ಅಪರ್ಣ ಅವರನ್ನು ಸನ್ಮಾನಿಸಲಾಯಿತು.
- ಕನ್ನಡ ಹಳೆಯ ಸಿನಿಮಾಗಳ ಸಂರಕ್ಷಣೆ ಅಗತ್ಯ
- ನ್ಯಾಷನಲ್ ಫಿಲಂ ಆರ್ಕೈವ್ ಆಫ್ ಇಂಡಿಯಾದಿಂದ 5000 ಸಿನಿಮಾಗಳ ಸಂರಕ್ಷಣೆ
- ಗುಣಮಟ್ಟ ಸಿನಿಮಾ ನಿರ್ಮಾಣಕ್ಕೆ ಕರೆ
ಬೆಂಗಳೂರು: ನಿರ್ಮಾಪಕರಿಗೆ ಲಾಭ ಗಳಿಸುವ ಕಡೆಗೆ ಗಮನ ಇರುತ್ತದೆಯೇ ಹೊರತು ಆ ಸಿನಿಮಾದ ಸಂರಕ್ಷಣೆ ಕಡೆಗೆ ಎಚ್ಚರ ಇರುವುದಿಲ್ಲ. ಹಾಗಾಗಿ, ಎಷ್ಟೋ ಸಿನಿಮಾಗಳ ನೆಗೆಟಿವ್ ಪ್ರಿಂಟ್‌ಗಳು ಸಂರಕ್ಷಣೆ ಮಾಡದಷ್ಟು ಹಾಳಾಗಿವೆ. ಹಾಗಾಗಬಾರದು ಎಂದಾದರೆ ಸಿನಿಮಾ ಸಂರಕ್ಷಣೆ ದೊಡ್ಡ ಮಟ್ಟದಲ್ಲಿ ನಡೆಯಬೇಕು ಎಂದು ಹಳೆ ಸಿನಿಮಾಗಳ ಸಂರಕ್ಷಕಿ ಅಪರ್ಣಾ ಸುಬ್ರಮಣಿಯನ್ ಹೇಳಿದರು.
ಬೆಂಗಳೂರು ಚಿತ್ರೋತ್ಸವದಲ್ಲಿ ಮಂಗಳವಾರ ಬೆಳಗ್ಗೆ ಆಯೋಜಿಸಿದ್ದ ಸಿನಿಮಾಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ಪುನಶ್ಚೇತನ ಗೋಷ್ಠಿಯಲ್ಲಿ ಅವರು ಕ್ಲಾಸಿಕ್ ಸಿನಿಮಾಗಳ ಸಂಗ್ರಹಣೆ, ಸಂರಕ್ಷಣೆ ಕುರಿತು ಮಾತನಾಡಿ, ಕನ್ನಡದ ಹಳೆಯ ಸಿನಿಮಾಗಳ ಸಂರಕ್ಷಣೆ ಮತ್ತು ಪುನಶ್ಚೇತನದ ಕಡೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಗಮನಹರಿಸಬೇಕು. ಚಿತ್ರೋತ್ಸವದಲ್ಲಿ ಪ್ರದರ್ಶನವಾದ ಹಳೆಯ ಕ್ಲಾಸಿಕ್ ಸಿನಿಮಾಗಳನ್ನು ವೀಕ್ಷಿಸಿದ ಬಳಿಕ ಅದರ ಗುಣಮಟ್ಟ ಸಮರ್ಪಕವಾಗಿಲ್ಲರಿರುವುದು ಅರಿವಿಗೆ ಬಂತು. ಈ ನಿಟ್ಟಿನಲ್ಲಿ ಹಳೆಯ ಸಿನಿಮಾಗಳನ್ನು ಸಂಗ್ರಹಿಸಿ ಉಳಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಒಂದು ಸಿನಿಮಾ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಕಡಿಮೆ ಎಂದರೂ 20 ಲಕ್ಷ ರೂ. ಬೇಕಾಗುತ್ತದೆ. ಹಾಗಾಗಿ ಈ ಕಾರ್ಯ ಬಹಳ ದುಡ್ಡು ಬೇಡುವ ಕೆಲಸ. ಸರ್ಕಾರಿ ಸಂಸ್ಥೆಗಳೇ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿರುತ್ತದೆ. ವಿದೇಶಗಳಲ್ಲಿ ಈ ಕಾರ್ಯಕ್ಕಾಗಿ 350 ಮಿಲಿಯನ್ ಡಾಲರ್‌ನಷ್ಟು ಅನುದಾನ ದೊರೆಯುತ್ತದೆ. ಆದರೆ, ಅಷ್ಟಿದ್ದರೂ ಸಾಕಾಗುವುದಿಲ್ಲ ಎಂದು ಅವರು ಬೇಸರಿಸುತ್ತಾರೆ. ಇನ್ನು ನಮಗೆ ಕೋಟಿ ರೂ. ಅನುದಾನ ಕೊಟ್ಟರೂ ಅದು ಯಾವುದಕ್ಕೂ ಸಾಲುವುದು ಎಂದು ಹೇಳಿದರು. ನ್ಯಾಷನಲ್ ಫಿಲಂ ಆರ್ಕೈವ್ ಆಫ್ ಇಂಡಿಯಾ ಇದುವರೆಗೆ 5000 ಸಿನಿಮಾಗಳ ಸಂರಕ್ಷಣೆ ಮಾಡಿದೆ. ಇನ್ನೂ 2500 ಸಿನಿಮಾಗಳ ಸಂರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.