Gharga - "ದಿಲ್ಬರ್', "ಮುಕಾಬ್ಲಾ', "ಆಂಖ್ ಮಾರೇ', "ಚಿಕ್ನೀ ಚಮೇಲಿ', "ಏಕ್ ದೋ ತೀನ್'... ಹೀಗೆ ಹಳೆಯ ಹಿಟ್ ಸಿನಿಮಾಗಳ ಸೂಪರ್ಹಿಟ್ ಹಾಡುಗಳನ್ನು ಹೊಸ ಚಿತ್ರಗಳಲ್ಲಿ ಮತ್ತೆ ಬಳಸಿಕೊಂಡಿರುವ, ರಿಮಿಕ್ಸ್ ಮಾಡಿರುವ ಹಲವು ಉದಾಹರಣೆಗಳು ಬಾಲಿವುಡ್ನಲ್ಲಿ ದೊರೆಯುತ್ತವೆ. ಆದರೆ, ಕನ್ನಡದಲ್ಲಿ ಈ ರೂಢಿ ಇರಲಿಲ್ಲ. ಇದೀಗ "ಘಾರ್ಗಾ' ಚಿತ್ರದಲ್ಲಿ ಮೊದಲ ಬಾರಿಗೆ ಹೀಗೊಂದು ಪ್ರಯತ್ನ ನಡೆದಿದೆ.
ದರ್ಶನ್ ಅಭಿನಯದ "ಗಜ' ಚಿತ್ರದ "ಬಂಗಾರಿ ಯಾರೇ ನೀ ಬುಲ್ಬುಲ್' ಹಾಡನ್ನು ರಿಮಿಕ್ಸ್ ಮಾಡಿ ಬಳಸಿಕೊಳ್ಳಲಾಗಿದೆ. ಇತ್ತೀಚೆಗಷ್ಟೆ 50ಕ್ಕೂ ಹೆಚ್ಚು ದರ್ಶನ್ ಅಭಿಮಾನಿಗಳು ಈ ಹಾಡನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. "ಘಾರ್ಗಾ' ಒಂದು ಊರಿನ ಹೆಸರಾಗಿದ್ದು, ಚಿತ್ರಕ್ಕೆ "ದ ಲ್ಯಾಂಡ್ ಆಫ್ ಶಾಡೋ' ಎಂಬ ಅಡಿಬರಹವಿದೆ. ಅಶ್ವಿನಿ ರಾಮಪ್ರಸಾದ್ ಪುತ್ರ ಅರುಣ್ ರಾಮಪ್ರಸಾದ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಅಡ್ವೆಂಚರಸ್, ಹಾರರ್, ಕೆಮ್ ಥ್ರಿಲ್ಲರ್, ಡ್ರಾಮಾ ಅಂಶಗಳಿದ್ದು, ಅರುಣ್ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ರೆಹಾನಾ ನಾಯಕಿಯಾಗಿದ್ದು, ಸಾಯಿಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಖುದ್ದು ನಾಯಕಿ ರೆಹಾನಾ ಈ ಹೊಸ "ಬುಲ್ಬುಲ್' ಹಾಡಿನಲ್ಲಿ ಕುಣಿದು ಕುಪ್ಪಳಿಸಿದ್ದು, ಸದ್ಯ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರವನ್ನು ಎಂ. ಶಶಿಧರ್ ನಿರ್ದೇಶಿಸಿದ್ದಾರೆ. ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂದಹಾಗೆ "ಘಾರ್ಗಾ' ಇದೇ ಶುಕ್ರವಾರ (ೆ. 6) ತೆರೆಗೆ ಬರಲಿದೆ.