ಬೆಂಗಳೂರು ಇನ್ ಚಿತ್ರದ ಪೋಸ್ಟರ್​ 
ಸ್ಯಾಂಡಲ್‌ವುಡ್

bangalore inn movie review: ಬೆಂಗಳೂರು ಮಾಯಾ ಲೋಕದ ಮತ್ತೊಂದು ಮುಖ

ಪ್ರಮುಖ ಮುಖ್ಯಾಂಶಗಳು

  • ಮಹಿಳೆ ಅಪಹರಣ ಸುತ್ತ ಸಾಗುವ ಕಥೆ
  • ಸಿದ್ಧ ನಿರೂಪಣೆ, ಕೃತಕ ಅನಿಸುವ ದೃಶ್ಯಗಳು
  • ಚಿತ್ರಕಥೆ ಬರವಣಿಗೆಯಲ್ಲಿ ಇನ್ನೊಂದಿಷ್ಟು ತಯಾರಿ ಬೇಕಿತ್ತು
ಚಿತ್ರ: ಬೆಂಗಳೂರು ಇನ್
ನಿರ್ದೇಶನ: ಕಾರ್ತಿಕ್ ಮೂರ್ತಿ
ತಾರಾಗಣ: ಧರ್ಮ ಕೀರ್ತಿರಾಜ್, ಅನುಷಾ ರೈ, ರಿಷಾ ಗೌಡ, ಶಶಿ ಕುಮಾರ್, ಬಲ ರಾಜವಾಡಿ, ಮಂಜು ಪಾವಗಡ ಮತ್ತಿತರರು.
ಶಿವ ಸ್ಥಾವರಮಠ
ಹಳ್ಳಿ ಹುಡುಗ ರಾಮುಗೆ (ಧರ್ಮ) ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನಟನಾಗುವ ಆಸೆ. ಊರಿನಲ್ಲಿಯೇ ಬೀದಿ ನಾಟಕಗಳನ್ನು ಮಾಡಿಕೊಂಡಿದ್ದ ರಾಮುಗೆ ಗೆಳತಿ ಭವ್ಯಾ (ಅನುಷಾ) ಬೆಂಗಳೂರಿಗೆ ಬಂದು ಆಡಿಷನ್ ನೀಡಲು ಹೇಳುತ್ತಾಳೆ. ಅವಳ ಮಾತಿನಂತೆ ಬೆಂಗಳೂರಿಗೆ ಬರುವ ರಾಮುಗೆ ಮೊದಲು ಸಿನಿಮಾದಲ್ಲಿ ಕೆಲಸ ಸಿಗುತ್ತಾದರೂ, ಅಲ್ಲಿಯೇ ಗಟ್ಟಿ ನೆಲೆಯೂರಲು ಆಗುವುದಿಲ್ಲ. ಬಳಿಕ ಡೆಲಿವರಿ ಬಾಯ್ ಆಗಿ ಕೆಲಸ ಮಾಡತೊಡಗುತ್ತಾನೆ. ಆ ಸಮಯದಲ್ಲಿ ಆತನಿಗೆ ಮಹಾನಗರಿ ಬೆಂಗಳೂರಿನ ಮತ್ತೊಂದು ಮುಖದ ದರ್ಶನವಾಗುವುದು. ಮಹಿಳೆಯರನ್ನು ಅಪಹರಿಸಿ ರಹಸ್ಯವಾಗಿ ವಿಡಿಯೋ ಮಾಡಿ ಹಣ ವಸೂಲಿ ಮಾಡುವ ಕರಾಳ ದಂಧೆಯ ಪರಿಚಯವಾಗುತ್ತದೆ. ಈ ದಂಧೆಯಿಂದ ಹಲವು ಹೆಣ್ಣು ಮಕ್ಕಳು ಜೀವ ಕಳೆದುಕೊಂಡಿರುತ್ತಾರೆ. ಈ ಪ್ರಕರಣದ ತನಿಖೆಗೆ ಇಳಿಯುವ ಪೊಲೀಸ್ ಅಧಿಕಾರಿ (ಶಶಿಕುಮಾರ್) ಮೊದಲು ರಾಮುನನ್ನೇ ಆರೋಪಿ ಎಂದು ಬಂಧಿಸುತ್ತಾರಎ. ಅದರ, ತನಿಖೆ ಮುಂದುವರಿದಂತೆ ಅದರ ಕಥೆಯೇ ಬೇರೆ ಇರುತ್ತದೆ. ಅದು ಏನೆಂದು ತಿಳಿಯಲು ‘ಬೆಂಗಳೂರು ಇನ್’ ನೋಡಬೇಕು.
ಅಪಹರಣ, ವ್ಯವಸ್ಥಿತ ಮಾಫಿಯಾ ಸೇರಿ ಇತರೆ ಕ್ರೈಮ್‌ಗಳ ಕುರಿತು ಹಲವು ಸಿನಿಮಾಗಳು ಬಂದಿವೆ. ಆ ಸಾಲಿಗೆ ‘ಬೆಂಗಳೂರು ಇನ್’ ಒಂದು ಸೇರ್ಪಡೆಯಷ್ಟೇ. ಕಾರ್ತಿಕ್ ಮೂರ್ತಿ ಸಿದ್ಧ ಮಾದರಿಯಲ್ಲಿ ಈ ಕಮರ್ಷಿಯಲ್ ಕಥೆ ನಿರೂಪಿಸಿದ್ದಾರೆ. ಇನ್ನೊಂದಿಷ್ಟು ಅಧ್ಯಯನ, ತಯಾರಿ ಬೇಕಿತ್ತು. ಮೊದಲರ್ಧ ರಾಮು ಕಥೆ ಹೇಳಿದರೆ, ದ್ವಿತೀಯಾರ್ಧದಲ್ಲಿ ಸೂರ್ಯನ ಕಥೆ ಹೇಳಿದ್ದಾರೆ. ಇಬ್ಬರ ಕಥೆಯನ್ನು ಜೋಡಿಸಲು ಇನ್ನೊಂದಿಷ್ಟು ಕೆಲಸ ಮಾಡಬೇಕಿತ್ತು. ಧರ್ಮ ಕೀರ್ತಿರಾಜ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು, ಗಮನ ಸೆಳೆಯುತ್ತಾರೆ. ಪತ್ರಕರ್ತೆಯಾಗಿ ಅನುಷಾ ರೈ ಮಿಂಚಿದ್ದು, ರಿಷಾ ಗೌಡ ಪಾತ್ರಕ್ಕೆ ಮಾತಿಗಿಂತ ಗ್ಲಾಮರ್ ಲುಕ್ ನೀಡಲಾಗಿದೆ. ಮಂಜು ಪಾವಗಡ, ಬಲ ರಾಜವಾಡಿ, ಶಶಿಕುಮಾರ್ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ರೇಟಿಂಗ್: 3