ಚಿತ್ರ: ಅನಂತಪಯಣ
ನಿರ್ದೇಶನ: ಶ್ರೀಕಾಕಾ
ತಾರಾಗಣ: ಶ್ರೀಕಾಕಾ, ನಿವಿಷ್ಕಾ ಪಾಟೀಲ್, ಬಲ ರಾಜವಾಡಿ, ಲಕ್ಷ್ಮೀ ಸಿದ್ದಯ್ಯ, ಅಪೂರ್ವ ಮತ್ತಿತರರು.
ಶಿವ ಸ್ಥಾವರಮಠ
ಸಂಚಾರಿ ಕುರಿಗಾಹಿ ಸಮುದಾಯದ ಯುವಕ ಬೀರ (ಶ್ರೀಕಾಕಾ). ಊರೂರು ತಿರುಗಾಡಿ ಕುರಿ ಕಾಯುವುದೇ ಆತನ ಕಾಯಕ. ಮುದ್ದು ಮಡದಿ ಗೌರಿ (ನಿವಿಷ್ಕಾ) ಹಾಗೂ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ನೆಚ್ಚಿನ ಟಗರು ಭೀಮ. ಒಮ್ಮೆ ಬೀರನ ಟಗರಿಗೆ ಅಪಘಾತವಾಗಿ ಅದು ಸಾಯುತ್ತದೆ. ಆ್ಯಕ್ಸಿಡೆಂಟ್ ಮಾಡಿದವರು ಊರಿನ ಸಾಹುಕಾರನ ಮಕ್ಕಳು. ಅವರ ಮೇಲೆ ಕೈ ಮಾಡಿದ ಕಾರಣ ಬೀರ ಜೈಲು ಸೇರಬೇಕಾಗುತ್ತದೆ. ಕೊನೆಗೆ ಮನೆಯವರು ಸಾಹುಕಾರನ ಕೈ ಕಾಲು ಹಿಡಿದು ಬೀರನನ್ನು ಜೈಲಿನಿಂದ ಬಿಡಿಸಿಕೊಂಡು ಬರುತ್ತಾರೆ. ಬಳಿಕ ಕುರಿ ಕಾಯುತ್ತಾ ಬೀರ ಇನ್ನೊಂದು ಊರಿಗೆ ಹೋದರೆ, ಅಲ್ಲಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಹೀಗೆ ಸಮಸ್ಯೆಗಳ ಸುಳಿಯಲ್ಲಿ ಜೀವಿಸುವ ಕುರಿಗಾಹಿಗಳ ಬದುಕನ್ನು ಹಿಡಿಯಾಗಿ ಶ್ರೀಕಾಕಾ ‘ಅನಂತ ಪಯಣ’ದ ಮೂಲಕ ತೋರಿಸಿದ್ದಾರೆ.
ಸಮಾಜದಲ್ಲಿ ಮೂಲ ಸೌಲಭ್ಯ, ಸೌಕರ್ಯಗಳಿಂದ ವಂಚಿತವಾಗಿರುವ ಸಂಚಾರಿ ಕುರಿಗಾಹಿ ಸಮುದಾಯದ ಬದುಕು-ಬವಣೆಯ ಮೇಲೆ ಈ ಸಿನಿಮಾ ಚಿತ್ರಿತವಾಗಿದೆ. ಜತೆಗೆ ಆ ಸಮುದಾಯದ ಜೀವನ, ಆಚಾರ-ವಿಚಾರ ಹಾಗೂ ಸಮಾಜದಲ್ಲಿ ಹೇಳಿಕೊಳ್ಳಲಾಗದ ಅಸಹಾಯಕ ಸ್ಥಿತಿಯನ್ನು ತಿಳಿಸಲಾಗಿದೆ. ಒಂದೇ ಕಥೆಯಲ್ಲಿ ಹಲವು ವಿಷಯಗಳ ಬಗ್ಗೆ ಗಮನ ಹರಿಸಲಾಗಿದ್ದು, ಸಿನಿಮಾ ಕೆಲವೊಮ್ಮೆ ಸಾಕ್ಷ್ಯಚಿತ್ರದಂತೆ ಭಾಸವಾಗುತ್ತದೆ. ಅವಧೂತ ಬಾಳು ಮಾಮನ ಜೀವನ ಹಾಗೂ ಪವಾಡಗಳನ್ನು ತೋರಿಸಿರುವುದು ಚಿತ್ರದ ಹೈಲೈಟ್. ಬಹುಮುಖ್ಯವಾಗಿ ಬೆಳಗಾವಿ ಶೈಲಿಯ ಭಾಷೆ, ಸೊಗಡನ್ನು ತುಂಬಾ ಆಪ್ತವಾಗಿ ಸೆರೆಹಿಡಿಯಲಾಗಿದೆ. ಉತ್ತರ ಕರ್ನಾಟಕ ಭಾಗದ ಕಥೆ ಎಂದರೆ ಅಲ್ಲಿ ಅಶ್ಲೀಲ, ಡಬಲ್ ಮೀನಿಂಗ್ ಸಂಭಾಷಣೆಗಳೇ ಹೆಚ್ಚು ಎನ್ನುವ ಮಾತಿನ ನಡುವೆ, ಈ ಚಿತ್ರದಲ್ಲಿ ಒಂದೇ ಒಂದು ಅಂತಹ ಸಂಭಾಷಣೆ ಇರದಿರುವುದು ಕಥೆಯ ಗಂಭೀರತೆಯನ್ನು ಹೆಚ್ಚಿಸಿದೆ. ಇನ್ನು ಶ್ರೀಕಾಕಾ ನಿರ್ದೇಶನ, ನಟನೆಯಲ್ಲಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದಾರೆ. ನಿವಿಷ್ಕಾ ಪಾಟೀಲ್, ಮಂಜುನಾಥ ಹೆಗಡೆ, ಅಪೂರ್ವಶ್ರೀ ಭಾವಪೂರ್ಣ ಅಭಿನಯ ಗಮನ ಸೆಳೆಯುತ್ತದೆ. ಆಕಾಶ್ ಪರ್ವ ಸಂಗೀತ ನೀಡಿರುವ ‘ನನ್ನ ಕಂಬಳಿ’ ಹಾಡು ಮನಸ್ಸಿನಲ್ಲಿ ಉಳಿಯುತ್ತದೆ. ಭಂಡಾರದ ಜಾತ್ರೆ, ಕತ್ತಲಿನ ದೃಶ್ಯಗಳನ್ನು ಛಾಯಾಗ್ರಾಹಕ ವಿನೋದ್ ಭಾರತಿ ನೈಜವಾಗಿ ಸೆರೆಹಿಡಿದಿದ್ದಾರೆ.