ಪುನೀತ್ ರಾಜ್ಕುಮಾರ್ ನಟನೆಯ 'ಆಕಾಶ್' ಸಿನಿಮಾದ ಪೋಸ್ಟರ್
- ಮಾ.17ಕ್ಕೆ ಡಾ.ಪುನೀತ್ ರಾಜ್ಕುಮಾರ್ ಜನ್ಮದಿನ
- 'ಅಪ್ಪು' ಹುಟ್ಟುಹಬ್ಬಕ್ಕೆ ಫ್ಯಾನ್ಸ್ಗಳಿಗೆ 'ಆಕಾಶ್' ಗಿಫ್ಟ್
- ಮಾ.13ರಂದು ತೆರೆಗೆ ಬರಲಿದೆ ಬ್ಲಾಕ್ಬಸ್ಟರ್ ಸಿನಿಮಾ
ಬೆಂಗಳೂರು: ಕನ್ನಡ ಚಿತ್ರರಂಗದ ನೆಚ್ಚಿನ 'ಪವರ್ಸ್ಟಾರ್', ಅಭಿಮಾನಿಗಳ ಪ್ರೀತಿಯ 'ಅಪ್ಪು', ಡಾ. ಪುನೀತ್ ರಾಜ್ಕುಮಾರ್ ಅಭಿನಯದ 2005ರಲ್ಲಿ ತೆರೆಕಂಡ ಬ್ಲಾಕ್ಬಸ್ಟರ್ ಹಿಟ್ 'ಆಕಾಶ್' ಸಿನಿಮಾ ಇದೀಗ ರೀ-ರಿಲೀಸ್ಗೆ ಎದುರುನೋಡುತ್ತಿದೆ. ಇದು ಪುನೀತ್ ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.
ಕರುನಾಡಿನಲ್ಲಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಪುನೀತ್ ರಾಜ್ಕುಮಾರ್ ಅವರ ಜನ್ಮದಿನವನ್ನು ಈ ಬಾರಿ ಇನ್ನೂ ವಿಶೇಷವಾಗಿ ಸಂಭ್ರಮಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ ಹಾಗೂ ಸಾಕಷ್ಟು ತಯಾರಿಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ, ಪುನೀತ್ ಅವರ ಪತ್ನಿ, ನಿಮಾರ್ಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅಪ್ಪು ಹುಟ್ಟುಹಬ್ಬಕ್ಕೆ ಅವರ ಫ್ಯಾನ್ಸ್ಗಳಿಗೆ 'ಆಕಾಶ್' ಸಿನಿಮಾವನ್ನು ಮರುಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಮಾರ್ಚ್ 17ರಂದು ಅಪ್ಪು ಜನ್ಮದಿನದ ಹಿನ್ನೆಲೆ ಅಂದಿನ ಸಮಯಕ್ಕೆ ಬಾಕ್ಸ್ಆಫೀಸ್ನಲ್ಲಿ ದಾಖಲೆ ಬರೆದು, ಸೂಪರ್ಹಿಟ್ ಸಾಲಿಗೆ ಸೇರಿದ 'ಆಕಾಶ್' ಚಿತ್ರವನ್ನು ಮಾ.13ರಂದು ಮತ್ತೆ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ. ಕಳೆದ ವರ್ಷಗಳಲ್ಲಿ ಪುನೀತ್ ಅವರ ಹುಟ್ಟುಹಬ್ಬಕ್ಕೆ 'ಜಾಕಿ' ಮತ್ತು 'ಅಪ್ಪು' ಸಿನಿಮಾಗಳನ್ನು ರೀ-ರಿಲೀಸ್ ಮಾಡಲಾಗಿತ್ತು. ಈ ಚಿತ್ರಗಳನ್ನು ಸಿನಿಪ್ರಿಯರು ಮತ್ತು ನಟನ ಅಭಿಮಾನಿಗಳು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆ ಹೊಡೆದು, ಕುಣಿದು ಸಂಭ್ರಮಿಸಿದ್ದು ವಿಶೇಷ. ಈಗ, ಆಕಾಶ್ ಸರದಿ ಎಂಬುದು ಮತ್ತೊಂದು ವಿಶೇಷವೇ ಸರಿ.