Merotsava 
ಸ್ಯಾಂಡಲ್‌ವುಡ್

Merotsava - ಚಿತ್ರಕಲಾ ಪರಿಷತ್​ನಲ್ಲಿ ತಾರೆಯರ ದರ್ಬಾರ್​

Merotsava - ಮೇರು ಚಿತ್ರಕಲಾ ವಿದ್ಯಾರ್ಥಿಗಳ ಬಿಡಿಸಿದ ಮೈಸೂರು ಮತ್ತು ತಂಜಾವೂರ್​ ಪೇಂಟಿಂಗ್​ಗಳ ಪ್ರದರ್ಶನವನ್ನು ಚಿತ್ರಕಲಾ ಪರಿಷತ್​ನಲ್ಲಿ ಆಯೋಜಿಸಲಾಗಿತ್ತು. ಚಿತ್ರಕಲಾ ವಿದ್ಯಾರ್ಥಿಗಳಿಗೆ ಸಪೋರ್ಟ್​ ಮಾಡಲು ನಟಿ ಅನು ಪ್ರಭಾಕರ್​, ಗಾಯಕಿ ಶಮಿತಾ ಮಲ್ನಾಡ್ ಮತ್ತು ನಿರ್ದೇಶಕ ಕೆ. ರಾಮನಾರಾಯಣ್​ ಕೂಡ ಆಗಮಿಸಿದ್ದರು. ಶುಕ್ರವಾರ, ಶನಿವಾರ ಮತ್ತು ಭಾನುವಾರ ಆಯೋಜಿಸಲಾಗಿದ್ದ ಈ ಮೇರೋತ್ಸವದಲ್ಲಿ ಹಲವಾರು ಚಿತ್ರಕಲಾ ಪ್ರೇಮಿಗಳು ಭಾಗಿಯಾಗಿ ವಿವಿಧ ಪ್ರಕಾರಗಳ ಪೈಂಟಿಂಗ್​ಗಳನ್ನು ಕಣ್ತುಂಬಿಕೊಂಡರು.
ನಟಿ ಅನು ಪ್ರಭಾಕರ್​, ನನಗೆ ಚಿಕ್ಕ ವಯಸ್ಸಿನಿಂದಲೂ ಚಿತ್ರ ಕಲಾವಿದೆ ಆಗುವ ಆಸಕ್ತಿ ಇತ್ತು ಎಂದರು. ಗಾಯಕಿ ಶಮಿತಾ ಮಲ್ನಾಡ್​, ಸಣ್ಣ ವಯಸ್ಸಿನಲ್ಲಿ ಬೆಟ್ಟ, ಗುಡ್ಡ, ಮರಗಳನ್ನು ಬರೆಯುತ್ತಿದ್ದೆವು. ಈಗ ಈ ವಿದ್ಯಾರ್ಥಿಗಳ ಚಿತ್ರಕಲೆಗಳನ್ನು ನೋಡಿದರೆ, ನಾವೂ ಕಲಿತು ರಚಿಸಬೇಕು ಎಂಬ ಆಸೆ ಚಿಗುರುತ್ತದೆ ಎಂದರು. ನಿರ್ದೇಶಕ ರಾಮನಾರಾಯಣ್​, ನನ್ನ ಒಡಹುಟ್ಟಿದ ತಂಗಿ ತಿರುಮಲ ಶ್ರೀಕಾಂತ್​ ಸಾಮಾನ್ಯ ಗೃಹಣಿಯಾಗಿದ್ದು, ತಮ್ಮ ಹವ್ಯಾಸದ ಚಿತ್ರಕಲೆಯನ್ನು ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸುತ್ತಿರುವುದು ಸಾಧನೆಯೇ ಸರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೇರು ಚಿತ್ರಕಲಾ ಶಾಲೆಯ ತಿರುಮಲ ಶ್ರೀಕಾಂತ್​, ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮದು. ಹೀಗಾಗಿಯೇ ಮೇರು ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ರಚಿಸಿದ ಚಿತ್ರಗಳನ್ನು ಚಿತ್ರಕಲಾ ಪರಿಷತ್ತಿನ ದೇವರಾಜ್ ಅರಸ್ ಗ್ಯಾಲರಿಯಲ್ಲಿ ಮೂರು ದಿನಗಳ ಪ್ರದರ್ಶನ ಆಯೋಜಿಸಿದ್ದೇವೆ ಎಂದು ಹೇಳಿಕೊಂಡರು.