Nenapugala Maathu Madhura -
ರೋಹಿತ್ (ಅಫ್ಜಲ್), ಅಭಿ (ವಸಿಷ್ಠ), ವಿಮಲ್ (ವಿನಯ್) ಮತ್ತು ಮನೋಜ್ (ರಣವೀರ್) ನಾಲ್ವರು ಬಾಲ್ಯದ ಗೆಳೆಯರು. ಕಾಲೇಜು ಶಿಕ್ಷಣದ ಬಳಿಕ ಬದುಕು ಕಟ್ಟಿಕೊಳ್ಳಲು ಒಬ್ಬೊಬ್ಬರು ಒಂದೊಂದು ಹಾದಿ ಹಿಡಿದು, ದೂರವಾಗಿರುತ್ತಾರೆ. ಕೆಲ ವರ್ಷಗಳ ಬಳಿಕ ನಾಲ್ವರೂ ಗೆಟ್ ಟುಗೆದರ್ ಪಾರ್ಟಿಗೆ ಪ್ಲ್ಯಾನ್ ಮಾಡಿಕೊಂಡು, ಒಂದು ರೆಸಾರ್ಟ್ ಸೇರುತ್ತಾರೆ. ಮದ್ಯದ ನಶೆಯಲ್ಲಿ ತೇಲುತ್ತಾ, ಕಾಲೇಜು ಬಳಿಕ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಒಬ್ಬೊಬ್ಬರಾಗಿ ಹೇಳಿಕೊಳ್ಳತೊಡಗುತ್ತಾರೆ. ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರುವ ಅಭಿ ಮನೆಯವರ ಒತ್ತಡಕ್ಕೆ ಮದುವೆಗೆ ಒಪ್ಪುತ್ತಾನೆ. ಒಡವೆ ಖರೀದಿಸಲು ಸಾಲ ಮಾಡುತ್ತಾನೆ. ಆದರೆ, ಮದುವೆಯಾಗಬೇಕಿದ್ದ ಹುಡುಗಿಯೇ ಓಡಿ ಹೋಗಿ, ಸಾಲಗಾರರ ಕಾಟಕ್ಕೆ ಒಳಗಾಗಿರುತ್ತಾನೆ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರುವ ವಿಮಲ್ ದಾರಿ ತಪ್ಪಿ, ಕೊಲೆ ಆರೋಪಕ್ಕೆ ತುತ್ತಾಗುತ್ತಾನೆ. ಕೆಲಸವಿಲ್ಲದೇ ಕಳ್ಳತನಕ್ಕಿಳಿಯುವ ಮನೋಜ್ ಕೂಡ ಇಲ್ಲದ ಸಂಕಷ್ಟಕ್ಕೆ ಸಿಲುಕುತ್ತಾನೆ. ಹಾಗೇ ಒಳ್ಳೆತನದಿಂದಲೇ ನಂಬಿಕೆ ಗಳಿಸುವ ರೋಹಿತ್ ಸಹ, ಹಾದಿ ತಪ್ಪಿ ನಂಬಿಕೆ ಕಳೆದುಕೊಳ್ಳುತ್ತಾನೆ. ಹೀಗೆ ತಮ್ಮದೇ ಸಮಸ್ಯೆಗಳಲ್ಲಿ ಸಿಲುಕಿರುವ ನಾಲ್ವರಿಗೂ ಒಂದು ಲಿಂಕ್ ಇರುತ್ತದೆ. ಅದೇನು? ಸಮಸ್ಯೆಗಳಿಂದ ಅವರು ಹೇಗೆ ಹೊರಬರುತ್ತಾರೆ? ಎಂಬುದೇ "ನೆನಪುಗಳ ಮಾತು ಮಧುರ' ಕಥೆ.
ಹೀಗೆ ಕಥೆ ಓದಲು, ಕೇಳಲು ಕುತೂಹಲ ಮೂಡಿಸುತ್ತದೆ. ಆದರೆ, ನೋಡಲು ಅಷ್ಟರ ಮಟ್ಟಿಗೆ ಥ್ರಿಲ್ ನೀಡುವುದಿಲ್ಲ. ಆಗಾಗ ಬರುವ ಸರಸ-ಸಲ್ಲಾಪದ ದೃಶ್ಯಗಳು, ವಿನಾ ಕಾರಣ ಎದುರಾಗುವ ಸ್ಲೋ ಮೋಷನ್ ಹಾಡುಗಳು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತವೆ. ನಟನೆಯಲ್ಲಿ ರಣವೀರ್, ವಸಿಷ್ಠ ಜತೆಗೆ ನಟಿಯರು ಓಕೆ. ಚಿತ್ರದ ಮತ್ತೊಂದು ಮೈನಸ್ ಹಿನ್ನೆಲೆ ಸಂಗೀತ. ಪೇಪರ್ನಲ್ಲಿ ಅದ್ಭುತವಾಗಿ ಕಾಣಿಸುವ ಕಥೆಗಳು, ಸಿನಿಮಾ ರೂಪ ಪಡೆದಾಗ ಬೇರೇನೋ ಆಗಿರುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಈ ಸಿನಿಮಾ. ಕೆಲ ಟ್ವಿಸ್ಟ್ಗಳು, ಸಂಭಾಷಣೆ ಚೆನ್ನಾಗಿವೆ. ಜತೆಗೆ ಸಮಾಜಕ್ಕೆ ಉತ್ತಮ ಸಂದೇಶಗಳು ಚಿತ್ರದಲ್ಲಿವೆ. ಹೊಸ ಪ್ರತಿಭೆಗಳ ಪ್ರಯತ್ನಕ್ಕೆ ಸಪೋರ್ಟ್ ಮಾಡಬೇಕು ಅಂತನ್ನಿಸಿದರೆ, ಈ ಸಿನಿಮಾ ನೋಡಬಹುದು.