ಅಭಿಮಾನಿಗಳ ಕಲ್ಪನೆಯನ್ನು ವಾಸ್ತವಕ್ಕೆ ತಂದ ಎಐ 
ಸ್ಯಾಂಡಲ್‌ವುಡ್

ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ಸ್ಟಾರ್​ ನಟರು: ಅಭಿಮಾನಿಗಳ ಕಲ್ಪನೆಯನ್ನು ವಾಸ್ತವಕ್ಕೆ ತಂದ ಎಐ! AI

ಪ್ರಮುಖ ಮುಖ್ಯಾಂಶಗಳು

  • ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ದರ್ಶನ್​ರನ್ನು ಭೇಟಿ ಮಾಡಿದ ಸ್ಯಾಂಡಲ್​ವುಡ್​ ಸ್ಟಾರ್​ ನಟರು
  • ದರ್ಶನ್​ ಜತೆ ಕೇರಂ ಆಡಿ, ಊಟ ಮಾಡಿದ ಶಿವಣ್ಣ, ಕಿಚ್ಚ ಸುದೀಪ್​ ಹಾಗೂ ಯಶ್​
  • ಮನುಷ್ಯನ ಕಲ್ಪನೆಯನ್ನು ವಾಸ್ತವಕ್ಕೆ ತರುವಲ್ಲಿ ಕೃತಕ ಬದ್ಧಿಮತ್ತೆ ಪಾತ್ರ ಪ್ರಮುಖ
ಬೆಂಗಳೂರು: ಮನುಷ್ಯನ ಕಲ್ಪನೆಯನ್ನು ವಾಸ್ತವಕ್ಕೆ ತರುವಲ್ಲಿ ಕೃತಕ ಬದ್ಧಿಮತ್ತೆ ಇಂದು ಪ್ರಮುಖ ಪಾತ್ರ ವಹಿಸುತ್ತಿದೆ. ಏನೇ ಊಹೆ ಮಾಡಿಕೊಂಡರು ಅದಕ್ಕೆ ಎಐ ( AI ) ಮೂಲಕ ದೃಶ್ಯರೂಪ ನೀಡಬಹುದು. ಎಷ್ಟರಮಟ್ಟಿಗೆ ಅಂದರೆ, ವಾಸ್ತವವಾಗಿ ನಡೆದಿದೆ ಅನಿಸಿಬಿಡುತ್ತದೆ. ಅದೇನೋ ಸರಿ ಎಐ ವಿಚಾರ ಈಗ್ಯಾಕೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ನಾವು ಎಐ ಬಗ್ಗೆ ಹೇಳಲು ಒಂದು ಕಾರಣವೂ ಇದೆ. ಅದೇನೆಂದು ತಿಳಿಯಲು ಬಯಸುವುದಾದರೆ ಮುಂದೆ ಓದಿ.
ನಟ ದರ್ಶನ್​ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್​ ಹಲವು ತಿಂಗಳುಗಳಿಂದ ಜೈಲಿನಲ್ಲೇ ಇದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಇದರ ನಡುವೆ ಒಂದು ಖುಷಿಯ ವಿಚಾರ ಬಂದಿದೆ. ಅದೇನೆಂದರೆ, ದರ್ಶನ್​ರನ್ನು ನೋಡಲು ಸ್ಯಾಂಡಲ್​ವುಡ್​ ಸ್ಟಾರ್​ ನಟರಾದ ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​ ಹಾಗೂ ಯಶ್​ ಜೈಲಿಗೆ ಭೇಟಿ ನೀಡಿ ಬಂದಿದ್ದಾರೆ. 
ಈ ಮಾತನ್ನು ನೀವು ನಂಬುವುದಿಲ್ಲ ಅಂತ ನಮಗೆ ಚೆನ್ನಾಗಿ ಗೊತ್ತು. ಆದರೆ, ಇಂಥದ್ದೊಂದು ಘಟನೆ ನಿಜವಾಗಿ ನಡೆಯಲಿ ಅನ್ನೋ ಭಾವನೆ ಅಭಿಮಾನಿಗಳಲ್ಲಿ ಇದೆ. ವಾಸ್ತವವಾಗಿ ಇಂಥದ್ದೊಂದು ಭಾವುಕ ಕ್ಷಣ ನಡೆಯದೇ ಇರಬಹುದು. ಆದರೆ, ಕೃತಕ ಬುದ್ಧಿಮತ್ತೆ ಅದನ್ನು ವಾಸ್ತವಕ್ಕೆ ಹತ್ತಿರವಾಗಿಸಿದೆ.
ಹೌದು, ಎಐ ಮೂಲಕ ರಚನೆ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಫೋಟೋಗಳಲ್ಲಿ ಶಿವಣ್ಣ, ಸುದೀಪ್​ ಮತ್ತು ಯಶ್​ ಅವರು ನಟ ದರ್ಶನ್​ರನ್ನು ನೋಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಬಂದಿದ್ದಾರೆ. ದರ್ಶನ್​ಗೆ ಹಣ್ಣುಗಳನ್ನು ಕೊಡುತ್ತಿರುವುದು, ದರ್ಶನ್​ ಜತೆ ಕುಳಿತು ಮಾತನಾಡುತ್ತಿರುವುದು, ದರ್ಶನ್​ ಜತೆ ಕೇರಂ ಬೋರ್ಡ್ ಆಡುತ್ತಿರುವುದು, ದರ್ಶನ್​ ಜತೆ ಊಟ ಮಾಡುತ್ತಿರುವುದು ಮತ್ತು ಕೊನೆಯಲ್ಲಿ ದರ್ಶನ್​ಗೆ ಬೈ ಬೈ ಹೇಳಿ ಜೈಲಿನಿಂದ ಹೊರಗಡೆ ಬರುತ್ತಿರುವ ಫೋಟೋಗಳನ್ನು ವಿಡಿಯೋ ರೂಪದಲ್ಲಿ ಟ್ರೂ ಕನ್ನಡ ಮೀಡಿಯಾ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. 
ನಿನ್ನೆಯಷ್ಟೇ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೆ 3 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, 2 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದು, ಸಾವಿರಾರು ಮಂದಿ ಕಾಮೆಂಟ್​ ಮಾಡಿದ್ದಾರೆ. ಇದನ್ನು ನೋಡಿದರೆ ತುಂಬಾ ಖುಷಿಯಾಗುತ್ತೆ. ಸ್ಟಾರ್ ವಾರ್ ಬಿಟ್ಟು ಎಲ್ಲರು ಇದೇ ರೀತಿ ಯೋಚನೆ ಮಾಡಿ, ಇದು ನಿಜ ಆದರೆ ಇನ್ನು ತುಂಬಾ ಖುಷಿಯಾಗುತ್ತೆ ಮತ್ತು ಈ ವಿಡಿಯೋದಲ್ಲಿ ನೋಡಿದ ಹಾಗೆ ಒಂದು ಸಲ ನಿಜ ಆಗಲಿ ದೇವರೆ ಎಂದೆಲ್ಲ ಅಭಿಮಾನಿಗಳು ಕಾಮೆಂಟ್​ಗಳ ಸುರಿಮಳೆಗೈದಿದ್ದಾರೆ.