ಕೊರಗಜ್ಜ ಚಿತ್ರಕ್ಕೆ ಎಐ ಸ್ಪರ್ಶ
ಬೆಂಗಳೂರು: ತ್ರಿವಿಕ್ರಮ್ ಸಪಲ್ಯ ನಿರ್ಮಾಣದ ಹಾಗೂ ಗೀತೆ ರಚನೆಕಾರ ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಕೊರಗಜ್ಜ’ ( Koragajja ). ಈಗಾಗಲೇ 3ಡಿ ಪೋಸ್ಟರ್ ಹಾಗೂ ‘ಗುಳಿಗ ಗುಳಿಗ’ ಸಾಂಗ್ ಮೂಲಕವೇ ಸದ್ದು ಮಾಡಿರುವ ಈ ಚಿತ್ರವು ಇದೀಗ ಮತ್ತೊಂದು ಅಪ್‌ಡೇಟ್ ನೀಡಿದೆ.
ಚಿತ್ರದ ಎರಡನೇ ಹಾಡು ‘ಗಾಳಿ ಗಂಧ’ ಸಾಹಿತ್ಯವನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಇದೀಗ ಆ ಹಾಡಿನ ಶೂಟಿಂಗ್ ಸ್ಟಿಲ್ ಬಿಡುಗಡೆಗೊಳಿಸಿದೆ. ಸದ್ಯ ಈ ಪೋಸ್ಟರ್ ವೈರಲ್ ಆಗುತ್ತಿದೆ. ಕಾರ್ಗತ್ತಲ ಕಾಡಿನ ಮಧ್ಯೆ ತರುಣ ಹಾಗೂ ತರುಣಿ ಇಬ್ಬರು ಪ್ರಣಯದ ಸನ್ನಿವೇಶದ ಪೋಸ್ಟರ್ ಇದಾಗಿದೆ. ಇನ್ನು ಗುಣಮಟ್ಟದ ತಂತ್ರಜ್ಞಾನದೊಂದಿಗೆ ಸಿನಿಮಾ ಮೂಡಿಬರುತ್ತಿದ್ದು, ಅದಕ್ಕಾಗಿ ಚಿತ್ರದಲ್ಲಿ ಎಐ (ಕೃತಕ ಬುದ್ಧಿಮತ್ತೆ) ಬಳಸಲು ಚಿತ್ರತಂಡ ಮುಂದಾಗುತ್ತಿದೆ. ‘ಕಾಲ ಕಾಲಕ್ಕೆ ಸಿನಿಮಾದಲ್ಲಿ ತಂತ್ರಜ್ಞಾನ ಬಳಕೆಯಾಗುತ್ತಲೇ ಬಂದಿದೆ. ಇದು ಎಐ (ಕೃತಕಬುದ್ಧಿಮತ್ತೆ) ಕಾಲ. ‘ಕೊರಗಜ್ಜ’ ಚಿತ್ರದಲ್ಲೂ ಎಐ ಬಳಕೆ ಮಾಡುತ್ತಿದ್ದೇವೆ. ಎರಡನೇ ಹಾಡು ಸಂಪೂರ್ಣವಾಗಿ ಎಐ ರೂಪದಲ್ಲಿ ಮೂಡಿಬರಲಿದ್ದು, ಚಿತ್ರದ ಕೆಲ ದೃಶ್ಯಗಳಿಗೂ ಬಳಕೆ ಮಾಡುತ್ತಿದ್ದೇವೆ. ಈ ಮೂಲಕ ‘ಕೊರಗಜ್ಜ’ ಚಿತ್ರದ ಫ್ಯಾಂಟಸಿ ಹೆಚ್ಚಿಸಲು ಇದು ಅನುಕೂಲವಾಗಲಿದೆ. ಅದಕ್ಕಾಗಿ ನುರಿತ ತಂಡವೇ ಕೆಲಸ ಮಾಡುತ್ತಿದೆ.
ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದಾಗ, ಎಐ ರೂಪದಲ್ಲಿಯೇ ಹಾಡು ಮಾಡಿ ಸ್ವಾಗತಕೋರಿದ್ದ ತಂಡವೇ ನಮ್ಮ ಚಿತ್ರಕ್ಕೆ ಎಐ ಕಾರ್ಯಗಳನ್ನು ಮಾಡುತ್ತಿದೆ. ಬಹುಕೋಟಿ ವೆಚ್ಚದಲ್ಲಿ ವಿಎಫ್ಎಕ್ಸ್ ಕಾರ್ಯಗಳನ್ನು ಮಾಡಲಾಗಿದ್ದು, ‘ಕೊರಗಜ್ಜ’ನ ದೃಶ್ಯವೈಭವ ಮತ್ತಷ್ಟು ಹೆಚ್ಚಲಿದೆ’ ಎಂದು ನಿರ್ದೇಶಕ ಸುಧೀರ್ ಅತ್ತಾವರ ಮಾಹಿತಿ ನೀಡುತ್ತಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಸುಧೀರ್, ‘ಕೇವಲ ಪೋಸ್ಟರ್ ನೋಡಿ ವಿರೋಧಿಸುವುದು ಸರಿಯಲ್ಲ. ಚಿತ್ರದ ಕಟೆಂಟ್‌ಗೆ ಅನುಗುಣವಾಗಿ ಆ ದೃಶ್ಯ ಇರಲಿದೆ. ಸಿನಿಮಾ ನೋಡಿದ ಮೇಲೆ ಈ ಅಭಿಪ್ರಾಯ ಬದಲಾಗಬಹುದು’ ಎನ್ನುತ್ತಾರೆ.
‘ಕೊರಗಜ್ಜ’ ಚಿತ್ರದಲ್ಲಿ ಬಹುತಾರಾಗಣವಿದ್ದು, ಬಾಲಿವುಡ್‌ನ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ನಟಿಯರಾದ ಶ್ರುತಿ, ಭವ್ಯಾ ನಟಿಸಿದ್ದಾರೆ. ಗೋಪಿ ಸುರೇಶ್ ಸಂಗೀತ, ಮನೋಜ್ ಪಿಳ್ಳೆ ವಿಶೇಷ ಕ್ಯಾಮರ್‌ಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಸಂಕ್ರಾಂತಿಗೆ ಕೊರಗಜ್ಜನ ದರ್ಶನ
ಸದ್ಯ ಪ್ರಚಾರದಲ್ಲಿರುವ ‘ಕೊರಗಜ್ಜ’ ಚಿತ್ರವು 2026ರ ಸಂಕ್ರಾಂತಿಗೆ ರಿಲೀಸ್ ಆಗುವುದು ಬಹುತೇಕ ಖಚಿತವಾಗಿದೆ. ‘ಜ.15ರಂದು ಸಿನಿಮಾವನ್ನು ಆರು ಭಾಷೆಯಲ್ಲಿ ರಿಲೀಸ್ ಮಾಡಲಿದ್ದೇವೆ. ಅದಕ್ಕೂ ಮುನ್ನ ಟ್ರೇಲರ್, ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಮುಂಬೈ, ಬೆಂಗಳೂರು ಸೇರಿ ವಿದೇಶದಲ್ಲಿ ಪ್ರೀಮಿಯರ್ ನಡೆಸಲಿದ್ದೇವೆ. ಸಮಾಜಮುಖಿ ಹಾದಿಯಲ್ಲಿ ‘ಕೊರಗಜ್ಜ’ ಚಿತ್ರವನ್ನು ತೆರೆ ಮೇಲೆ ಮೂಡಿಬರಲಿದೆ’ ಎಂದು ಸುಧೀರ್ ಅತ್ತಾವರ ಮಾಹಿತಿ ನೀಡುತ್ತಾರೆ.