ಬೆಂಗಳೂರು:
"ಇಬ್ಬನಿ ತಬ್ಬಿದ ಇಳೆಯಲಿ' (2024) ಚಿತ್ರದ ಅನಾಹಿತಾ ಮಧುಮಿತಾ ಬ್ಯಾನರ್ಜಿ ಪಾತ್ರಕ್ಕಾಗಿ ಸೈಮಾ, ಫಿಲಂಫೇರ್ ಸೇರಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಹೆಗ್ಗಳಿಕೆ ನಟಿ ಅಂಕಿತಾ ಅಮರ್ಗೆ ಸಲ್ಲುತ್ತದೆ. ಆ ಬಳಿಕ ನಿರೂಪ್ ಭಂಡಾರಿಗೆ ಜೋಡಿಯಾಗಿ "ಸತ್ಯ ಸನ್ ಆಫ್ ಹರಿಶ್ಚಂದ್ರ" ಮತ್ತು ಉಪೇಂದ್ರ ಜತೆ "ಭಾರ್ಗವ' ಚಿತ್ರಗಳಲ್ಲಿ ನಟಿಸುತ್ತಿರುವ ಅವರು, ಅದರ ನಡುವೆಯೇ "ಗೆಜ್ಜೆ' ಎಂಬ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸಂಚಿತ್ ಹೆಗ್ಡೆ ಅವರ "ಕರೆಯೋಲೆ' ಎಂಬ ಮ್ಯೂಸಿಕ್ ವಿಡಿಯೋ ಆಲ್ಬಂ ಸಾಂಗ್ನಲ್ಲಿ ಬೆಂಗಳೂರು ರೆಟ್ರೋ ಲುಕ್ನಲ್ಲಿ ಕಾಣಿಸಿಕೊಂಡಿದ್ದ ಅಂಕಿತಾ ಇಲ್ಲಿ ದೇವಿಯ ಲುಕ್ನಲ್ಲಿ ದರ್ಶನ ನೀಡಲಿದ್ದಾರೆ. "ಕನ್ನಡ್ ಗೊತ್ತಿಲ್ಲ' (2019) ನಿರ್ದೇಶಕ ಮಯೂರ ರಾಘವೇಂದ್ರ ನಿರ್ದೇಶಿಸಿರುವ ಈ ಹಾಡಿಗೆ "ಶಾಕಾಹಾರಿ', "ಭಾವ ತೀರ ಯಾನ' ಖ್ಯಾತಿಯ ಮಯೂರ್ ಅಂಬೇಕಲ್ ಸಂಗೀತವಿದೆ. ಇದೇ 11ರಂದು ಈ ಮ್ಯೂಸಿಕ್ ವಿಡಿಯೋ ಆಲ್ಬಂ ರಿಲೀಸ್ ಆಗಲಿದ್ದು, "ನಾನು ಶೃಂಗೇರಿ ಶಾರದಾಂಬೆಯ ಭಕ್ತೆ, ಅಭಿಮಾನಿ. "ಜಸ್ಟ್ ಮ್ಯಾರಿಡ್' ಚಿತ್ರದ ಬಳಿಕ ಒಮ್ಮೆ ಮಯೂರ ರಾವೇಂದ್ರ ಕರೆ ಮಾಡಿ "ಗೆಜ್ಜೆ' ಹಾಡಿನ ಬಗ್ಗೆ ತಿಳಿಸಿದರು. ಬಹುಶಃ ಶಾರದಾಂಬೆಯ ಆಶೀರ್ವಾದವೇ ಇರಬಹುದು ಅಂತ ನಾನು ಖುಷಿಯಾಗಿ ಒಪ್ಪಿಕೊಂಡೆ. ಒಂದು ದಿನ ಲುಕ್ ಮತ್ತು ಕಾಸ್ಟ್ಯೂಮ್ ಟೆಸ್ಟ್ ಮಾಡಿದೆವು. ಬಳಿಕ ಎರಡು ದಿನಗಳ ಕಾಲ ಕೊಡಚಾದ್ರಿಯಲ್ಲಿ ಚಿತ್ರೀಕರಣ ನಡೆಸಿದೆವು. ದೇವಿಯನ್ನು ಕೆಲವರು ಶಾರದಾಂಬೆ ಅಂತಾರೆ, ಕೆಲವರು ಮೂಕಾಂಬಿಕೆ ಅಂತಾರೆ. ಯಾರು ದೇವಿಯನ್ನು ಹೇಗೆ ನೋಡಲು ಇಷ್ಟಪಡುತ್ತಾರೋ ಹಾಗೇ ಇರಲಿ ಅಂತ ನಾವು ಆ ಎರಡೂ ಥೀಮ್ಗಳ ಹಿನ್ನೆಲೆಯಲ್ಲಿ ಈ ಹಾಡನ್ನು ಮಾಡಿದ್ದೇವೆ' ಎಂದು ಹೇಳಿಕೊಳ್ಳುತ್ತಾರೆ.
ಅಂಕಿತಾ ಸದ್ಯ ಎರಡು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ನಿರೂಪ್ ಭಂಡಾರಿ ಜತೆ ನಾಯಕಿಯಾಗಿ ನಟಿಸಿರುವ "ಸತ್ಯ ಸನ್ ಆಫ್ ಹರಿಶ್ಚಂದ್ರ' ರಿಲೀಸ್ಗೆ ರೆಡಿಯಿದ್ದು, "ನಾನಿಲ್ಲಿ ಯಾರಿಗೂ ಹೆದರದ ಮಹತ್ವಾಕಾಂಕ್ಷೆಯ ಜತೆಗೆ ಕುಟುಂಬದ ಜತೆ ತುಂಬ ಅಟ್ಯಾಚ್ಮೆಂಟ್ ಆಗಿರುವ ಗಾನಾ ಪಾತ್ರದಲ್ಲಿ ನಟಿಸಿದ್ದೇನೆ. ಆಕೆಯ ಪಾತ್ರದಿಂದ ಎಷ್ಟೋ ತಿರುವುಗಳು ಸಿಗುತ್ತವೆ. ಒಂದು ರೀತಿ ಕಥೆಯ ಹೃದಯವೇ ಗಾನಾ ಎನ್ನಬಹುದು. ಇನ್ನು ಉಪೇಂದ್ರ ಸರ್ ಜತೆ ನಟಿಸುತ್ತಿರುವ "ಭಾರ್ಗವ' ಚಿತ್ರದ ಒಂದು ಹಾಡು ಮತ್ತೊಂದು ಫೈಟ್ ಚಿತ್ರೀಕರಣ ಬಾಕಿಯಿದೆ' ಎಂದು ಮಾಹಿತಿ ನೀಡುತ್ತಾರೆ ಅಂಕಿತಾ ಅಮರ್.