ಬೆಂಗಳೂರು: ‘6-5=2’, ‘ದಿಯಾ’ ಖ್ಯಾತಿಯ ನಿರ್ದೇಶಕ ಕೆ.ಎಸ್.ಅಶೋಕ್ ಚಂದನವನಕ್ಕೆ ಮತ್ತೆ ಮರಳಿದ್ದಾರೆ. ಐದು ವರ್ಷಗಳ ಗ್ಯಾಪ್ ಬಳಿಕ ಹೊಸ ಸಿನಿಮಾ ಘೋಷಿಸಿದ್ದಾರೆ. ಚಿತ್ರಕ್ಕೆ ‘ಫ್ರೆಂಡ್ಸ್ ಆ್ಯಂಡ್ ಫ್ಯಾಮಿಲೀಸ್ ಎಂದು ಹೆಸರಿಡಲಾಗಿದೆ. ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ. ‘ದಿಯಾ’ ಬಳಿಕ ನಟರಾದ ಪೃಥ್ವಿ ಅಂಬಾರ್ ಮತ್ತು ದೀಕ್ಷಿತ್ ಶೆಟ್ಟಿ ಈ ಸಿನಿಮಾದ ಮೂಲಕ ಮತ್ತೆ ಒಂದಾಗಿರುವುದು ವಿಶೇಷ. ಅವರ ಜತೆ ಹೊಸ ಪ್ರತಿಭೆಗಳಾದ ನಿವೀನ್ ಮತ್ತು ಆಯೇಷಾ ಕಲಾ ಬಳಗದಲ್ಲಿದ್ದಾರೆ. ಪೃಥ್ವಿ ಅಂಬಾರ್, ‘ಜೀವನದಲ್ಲಿ ಕಷ್ಟವಿರಲಿ ಅಥವಾ ಸುಖವಿರಲಿ, ಜತೆಗಿರುವ ಸ್ನೇಹಿತರು ಮತ್ತು ಕುಟುಂಬವೇ ನಿಜವಾದ ಆಸ್ತಿ ಎಂಬುದನ್ನು ಈ ಸಿನಿಮಾ ಸಾರುತ್ತದೆ. ಅಶೋಕ್ ಅವರ ಮೊದಲ ದಿನದ ಗೆಳೆಯರು ಹಾಗೂ ತಂತ್ರಜ್ಞರ ಬಳಗ ಇಂದಿಗೂ ಬದಲಾಗದೆ ಜತೆಗಿರುವುದೇ ಅವರ ವ್ಯಕ್ತಿತ್ವಕ್ಕೆ ಸಾಕ್ಷಿ’ ಎಂದು ಖುಷಿ ಹಂಚಿಕೊಂಡರು. ನಟ ದೀಕ್ಷಿತ್ ಮಾತನಾಡಿ, ‘‘ದಿಯಾ’ ನನ್ನ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಕಥೆಗಿಂತ ಹೆಚ್ಚಾಗಿ ಅಶೋಕ್ ಮೇಲಿನ ನಂಬಿಕೆಯಿಂದ ಈ ಸಿನಿಮಾ ಒಪ್ಪಿಕೊಂಡೆ. ಕುಂದಾಪುರದ ನಾನು ಮತ್ತು ಮಂಗಳೂರಿನ ಪೃಥ್ವಿ ಈ ಚಿತ್ರಕ್ಕಾಗಿ ನಾಲ್ಕು ತಿಂಗಳು ವರ್ಕ್ಶಾಪ್ ಮಾಡಿ, ಸಂಪೂರ್ಣ ಮಂಡ್ಯ ಶೈಲಿಯ ಭಾಷೆಯನ್ನು ಕಲಿತು ನಟಿಸಿದ್ದೇವೆ. ಸೆಟ್ನಲ್ಲಿ ಸ್ಕ್ರಿಪ್ಟ್ ನೋಡದಷ್ಟು ಪೂರ್ವತಯಾರಿಯೊಂದಿಗೆ ಚಿತ್ರೀಕರಣ ನಡೆಸಿದ್ದೇವೆ’ ಎಂದರು. ಅಜನೀಶ್ ಲೋಕನಾಥ್ ಸಂಗೀತ, ಹೇಮಂತ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.
ಫ್ರೆಂಡ್ಸ್ ಆ್ಯಂಡ್ ಫ್ಯಾಮಿಲೀಸ್’ ಮೂವರು ಗೆಳೆಯರು ಮತ್ತು ಅವರ ಕುಟುಂಬಗಳ ಸುತ್ತ ನಡೆಯುವ ಕಥೆ. ‘ದಿಯಾ’ ಚಿತ್ರದ ನಾಯಕಿ ಪಾತ್ರಕ್ಕಿದ್ದಂತಹ ಭಾವನಾತ್ಮಕ ಪಯಣ ಈ ಚಿತ್ರದ ಮೂರು ಪ್ರಮುಖ ಪಾತ್ರಗಳಿರಲಿದೆ. ನನ್ನ ಹಿಂದಿನ ಸಿನಿಮಾಗಳಿಗಿಂತ ಹೆಚ್ಚು ಪ್ರಬುದ್ಧವಾದ ಕಥೆ ಹಾಗೂ ಪಾತ್ರಗಳ ಆಳವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಪ್ರತಿಯೊಬ್ಬ ಕಲಾವಿದರೂ ತಮ್ಮ ಕಂಫರ್ಟ್ ಜೋನ್ನಿಂದ ಹೊರಬಂದು ನೂರಕ್ಕೆ ನೂರರಷ್ಟು ಶ್ರಮ ಹಾಕಿದ್ದಾರೆ.ಕೆ.ಎಸ್. ಅಶೋಕ್, ನಿರ್ದೇಶಕ