ಬೆಂಗಳೂರು: ಕನ್ನಡದ ಯಶಸ್ವಿ ಕಲ್ಟ್ ಕ್ಲಾಸಿಕ್ ಸಿನಿಮಾಗಳಲ್ಲಿ ಇಂದಿಗೂ ‘ಅಮೃತವರ್ಷಿಣಿ’ (1997) ಚಿತ್ರಕ್ಕೆ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ದಿನೇಶ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಶರತ್ ಬಾಬು, ಸುಹಾಸಿನಿ, ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇಂಪಾದ ಹಾಡುಗಳ ಮೂಲಕವೇ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿತ್ತು. ಇದೀಗ ಚಿತ್ರ ತೆರೆಕಂಡು 29 ವರ್ಷಗಳ ಬಳಿಕ ಅದರ ಸೀಕ್ವೆಲ್ ತೆರೆ ಮೇಲೆ ಬರಲು ಸಿದ್ಧತೆ ನಡೆಸಲಾಗುತ್ತಿದೆ. ಇತ್ತೀಚೆಗೆ ನಿರ್ದೇಶಕ ದಿನೇಶ್ ಬಾಬು ‘ಅಮೃತವರ್ಷಿಣಿ 2’ ಘೋಷಿಸಿದ್ದಾರೆ. ಮೊದಲ ಭಾಗದ ಕಥೆ ಎಲ್ಲಿಗೆ ಅಂತ್ಯ ಕಂಡಿತ್ತೋ, ಅಲ್ಲಿಂದಲೇ ಸೀಕ್ವೆಲ್ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿರುವ ಅವರು, ‘29 ವರ್ಷಗಳ ಬಳಿಕ ‘ಅಮೃತವರ್ಷಿಣಿ’ ಸೀಕ್ವೆಲ್ ತರುತ್ತಿದ್ದೇವೆ. ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಕಥೆ ಹೇಳಲಿದ್ದೇನೆ. ಇದು ಮೊದಲ ಭಾಗದ ಮುಂದುವರಿದ ಕಥೆಯಾಗಿರಲಿದೆ. ಕೊಡಗು, ಬೆಂಗಳೂರು ಸೇರಿ ವಿವಿಧೆಡೆ ಚಿತ್ರೀಕರಣ ಯೋಜನೆ ರೂಪಿಸಿದ್ದೇವೆ. ಮೊದಲ ಭಾಗಕ್ಕೆ ದೇವ ಸಂಗೀತ ನೀಡಿದ್ದರು. ಈ ಚಿತ್ರಕ್ಕೂ ಅವರೇ ಸಂಗೀತ ನೀಡಬೇಕಿತ್ತು. ಆ ಬಗ್ಗೆ ಮಾತುಕತೆ ಕೂಡ ಆಗಿತ್ತು. ಆದರೆ, ಅವರ ಅಕಾಲಿಕ ನಿಧನದಿಂದಾಗಿ ಅವರ ಸ್ಥಾನಕ್ಕೆ ವಿದ್ಯಾ ಸಾಗರ್ ಬಂದಿದ್ದಾರೆ. ಈ ಚಿತ್ರದಲ್ಲಿ ಮಾನವ ಸಂಬಂಧಗಳ ಜತೆಗೆ ಒಂದು ಕ್ಯೂರಿಯಾಸಿಟಿ ಅಂಶಗಳಿರಲಿವೆ. ರಮೇಶ್ ಅರವಿಂದ್ ಪಾತ್ರವೇ ಅಚ್ಚರಿಯಾಗಿರಲಿದೆ. ಸುಹಾಸಿನಿ ಕೂಡ ಈ ಚಿತ್ರದ ಬಗ್ಗೆ ದೊಡ್ಡ ಅಶಾಭಾವ ಹೊಂದಿದ್ದಾರೆ. ಜನವರಿಯಲ್ಲಿ ಶೂಟಿಂಗ್ ಆರಂಭಿಸಿ, ಏಪ್ರಿಲ್ ಅಥವಾ ಮೇನಲ್ಲಿ ಸಿನಿಮಾ ತೆರೆ ಮೇಲೆ ತರುವ ಆಲೋಚನೆಯಿದೆ’ ಎಂದು ಹೇಳಿಕೊಂಡರು.
10 ವರ್ಷಗಳ ಹಿಂದೆ ಈ ಸಿನಿಮಾ ಘೋಷಿಸಿದ್ದೆವು. ಆಗ ಕಾರಣಾಂತರಗಳಿಂದ ಟೇಕ್ಾ ಆಗಲಿಲ್ಲ. ಇದೀಗ ಕಾಲ ಕೂಡಿಬಂದಿದೆ. ರಮೇಶ್ ಅರವಿಂದ್, ಸುಹಾಸಿನಿ, ತಾರಾ, ರಾಮಕೃಷ್ಣ ಪಾತ್ರಗಳು ಮುಂದುವರಿಯಲಿವೆ. ಹೊಸದಾಗಿ ಹೀರೋಯಿನ್ ಪಾತ್ರದ ಜತೆಗೆ ದೇವರಾಜ್, ಲಕ್ಷ್ಮೀ ಗೋಪಾಲಸ್ವಾಮಿ ತಂಡ ಸೇರಿಕೊಳ್ಳಲಿದ್ದಾರೆ. 2027ರ ಜನವರಿ 18ರಂದು ಕೊಡಗಿನಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಲಿದ್ದು, ಅಂದಿನಿಂದಲೇ ಶೂಟಿಂಗ್ ಆರಂಭವಾಗಲಿದೆ.ದಿನೇಶ್ ಬಾಬು, ನಿರ್ದೇಶಕ