ಸಿಬಿಎಫ್​ಸಿ ಎಡಿಸಿಸಿ ಕುರಿತ ಕಾರ್ಯಾಗಾರ 
ಸ್ಯಾಂಡಲ್‌ವುಡ್

CBFC ADCC - ಚಲನಚಿತ್ರಗಳಲ್ಲಿ ಧ್ವನಿ ವಿವರಣೆ, ಶೀರ್ಷಿಕೆಗಳು ಕಡ್ಡಾಯ

ಮಾ. 15ರಿಂದ ಎಡಿಸಿಸಿ ಕಡ್ಡಾಯಗೊಳಿಸಿರುವ ಬಗ್ಗೆ ಸಿಬಿಎ​ಫ್​ಸಿ ಮಾಹಿತಿ
ಕನ್ನಡ ಚಿತ್ರ ನಿರ್ಮಾಪಕರು, ನಿರ್ದೇಶಕರು, ಪ್ರದರ್ಶಕರಿಗಾಗಿ ಕಾರ್ಯಾಗಾರ
ಸಿನಿಮಾಗಳಲ್ಲಿ "ಆಡಿಯೋ ಡಿಸ್ಕ್ರಿಪ್ಷನ್​ (ಧ್ವನಿ ವಿವರಣೆ) ಮತ್ತು ಕ್ಲೋಸ್ಡ್​ ಕ್ಯಾಪ್ಷನಿಂಗ್​ (ಶೀರ್ಷಿಕೆಗಳು)' ಅರ್ಥಾತ್​ ಎಡಿಸಿಸಿಯನ್ನು ಕಳೆದ ಮಾರ್ಚ್​ 15ರಿಂದ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಅದನ್ನು ಹಂತ-ಹಂತವಾಗಿ ಜಾರಿಗೊಳಿಸುವ ಕುರಿತು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎ​ಫ್​ಸಿ) ಗುರುವಾರ ಕಾರ್ಯಾಗಾರ ಆಯೋಜಿಸಿತ್ತು.
ಎಡಿಸಿಸಿ ಕ್ರಮವು ವಿಕಲಚೇತನರ ಹಕ್ಕುಗಳ ಕಾಯ್ದೆ 2016ಕ್ಕೆ ಅನುಗುಣವಾಗಿದ್ದು, ದೃಷ್ಟಿ ಮತ್ತು ಶ್ರವಣದೋಷವುಳ್ಳವರಿಗೂ ಸಿನಿಮಾ ವೀಕ್ಷಣೆಯು ಒಂದು ಅಂತರ್ಗತ ಮತ್ತು ಸಮಾನ ಅನುಭವ ನೀಡುತ್ತದೆ. ಹೀಗಾಗಿ ಇದೇ ಮಾ. 15ರಿಂದ ಜಾರಿಗೆ ಬರುವಂತೆ ಥಿಯೇಟರ್​ಗಳಲ್ಲಿ ಬಿಡುಗಡೆಯಾಗುವ ಎಲ್ಲ ಸಿನಿಮಾಗಳಿಗೂ ಇದು ಕಡ್ಡಾಯವಾಗಿದೆ. ಸದ್ಯಕ್ಕೆ ಈ ನಿಯಮಗಳು ಫೀಚರ್​ ಫಿಲಂಗಳಿಗೆ ಮಾತ್ರ ಅನ್ವಯಿಸುತ್ತದೆ. 10 ನಿಮಿಷಗಳಿಗಿಂತ ಕಡಿಮೆ ಅವಧಿಯ ಕಿರುಚಿತ್ರ, ಟ್ರೇಲರ್​, ಟೀಸರ್​ ಮತ್ತು ಡಾಕ್ಯುಮೆಂಟರಿಗಳಿಗೆ ಸದ್ಯಕ್ಕೆ ವಿನಾಯಿತಿ ನೀಡಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಅವುಗಳನ್ನೂ ಇದರಡಿ ತರುವ ಬಗ್ಗೆ ಪರಿಶೀಲಿಸಲಾಗುತ್ತಿದೆ' ಎಂದು ಪ್ರಾದೇಶಿಕ ಅಧಿಕಾರಿ ಯಶ್ವಂತ್​ ಶೆಹನಾಯಿ ಮಾಹಿತಿ ನೀಡಿದರು.

ಹೇಗೆ ಸಹಕಾರಿ?

ಈ ಹಿಂದೆ ಬಹುಭಾಷಾ ಚಿತ್ರಗಳಿಗೆ ಮಾತ್ರ ಎಡಿಸಿಸಿಯ ಕೆಲ ಅಂಶಗಳು ಕಡ್ಡಾಯವಾಗಿದ್ದವು. ಇದೀಗ ಆಯಾ ಭಾಷೆಗಳಲ್ಲಿ ಬರುವ ಚಿತ್ರಗಳಿಗೆ ಅರ್ಥಾತ್​ ಕನ್ನಡ ಚಿತ್ರಕ್ಕೆ ಕನ್ನಡದಲ್ಲಿಯೇ ಕ್ಯಾಪ್ಷನ್​, ಸಂಭಾಷಣೆ ಜತೆ ಹಿನ್ನೆಲೆ ಧ್ವನಿಗಳ ವಿವರಣೆಯಿದ್ದರೆ ಶ್ರವಣ ದೋಷ ಇರುವವರಿಗೆ ಸಹಾಯವಾಗುತ್ತದೆ. ಹಾಗೇ ದೃಷ್ಟಿ ದೋಷ ಇರುವವರಿಗಾಗಿ ಸಂಭಾಷಣೆ ನಡುವೆ ಪಾತ್ರಗಳ ಹಾವಭಾವಗಳು ಮತ್ತು ಸನ್ನಿವೇಶದ ಬದಲಾವಣೆಯ ಅಂಶಗಳನ್ನು ಧ್ವನಿಯ ಮೂಲಕ ವಿವರಣೆ ಇರಬೇಕು. ಇದರಿಂದ ಕಥೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸಂಜ್ಞೆ ಭಾಷೆಯ ಅನುಷ್ಠಾನದ ಚರ್ಚೆಗಳು ಸಹ ನಡೆಯುತ್ತಿದ್ದು, ಇತರ ಪ್ರೇಕ್ಷಕರಿಗೆ ತೊಂದರೆಯಾಗದಂತೆ ಈ ಸೌಲಭ್ಯವನ್ನು ಪ್ರತ್ಯೇಕ ಉಪಕರಣಗಳು ಅಥವಾ ಸಿಂಕ್ರೊನೈಸ್​ ಮಾಡಿದ ಪರದೆಗಳ ಮೂಲಕ ಒದಗಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಥಿಯೇಟರ್​, ಮಲ್ಟಿಪ್ಲೆಕ್ಸ್​ನಲ್ಲಿ ಪ್ರತಿ 200 ಸೀಟುಗಳಲ್ಲಿ ಐದು ಸೀಟುಗಳನ್ನು ದೃಷ್ಟಿ, ಶ್ರವಣದೋಷ ಇರುವವರಿಗೆ ಮೀಸಲಿಡಬೇಕು. ಆ ಸೀಟುಗಳಲ್ಲಿ ಅವರು ಸಿನಿಮಾ ವೀಸಲು ಬೇಕಾದ ಹೆಡ್​ೋನ್​, ಆ್ಯಪ್​, ಸ್ಪೆಷಲ್​ ಸ್ಕ್ರೀನ್​ ಸೇರಿ ಇತರೆ ವ್ಯವಸ್ಥೆಗಳನ್ನು ಮಾಡಬೇಕು.

ದಿವ್ಯಾಂಗ ಸಮುದಾಯ ಅಭಿನಂದನೆ

ಸಮರ್ಥನಂ ಟ್ರಸ್ಟ್​ನ ಮಹಾಂತೇಶ್​, ಎ.ಕೆ. ಉಮೇಶ್​, ಅವಿನಾಶ್​ ಕುಮಾರ್​ ಸೇರಿ ಶ್ರವಣ, ದೃಷ್ಟಿ ದೋಷವುಳ್ಳ ಹಲವರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ಕೇಂದ್ರ ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ "ದೇಶಾದ್ಯಂತ ತಲಾ 80ರಿಂದ 90 ಲಕ್ಷ ದೃಷ್ಟಿ ಮತ್ತು ಶ್ರವಣದೋಷವಿರುವ ಜನರಿದ್ದು, ಜತೆಗೆ ವಯಸ್ಸಾದಂತೆ ದೃಷ್ಟಿ ಮತ್ತು ಶ್ರವಣ ಸಮಸ್ಯೆ ಎದುರಿಸುವ ಹಿರಿಯ ನಾಗರೀಕರು ಸೇರಿ ಮೂರ್ನಾಲ್ಕು ಕೋಟಿ ಜನರಿದ್ದಾರೆ. ಅಡಿಸಿಸಿ ಕಾರ್ಯರೂಪಕ್ಕೆ ಬಂದ ಬಳಿಕ ಅವರು ಸಹ ಎಲ್ಲರಂತೆ ಸಿನಿಮಾ ಅನುಭವಿಸುವ ಅವಕಾಶ ದೊರೆಯಲಿದೆ' ಎಂದು ಮೆಚ್ಚುಗೆ ಸೂಚಿಸಿದರು.

ಕೆಲ ನಿರ್ಮಾಪಕರ ವಿರೋಧ

ಎಡಿಸಿಸಿ ಕಡ್ಡಾಯಗೊಳಿಸಿರುವ ಬಗ್ಗೆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕೆಲ ನಿರ್ಮಾಪಕರು ವಿರೋಧ ವ್ಯಕ್ತಪಡಿಸಿದರು. ಎಡಿಸಿಸಿಗಾಗಿ ಹೆಚ್ಚುವರಿ ಮೂರ್ನಾಲ್ಕು ಲಕ್ಷ ರೂಪಾಯಿ ಖರ್ಚಾಗುತ್ತದೆ. ಸಣ್ಣ ನಿರ್ಮಾಪಕರು ಈಗಲೇ ಸಂಕಷ್ಟದಲ್ಲಿದ್ದು, ಅದರ ನಡುವೆ ಈ ರೀತಿ ಕಡ್ಡಾಯ ಮಾಡುವುದು ಸರಿಯಲ್ಲ. 10ರಿಂದ 15 ಸಾವಿರ ರೂ.ಗೆ ಈ ಸೇವೆ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಲಿ, ಅಥವಾ ನಿರ್ಮಾಪಕರಿಗೆ ಅನುದಾನ ನೀಡಲಿ ಹಾಗೂ ಆದಾಯ ತೆರಿಗೆ ಮತ್ತು ಜಿಎಸ್​ಟಿ ಕಡಿತಗೊಳಿಸಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.