ಬೇಲ್ ಚಿತ್ರದಲ್ಲಿ ಶಿವರಾಜಕುಮಾರ್ 
ಸ್ಯಾಂಡಲ್‌ವುಡ್

Bail Review - ಬೇಲ್​ ಪಡೆಯುವ "ಕ್ರಿಮಿ'ನಲ್​ಗಳ ಶಿಕಾರಿಯ ಸುತ್ತ

"ಹುಷಾರಾದ್ಮೇಲೆ ಮೊದಲಿಗಿಂತ ಸ್ಪೀಡ್​ ಆಗಿಬಿಟ್ಟಿದ್ದೀಯಾ!' ಎಂದು ನಿವೃತ್ತ ಐಪಿಎಸ್​ ಅಧಿಕಾರಿ ವಿಜಯ್​ ಕುಮಾರ್​ರನ್ನು (ಶಿವರಾಜಕುಮಾರ್​) ಕೇಳುತ್ತಾರೆ, ಗೆಳೆಯ ರಾರ್ಬಟ್​ (ಜಯರಾಮ್​). ಅದು ನಿಜವೂ ಹೌದು. ಶಿವಣ್ಣ ಅಮೆರಿಕದಲ್ಲಿ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದು ವಾಪಸ್ಸಾದ ಬಳಿಕ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ನಟಿಸಿರುವ ಚಿತ್ರ "ಬೇಲ್​'. ಹೀಗಾಗಿ ಅವರ ನೈಜ ಜೀವನಕ್ಕೆ ಹೊಂದುವ ಕೆಲ ಸಂಭಾಷಣೆಗಳನ್ನು ಈ ಸಿನಿಮಾದಲ್ಲಿ ನೋಡಬಹುದು.

ವಿಜಯವಾಣಿ ಸುದ್ದಿ ಜಾಲ

ಚಿತ್ರ: ಬೇಲ್​

ನಿರ್ದೇಶನ: ಪವನ್​ ಒಡೆಯರ್​

ನಿರ್ಮಾಣ: ಕೆವಿಎನ್​ ಪ್ರೊಡಕ್ಷನ್ಸ್​

ತಾರಾಗಣ: ಶಿವರಾಜಕುಮಾರ್​, ಸಾಯಿಕುಮಾರ್​, ಜಯರಾಮ್​, ಸಂಜನಾ ಆನಂದ್​, ದೀತ್​ ಶೆಟ್ಟಿ, ರಮೇಶ್​ ಇಂದಿರಾ, ಸಂಗೀತಾ ಮತ್ತಿತರರು

| ಹರ್ಷವರ್ಧನ್​ ಬ್ಯಾಡನೂರು

"ಹುಷಾರಾದ್ಮೇಲೆ ಮೊದಲಿಗಿಂತ ಸ್ಪೀಡ್​ ಆಗಿಬಿಟ್ಟಿದ್ದೀಯಾ!' ಎಂದು ನಿವೃತ್ತ ಐಪಿಎಸ್​ ಅಧಿಕಾರಿ ವಿಜಯ್​ ಕುಮಾರ್​ರನ್ನು (ಶಿವರಾಜಕುಮಾರ್​) ಕೇಳುತ್ತಾರೆ, ಗೆಳೆಯ ರಾರ್ಬಟ್​ (ಜಯರಾಮ್​). ಅದು ನಿಜವೂ ಹೌದು. ಶಿವಣ್ಣ ಅಮೆರಿಕದಲ್ಲಿ ಕ್ಯಾನ್ಸರ್​ಗೆ ಚಿಕಿತ್ಸೆ ಪಡೆದು ವಾಪಸ್ಸಾದ ಬಳಿಕ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ನಟಿಸಿರುವ ಚಿತ್ರ "ಬೇಲ್​'. ಹೀಗಾಗಿ ಅವರ ನೈಜ ಜೀವನಕ್ಕೆ ಹೊಂದುವ ಕೆಲ ಸಂಭಾಷಣೆಗಳನ್ನು ಈ ಸಿನಿಮಾದಲ್ಲಿ ನೋಡಬಹುದು. ಇಲ್ಲಿ ಶಿವಣ್ಣ ಹೆಚ್ಚು ಡಾನ್ಸ್​ ಅಥವಾ ಫೈಟ್ಸ್​ ಮಾಡದಿರಬಹುದು. ಆದರೆ, ಅವರ ಸ್ಟೈಲ್​​, ಸ್ವ್ಯಾಗ್​, ಡೈಲಾಗ್​ ಡೆಲಿವರಿಯನ್ನು ಹರಿತವಾಗಿಸುವ ಮೂಲಕ ಪವನ್​ ಸರಿದೂಗಿಸಿದ್ದಾರೆ. ಹಾಗಾದರೆ ಹೇಗಿದೆ "ಬೇಲ್​'?

ಶಿವರಾಜಕುಮಾರ್ ಜತೆ ಜಯರಾಮ್ ಮತ್ತು ಸಾಯಿಕುಮಾರ್

ಅದು ಬೆಂಗಳೂರಿನ ಪ್ರತಿಷ್ಠಿತ ಸ್ವರಾಜ್​ ಲಕ್ಷುರಿ ಇಂಟರ್​ನ್ಯಾಷನಲ್​ ಹೋಟೆಲ್​. ಅದರ ಮೇಲೆ ಉಗ್ರರು ದಾಳಿ ನಡೆಸುತ್ತಾರೆ. ಅವರಿಗೆ ಬಲಿಯಾಗುವ ನೂರಾರು ಜನರಲ್ಲಿ ಹೋಟೆಲ್​ ಮ್ಯಾನೇಜರ್​ ಕೃತಿ ಕೂಡ ಒಬ್ಬಳು. ಅದಾಗಿ ಒಂದು ವರ್ಷಕ್ಕೆ ಪೊಲೀಸ್​ ಕಮಿಷನರ್​ ಹುದ್ದೆಯಿಂದ ಐಪಿಎಸ್​ ಅಧಿಕಾರಿ ವಿಜಯ್​ ಕುಮಾರ್​ ನಿವೃತ್ತಿ ಹೊಂದುತ್ತಾರೆ. "ಮೈಮೇಲೆ ಒಂದೂ ಗಾಯವಿಲ್ಲದೇ, ಒಂದು ಕೇಸ್​ ಕೂಡ ಸಾಲ್ವ್​ ಮಾಡದೇ ರಿಟೈರ್ಡ್​ ಆದ ಅದೃಷ್ಟವಂತ ಅಧಿಕಾರಿ'. ಕಾರಣ ವಿಜಯ್​, ಮಿನಿಸ್ಟರ್​ ಮಗಳು ಹಾಸಿನಿಯನ್ನು (ಸಂಗೀತಾ) ಮದುವೆಯಾಗಿರುತ್ತಾರೆ. ವಿಜಯ್​ ರಿಟೈರ್ಡ್​ ಆದ ಕೆಲ ದಿನಗಳಲ್ಲೇ ಸ್ವರಾಜ್​ ಹೋಟೆಲ್​ ದಾಳಿಯ ರೂವಾರಿ ಸಾಜಿದ್​ ಖುರೇಷಿಗೆ ಬೇಲ್​ ದೊರೆಯುತ್ತದೆ. ಮಗಳು ಕೃತಿಯೂ ಸೇರಿ ನೂರಾರು ಜನರನ್ನು ಕೊಂದು ಇಷ್ಟು ಸಲೀಸಾಗಿ ಜೈಲಿನಿಂದ ಹೊರಬಂದುಬಿಟ್ಟನಲ್ಲಾ... ವಿಜಯ್​ ಒಳಗೆ ಹೋರಾಟದ ಕಿಚ್ಚು ಹೊತ್ತಿಕೊಳ್ಳುತ್ತದೆ. ಗೆಳೆಯರಾದ ರಿಟೈರ್ಡ್​ ವಿಜ್ಞಾನಿ ರಾರ್ಬಟ್​, ನಿವೃತ್ತ ಜಡ್ಜ್​ ಅಲಿ (ಸಾಯಿಕುಮಾರ್​), ಹಾಗೂ "ಕಣ್ಣಿಗೆ ಕಾಣಿಸದ ನಾಲ್ಕನೇ ಸಿಂಹದ' ಜತೆ ಸೇರಿ ಬೇಲ್​ ಪಡೆದು ಹೊರಬರುವ ಕಿರಾತಕರ ಶಿಕಾರಿಗಿಳಿಯುತ್ತಾರೆ. ಮುಂದೆ ಇವರು ಬೇಟೆಯಾಡುತ್ತಾರಾ? ಅಥವಾ ಬೇಟೆಯಾಗುತ್ತಾರಾ? ಎಂಬುದೇ "ಬೇಲ್​'.

ಬೇಲ್ ಚಿತ್ರದಲ್ಲಿ ಶಿವರಾಜಕುಮಾರ್

ನಿರ್ದೇಶಕ ಪವನ್​ ಒಡೆಯರ್​ ಈ ಕಥೆಯನ್ನು ಆರು ಚಾಪ್ಟರ್​ಗಳಲ್ಲಿ ಹೇಳಿದ್ದಾರೆ. ಗಂಭೀರವಾಗಿ ಸಾಗುತ್ತಿರುವ ಕಥೆಯಲ್ಲಿ ಜಯರಾಮ್​ ತುಂಟುತನ, ಸಾಯಿಕುಮಾರ್​ ಅಸಹಾಯಕತೆ ಪ್ರೇಕ್ಷಕರನ್ನು ನಗಿಸುತ್ತಿರುತ್ತದೆ. ಚಿತ್ರದಾದ್ಯಂತ ಟ್ವಿಸ್ಟ್​, ರ್ಟನ್​ಗಳಿವೆ. ಜತೆಗೆ ಓಪನ್​ ಎಂಡಿಂಗ್​ ಕೊಟ್ಟಿರುವ ಕಾರಣ ಎರಡನೇ ಭಾಗವನ್ನೂ ನಿರೀಸಬಹುದು. ಶಿವಣ್ಣ ಒನ್​ಲೈನರ್​ಗಳು ಚಿತ್ರದ ಹೈಲೈಟ್​. ಶಿವಣ್ಣ, ಜಯರಾಮ್​, ಸಾಯಿಕುಮಾರ್​ ಜತೆ ಲೂಸ್​ ಮಾದ ಯೋಗಿ, ರಮೇಶ್​ ಇಂದಿರಾ, ದೀತ್​ ಶೆಟ್ಟಿ ನಟನೆ ಗಮನ ಸೆಳೆಯುತ್ತದೆ. ಕೆಲವೆಡೆ ವಿಎಫ್​​ಎಕ್ಸ್​ ಪರಿಣಾಮಕಾರಿಯಾಗಿ ಇಲ್ಲವಾದರೂ ವೈದಿ ಛಾಯಾಗ್ರಹಣ ಅಚ್ಚುಕಟ್ಟಾಗಿ ಮೂಡಿಬಂದಿದೆ. ಅಜನೀಷ್​ ಲೋಕನಾಥ್​ ಮಾಸ್​ ಹಿನ್ನೆಲೆ ಸಂಗೀತ ಪ್ಲಸ್​ ಆಗಿದೆ. ಒಟ್ಟಾರೆ ಶಿವಣ್ಣ ಅಭಿಮಾನಿಗಳಿಗೆ ಮಸಾಲಾ "ಬೇಲ್​' ಪುರಿಯಷ್ಟೇ ರುಚಿಕರ ಚಿತ್ರವಿದು!