ಎಂದು ಮಾತು ಕೊಡುವ ಸತ್ಯ, ಮುಂದೆ ಮಾತು ತಪ್ಪುತ್ತಾನೆ. ಮದುವೆ ವಾರ್ಷಿಕೋತ್ಸವದ ದಿನ ಕೂಡ ಕೆಲಸದಲ್ಲಿ ಬಿಜಿಯಾಗಿ, ರಾಧಾ ಸಿಟ್ಟಿಗೆ ಕಾರಣವಾಗುತ್ತಾನೆ. ಮುಂದೆ ಆಕೆ ಸತ್ಯನಿಗೆ ಗೊತ್ತಿರದಂತೆ ಬೇರೊಬ್ಬನ ಜತೆ ಸಂಬಂಧ ಹೊಂದುತ್ತಾಳೆ. ಹಾಗಾದರೆ ಈ ನೈತಿಕ ಮತ್ತು ಅನೈತಿಕ ಸಂಬಂಧಗಳಲ್ಲಿ ಯಾವ ಸಂಬಂಧ ಗೆಲ್ಲುತ್ತದೆ? ಯಾರ ಜೀವನ ಹೇಗೆ ತಿರುವು ಪಡೆಯುತ್ತದೆ? ತಿಳಿಯಲು ‘ಬಯಕೆಗಳು ಬೇರೂರಿದಾಗ’ ನೋಡಿ. ಶರಣ್ಯಾ ನಟನೆ ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಕೆಲವು ದೃಶ್ಯಗಳಲ್ಲಿ ಅವರ ‘ನಾತಿಚರಾಮಿ’ ಪಾತ್ರವನ್ನು ನೆನಪಿಸುತ್ತದೆ. ಆಕರ್ಷ್, ಅಜಯ್ ಚೆನ್ನಾಗಿ ಅಭಿನಯಿಸಿದ್ದಾರೆ. ಕೆಲವೇ ಪಾತ್ರಗಳಿರುವ ಕಾರಣ ಕಥೆಯನ್ನು ಎಳೆಯದೆ ನೇರವಾಗಿ ನಿರೂಪಿಸಲಾಗಿದೆ. ದೃಶ್ಯಗಳ ಮೌನದ ಹಿಂದಿನ ವೈಜೆಕೆ ಹಿನ್ನೆಲೆ ಸಂಗೀತ ಇಷ್ಟವಾಗುತ್ತದೆ. ಸಂಬಂಧಗಳ ಮೌಲ್ಯವನ್ನು ತಿಳಿಸುವ ಈ ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ.