ಆನಿರುದ್ಧ್​ ಭಟ್​ 
ಸ್ಯಾಂಡಲ್‌ವುಡ್

Anirudh Bhat - "ರಕ್ಕಸಪುರದೋಳ್​' ಚಿತ್ರದ ಮೂಲಕ ಮನೆಮಾತಾದ ಮಾಂತ್ರಿಕ ಅನಿರುದ್ಧ್​ ಭಟ್

Anirudh Bhat -
ರಾಜ್​ ಬಿ. ಶೆಟ್ಟಿ ನಟಿಸಿದ್ದ, ರವಿ ಸಾರಂಗ್​ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಮರ್ಡರ್​ ಮಿಸ್ಟರಿ "ರಕ್ಕಸಪುರದೋಳ್​'. ಕಳೆದ ಫೆ. 6ರಂದು ಬಿಡುಗಡೆಯಾದ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಾಲಿವುಡ್​ ಸ್ಟಾರ್​ ಸಲ್ಮಾನ್​ ಖಾನ್​ ಕೂಡ ಟ್ರೇಲರ್​ ನೋಡಿ ಮಿಚ್ಚು, ಹಿಂದಿಗೆ ಸಿನಿಮಾ ಡಬ್​ ಮಾಡುವಂತೆ ಸಲಹೆ ನೀಡಿದ್ದರು. ಕರ್ನಾಟಕ ಪಾತ್ರವಲ್ಲದೇ ಹೊರದೇಶಗಳಲ್ಲೂ ಕನ್ನಡಿಗರನ್ನು ರಂಜಿಸಿದ್ದ "ರಕ್ಕಸಪುರದೋಳ್​' ಇತ್ತೀಚೆಗಷ್ಟೆ 50 ಸೆಂಟರ್​ಗಳಲ್ಲಿ 25 ದಿನಗಳನ್ನು ಪೂರೈಸಿದೆ. ಈ ಚಿತ್ರ ಬಿಡುಗಡೆವರೆಗೂ ಟ್ರೇಲರ್​, ಹಾಡುಗಳನ್ನು ನೋಡಿ ನಟ ರಾಜ್​ ಬಿ. ಶೆಟ್ಟಿ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದವು. ಆದರೆ, ರಿಲೀಸ್​ ಬಳಿಕ ನಟ ಅನಿರುದ್ಧ್​ ಭಟ್​ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಅನಿರುದ್ಧ್​ ಮಾತಿಗೆ ಸಿಕ್ಕಿದ್ದರು. "ಹೊಯ್ಸಳ', "ಇಬ್ಬನಿ ತಬ್ಬಿದ ಇಳೆಯಲಿ', "ಮ್ಯಾಕ್ಸ್​' ಚಿತ್ರಗಳಲ್ಲೂ ಬಹುತೇಕ ನೆಗಟಿವ್​ ಶೇಡ್​ಗಳಲ್ಲಿ ನಟಿಸಿರುವ ಅವರು, "ರಕ್ಕಸಪುರದೋಳ್​'ನಲ್ಲಿ ಔಟ್​ ಆ್ಯಂಡ್​ ಔಟ್​ ಟೆರರ್​ ಪಾತ್ರದಲ್ಲಿ ಅಬ್ಬರಿಸಿದ್ದಾರೆ. "ಸಿನಿಮಾ ರಿಲೀಸ್​ ಬಳಿಕ ಕಳೆದ ಒಂದು ತಿಂಗಳಿನಿಂದ ಸುಮಾರು 15 ಒನ್​ಲೈನ್​ ಕೇಳಿದ್ದೇನೆ. ನಾನು ಜನರ ಈ ನಂಬಿಕೆ ಗಳಿಸಲು, ಈ ಹಂತಕ್ಕೆ ಬರಲು 9 ವರ್ಷ ಬೇಕಾಯಿತು. ಸಿಕ್ಕಿದ್ದನ್ನೆಲ್ಲ ಮಾಡಿಕೊಂಡು ಹೋಗಲು ಇಷ್ಟವಿಲ್ಲ. ಹೀಗಾಗಿ ತುಂಬ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಿದ್ದೇನೆ. 15ರಲ್ಲಿ ನಾಲ್ಕೈದು ನೆಗಟಿವ್​ ಪಾತ್ರಗಳು, ಏಳೆಂಟು ನಾಯಕ ಪಾತ್ರಗಳೂ ಇವೆ. ಸದ್ಯಕ್ಕೆ ನಾನು ಯಾವುದಕ್ಕೂ ಇಲ್ಲ ಎಂದಿಲ್ಲ. ಪೂರ್ತಿ ಕಥೆ ಕೇಳಿ ನಂತರ ನಿರ್ಧರಿಸಲಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.

ಸುಳ್ಯ ಟು ಸ್ಯಾಂಡಲ್​ವುಡ್​

ಮೂಲತಃ ಸುಳ್ಯದವರಾದ ಅನಿರುದ್ಧ್​ ಬೆಳೆದಿದ್ದು ಕುಶಾಲನಗರದಲ್ಲಿ. ನಂತರ ಜಿಕೆವಿಕೆಯಲ್ಲಿ ಬಿಎಸ್​ಸಿ ಅಗ್ರಿಕಲ್ಚರ್​ ಓದಲು ಬೆಂಗಳೂರಿಗೆ ಬಂದ ಅವರಿಗೆ ಸಿನಿಮಾ ಮಾಡುವಾಸೆ ಉಂಟಾಗಿ ಗೆಳೆಯರ ಜತೆ ಸೇರಿ ಕಿರುಚಿತ್ರಗಳನ್ನು ಮಾಡತೊಡಗಿದರಂತೆ. ಕ್ರಮೇಣ ಬೇರೆ ತಂಡಗಳ ಜತೆಗೂ ಶಾರ್ಟ್​ ಫಿಲಂ ಮಾಡುತ್ತಿದ್ದ ಅವರಿಗೆ, "ಹೊಯ್ಸಳ' ಚಿತ್ರದ ಆಡಿಷನ್ಸ್​ ಬಗ್ಗೆ ಗೊತ್ತಾಗಿ ಭಾಗಿಯಾದರಂತೆ. ""ರಕ್ಕಸಪುರದೋಳ್​' ಚಿತ್ರಕ್ಕೂ ನಾನು ಆಡಿಷನ್​ ಮೂಲಕವೇ ಆಯ್ಕೆಯಾದೆ. ರಂಗಭೂಮಿ, ಕಿರುತೆರೆ ಅಥವಾ ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ, ನಾನು ನಟನೆಯನ್ನು ಕಿರುಚಿತ್ರಗಳ ಮೂಲಕವೇ ಕಲಿತೆ' ಎನ್ನುತ್ತಾರೆ.

ರಾಜ್​ ಸರ್​ ಇಂದ ಮಾತ್ರ ಸಾಧ್ಯ!

ಸಾಮಾನ್ಯವಾಗಿ ತಮಗಿಂತ ತಮ್ಮ ಸುತ್ತಮುತ್ತಲಿನ ಪಾತ್ರಗಳು ಚೆನ್ನಾಗಿ ಮೂಡಿಬರುತ್ತಿದ್ದರೆ, ಸಂಕಲನದ ಸಮಯದಲ್ಲಿ ಕತ್ತರಿ ಪ್ರಯೋಗ ಮಾಡಿಸಿರುವ ಬಗ್ಗೆ ಹಲವರು ಆರೋಪಿಸಿರುವ ಉದಾಹರಣೆಗಳಿವೆ. ಆದರೆ, "ರಾಜ್​ ಬಿ. ಶೆಟ್ಟಿ ಹಾಗಲ್ಲ' ಅಂತಾರೆ ಅನಿರುದ್ಧ್​. "ಅವರಿಗೆ ಸಿನಿಮಾ ಮೇಲಿನ ಪ್ರೀತಿ ಅಗಾಧವಾದುದು. ನಾನು ಸಿನಿಮಾಗಿಂತ ದೊಡ್ಡವನು ಅಂತ ಅಂದುಕೊಂಡಾಗ ಆ ರೀತಿ ಬೇರೆ ಪಾತ್ರಗಳ ಮೇಲೆ ಪರಿಣಾಮ ಬೀರಬಹುದು. ಆದರೆ, ಯಾವಾಗ ಸಿನಿಮಾ ಗೆಲ್ಲಬೇಕು ಅಂತ ಕೆಲಸ ಮಾಡುತ್ತೇವೋ, ಆಗ ಹಾಗನ್ನಿಸುವುದಿಲ್ಲ. ಅವರು ತುಂಬ ಸೆಕ್ಯೂರ್​ ನಟ. ನಮ್ಮ ಚಿತ್ರರಂಗಕ್ಕೆ ಹೊಸ ನಟರು ಬೇಕು ಅಂತನೇ ನನ್ನಂಥವರಿಗೆ ಸಪೋರ್ಟ್​ ಮಾಡಿದರು. ಅವರಿಲ್ಲದೇ ಬೇರೆ ಯಾರೇ ಇದ್ದರೂ ನನಗೆ ಇಷ್ಟು ಸ್ಪೇಸ್​ ಸಿಗುತ್ತಿರಲಿಲ್ಲ. ಪ್ರಚಾರದ ಸಮಯದಲ್ಲೂ ನನಗೆ ಆದ್ಯತೆ ನೀಡುತ್ತಿದ್ದರು, ಸೆಟ್​ನಲ್ಲಿದ್ದಾಗಲೂ ಗೈಡ್​ ಮಾಡುತ್ತಿದ್ದರು' ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ.

ಮುಂದೆ?

ತಾವೇ ಒಂದು ತಂಡ ಮಾಡಿಕೊಂಡಿರುವ ಅನಿರುದ್ಧ್​, ಕಥೆ ಸಿದ್ಧ ಮಾಡುತ್ತಿದ್ದಾರಂತೆ. "ಸದ್ಯ ನೆಗೆಟಿವ್​ ಪಾತ್ರಗಳಲ್ಲಿ ನಟಿಸಲ್ಲ. ಸಾಫ್ಟ್​​ ಬಾಯ್​ ರೀತಿಯ ನಾಯಕನ ಪಾತ್ರದಲ್ಲಿ ನಟಿಸಬೇಕು ಅಂತ ಅಂದುಕೊಂಡಿದ್ದೇನೆ. ಕೆಲ ದಿನಗಳಲ್ಲೇ ನಮ್ಮ ತಂಡದ ಒಂದು ಸಿನಿಮಾ ಘೋಷಣೆಯಾಗುವ ನಿರೀಕ್ಷೆಯಿದೆ. ನನಗೆ ಹಾಲಿವುಡ್​ನ "ಜೋಕರ್​' ಪಾತ್ರ ತುಂಬ ಇಷ್ಟ. ಅಂತಹ ಸ್ವಂತಿಕೆಯ ಪಾತ್ರದಲ್ಲಿ ನಟಿಸುವಾಸೆ ಇದೆ. ಚಿತ್ರದಿಂದ ಚಿತ್ರಕ್ಕೆ, ಪಾತ್ರದಿಂದ ಪಾತ್ರಕ್ಕೆ ನನ್ನ ಶಕ್ತಿ ಮತ್ತು ವೀಕ್​ನೆಸ್​ಗಳನ್ನು ಅರಿತು ಕಲಿಯುತ್ತಿದ್ದೇನೆ. ಕಲಿಕೆ ನಿರಂತರ' ಎನ್ನುತ್ತಾರೆ.